ಪೀರಲ ದೇವರಮೆರವಣಿಗೆ:ಕಿಡಿಗೇಡಿಗಳ ಅಟಾಟೋಪ
ಕುಂದಗೋಳ: ಮೊಹರಂ ನಿಮಿತ್ತ ಕತ್ತಲ ರಾತ್ರಿದಿನ ಪಟ್ಟಣದಲ್ಲಿ ನಡೆದ ಪೀರಲ ದೇವರ ಮೆರವಣಿಗೆ ವೇಳೆ ನಸುಕಿನ ವೇಳೆ ಕಿಡಗೇಡಿಗಳ ಗುಂಪು ನಾಡಿಗೇರ ವಾಡೆಯಿಂದ ಗಾಂಧಿ ವೃತ್ತದವರೆಗೆ ಬೀದಿ ದೀಪಗಳನ್ನು ಒಡೆದಿದ್ದು, ಮನೆಗಳ ಮುಂದಿನ ಆಕಾಶ ಬುಟ್ಟಿಗಳನ್ನು ಕಿತ್ತು ಎಸೆದಿದ್ದಾರೆ.
ಗುರುವಾರ ಹಿಂದೂ ಮುಸ್ಲಿಂ ಭಾವೈಕ್ಯತಾ ಹಬ್ಬವಾದ ಮೊಹರಂ ಒಂದೆಡೆಯಾದರೆ, ಇನ್ನೊಂದೆಡೆ ತುಳಸಿ ಲಗ್ನ ಪೂಜೆಗೆ ಮಾಡಿದ ಅಲಂಕಾರ ವಸ್ತುಗಳಾದ ಆಕಾಶ ಬುಟ್ಟಿ, ಲೈಟಿನ ಸರ, ಟ್ಯುಬ್‌ಲೈಟ್ ಇತ್ಯಾದಿ ವಸ್ತುಗಳನ್ನು ಸಹ ಹಾಳು ಮಾಡಿದ್ದಾರೆ. ಅಲ್ಲದೆ ಕೆಲ ಮನೆಗಳ ಹೊರಗಿನ ಚಿಲಕಗಳನ್ನ ಹಾಕಿ ಜನರನ್ನು ಭಯ ಭೀತಿಗೊಳಿಸಿದ್ದಾರೆ. ಬೀದಿ ದೀಪಗಳನ್ನು ಒಡೆದು ಹಾಕಿ ಅಂಗಡಿಗಳ ಮುಂದೆ ಇರುವ ಉಪ್ಪಿನ ಚೀಲಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಈ ಕೃತ್ಯದಲ್ಲಿ 15-20 ಯುವಕರ ಗುಂಪೊಂದು ತೊಡಗಿದ್ದನ್ನು ಕೆಲ ನಾಗರಿಕರು ನೋಡಿದ್ದಾರೆ. ಇಂತಹ ಹಬ್ಬಗಳ ಆಚರಣೆಯಲ್ಲಿ ಪೊಲೀಸ್ ಇಲಾಖೆ ಸರಿಯಾಗಿ ಕಾರ್ಯನಿರ್ವಹಿಸಿ ಸೂಕ್ತ ಬಂದೋಬಸ್ತ್ ಮಾಡಬೇಕು ಮತ್ತು ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದು ಜನತೆ ಆಗ್ರಹಿಸಿದ್ದಾರೆ.
ಈ ಕುರಿತು ಕುಂದಗೋಳ ಸಿಪಿಐ ಮುತ್ತಪ್ಪ ಪಾಟೀಲ್ ಅವರನ್ನು 'ಕನ್ನಡಪ್ರಭ' ಮಾತನಾಡಿಸಿದಾಗ, ಇಂಥ ಯಾವುದೇ ಘಟನೆ ನಡೆದಿರುವುದು ನನ್ನ ಗಮನಕ್ಕೆ ಬಂದಿಲ್ಲ ಹಾಗೂ ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.