ದಕ್ಷಿಣ ವಲಯ ಖೋಖೋ ಪಂದ್ಯಾವಳಿಗೆ ಚಾಲನೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 15
ಇಪ್ಪತ್ತಾರನೇಯ ರಾಷ್ಟ್ರೀಯ ಮಟ್ಟದ ದಕ್ಷಿಣ ವಲಯ ಅಂತರ್ ರಾಜ್ಯಗಳ ಪುರುಷ ಹಾಗೂ ಮಹಿಳೆಯರ ಹೊನಲು ಬೆಳಕಿನ ಖೋಖೋ ಪಂದ್ಯಾವಳಿಗೆ ಶುಕ್ರವಾರ ನವಲಗುಂದದ ಶ್ರೀ ಶಂಕರ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.
ಮೂರು ದಿನಗಳ ಕಾಲ ನಡೆಯಲಿರುವ ಈ ಪಂದ್ಯಾವಳಿಗೆ ಮೂಲ ಸೌಕರ್ಯ ಮತ್ತು ವಾರ್ತಾ ಇಲಾಖೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕ್ರೀಡಾ ಧ್ವಜಾರೋಹಣ ನೆರವೇರಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಗ್ರಾಮೀಣ ಕ್ರೀಡೆಗಳು ಇತ್ತೀಚಿನ ದಿನಗಳಲ್ಲಿ ನಶಿಸುತ್ತಿರುವುದು ನೋವಿನ ಸಂಗತಿ. ಶ್ರೀ ಶಂಕರ ಸ್ಪೋರ್ಟ್ಸ್ ಕ್ಲಬ್ ಹಾಗೂ ಯುನಿವರ್ಸಲ್ ಕ್ಲಬ್ಗಳು ಹಳ್ಳಿ ಕ್ರೀಡೆಗಳನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ 3 ದಿನಗಳ ಕಾಲ ಈ ಪಂದ್ಯಾವಳಿ ಏರ್ಪಡಿಸಿದ್ದು ನಿಜಕ್ಕೂ ಸ್ವಾಗತಾರ್ಹವೆಂದರು.
ದೇಶಿಯ ಕ್ರೀಡಾ ಪಂದ್ಯಾವಳಿಗಳನ್ನು ಹೆಚ್ಚೆಚ್ಚು ಏರ್ಪಡಿಸುವಂತೆ ವಿನಂತಿಸಿಕೊಂಡ ಅವರು, ಇಂತಹ ಎಲ್ಲ ಕಾರ್ಯಗಳಿಗೆ ತಾವೂ ಸಹಾ ಕಾರ್ಯಕರ್ತನಂತೆ ಭಾಗವಹಿಸಿ ದುಡಿಯಲು ಸಿದ್ಧ ಎಂದರು.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಗ್ರಾಮೀಣ ಕ್ರೀಡೆಗಳಿಗೆ ಇತ್ತೀಚಿನ ದಿನಗಳಲ್ಲಿ ಮಹತ್ವ ಕಡಿಮೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಶ್ರೀ ಶಂಕರ ಸ್ಪೋಟ್ಸ್ ಕ್ಲಬ್ ಹಾಗೂ ಯುನಿವರ್ಸಲ್ ಕ್ಲಬ್ಗಳು ಖೋಖೋ ಪಂದ್ಯಾವಳಿ ಏರ್ಪಡಿಸುವ ಮೂಲಕ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ-ಬೆಳೆಸುವ ಕಾರ್ಯಕ್ಕೆ ಮುಂದಾಗಿವೆ ಎಂದು ಬಣ್ಣಿಸಿದರು.
ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ, ನವಲಗುಂದ ಕ್ಷೇತ್ರದ 430 ವಿದ್ಯಾರ್ಥಿಗಳು ಇತ್ತೀಚಿಗೆ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಹೆಮ್ಮೆಯಿಂದ ನುಡಿದರು.
ರಾಷ್ಟ್ರೀಯ ವಲಯ ಮಟ್ಟದ ಪಂದ್ಯಾವಳಿಗಳು ನಡೆಯಲು ಅನುಕೂಲವಾಗುವಂತೆ ಕ್ರೀಂಡಾಗಣಕ್ಕೆ ಜಮೀನು ದಾನ ಮಾಡಿದ ಮಹನೀಯರು ಸೇರಿದಂತೆ ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಎಲ್ಲ ಕ್ರೀಡಾ ಪ್ರೇಮಿಗಳು ತಾವು ಈ ಸಂದರ್ಭ ಅಭಿನಂದನೆ ತಿಳಿಸಲು ಹರ್ಷ ಎನಿಸುತ್ತಿದೆ ಎಂದೂ ಕೋನರೆಡ್ಡಿ ಹೇಳಿದರು.
ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳಿಗೆ ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರದರ್ಶಿಸಲು ಈ ಕ್ರೀಂಡಾಗಣ ಅತ್ಯುತ್ತಮ ವೇದಿಕೆಯಾಗಲಿದೆ ಎಂದ ಅವರು, ಇಡೀ ನವಲಗುಂದ ಕ್ಷೇತ್ರದ ಅಭಿವೃದ್ಧಿಗೆ ಒಗ್ಗಟ್ಟಾಗಿ ಶ್ರಮಿಸುವುದಾಗಿ ಹೇಳಿದರು.
ಇದಕ್ಕೂ ಮೊದಲು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕ್ರೀಡಾಂಗಣದ ಉದ್ಘಾಟನೆ ನೆರವೇರಿಸಿದರು. ರಾಷ್ಟ್ರೀಯ ಮಟ್ಟದ ದಕ್ಷಿಣ ವಲಯ ಅಂತರ ರಾಜ್ಯಗಳ ಪುರುಷ ಹಾಗೂ ಮಹಿಳೆಯರ ಈ ಪಂದ್ಯಾವಳಿಯಲ್ಲಿ ಕರ್ನಾಟಕ, ಕೇರಳ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ತಂಡಗಳು ಭಾಗವಹಿಸಿದ್ದವು.
ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಧಾರವಾಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಚ್.ವಿ. ಮಾಡೊಳ್ಳಿ, ಹಿರಿಯ ಪತ್ರಕರ್ತ ಗೋಪಾಲಕೃಷ್ಣ ಹೆಗಡೆ, ಜಿಪಂ ಮಾಜಿ ಅಧ್ಯಕ್ಷ ಸುಭಾಸ ದ್ಯಾಮಕ್ಕನವರ, ಲೋಕನಾಥ ಹೆಬಸೂರ, ಚಂದ್ರಶೇಖರ ದಾಡಿಬಾಯಿ, ಆರ್.ಎನ್. ಧಾರವಾಡ, ಆರ್.ಎಚ್. ಕೋನರೆಡ್ಡಿ, ವೆಂಕಣ್ಣ ಕರಡಿ, ಬಿ.ಸಿ. ಪೂಜಾರ, ಮಂಜು ಜಾಧವ, ಅಪ್ಪಣ ಹಳ್ಳದ, ಇಸ್ಮಾಯಿಲ್ ತಮಟಗಾರ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. ಐ.ಎಸ್. ಪೂಜಾರ ಪ್ರಾಸ್ತಾವಿಕ ಮಾತನಾಡಿದರು.
ನವಲಗುಂದ ಶ್ರೀ ಶಂಕರ ಸ್ಪೋರ್ಟ್ಸ್ ಕ್ಲಬ್, ಯುನಿವರ್ಸಲ್ ಕ್ಲಬ್, ಧಾರವಾಡ ಜಿಲ್ಲಾ ಖೋ ಖೋ ಅಸೋಸಿಯೇಶನ್, ಕರ್ನಾಟಕ ಖೋ ಖೋ ಅಸೋಸಿಯೇಶನ್ ಹಾಗೂ ಇಂಡಿಯನ್ ಖೋ ಖೋ ಅಸೋಸಿಯೇಶನ್ ಸಂಯುಕ್ತಾಶ್ರಯದಲ್ಲಿ ಈ ಪಂದ್ಯಾವಳಿ ಏರ್ಪಡಿಸಲಾಗಿದೆ.
ಕಿಕ್ಕಿರಿದ ಜನತೆ: ನವಲಗುಂದ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದ ದಕ್ಷಿಣ ವಲಯ ಅಂತರ ರಾಜ್ಯಗಳ ಪುರುಷ ಹಾಗೂ ಮಹಿಳೆಯರ ಹೊನಲು ಬೆಳಕಿನ ಖೋ ಖೋ ಪಂದ್ಯಾವಳಿಗೆ ತಾಲೂಕಿನ ವಿವಿಧ ಗ್ರಾಮ ಹಾಗೂ ಹಳ್ಳಿಗಳಿಂದ ನೂರಾರು ಸಂಖ್ಯೆಯಲ್ಲಿ ಕ್ರೀಡಾಪ್ರೇಮಿಗಳು ಕ್ರೀಡಾಂಗಣಕ್ಕೆ ಆಗಮಿಸಿದ್ದರು.
ವಿವಿಧ ರಾಜ್ಯಗಳ ತಂಡಗಳ ಪ್ರದರ್ಶನ ವೀಕ್ಷಿಸಲು ತುದಿಗಾಲ ಮೇಲೆ ನಿಂತಿದ್ದ ಪ್ರೇಕ್ಷಕರು, ಕೊರೆಯುವ ಚಳಿಯನ್ನು ಲೆಕ್ಕಿಸದೇ ವಿವಿಧ ರಾಜ್ಯಗಳ ತಂಡಗಳ ಪ್ರದರ್ಶನದ ಸವಿ ಸವಿದರು.