ರಾಮಾಯಣ ನೈತಿಕತೆ ಸಾರುವ ಕೃತಿ
ಧಾರವಾಡ: ಮಹರ್ಷಿ ವಾಲ್ಮೀಕಿಯವರ ಜೀವನಶೈಲಿ, ಅನುಸರಿಸಿದ ಮಾರ್ಗ ಸಮಾಜಕ್ಕೆ ಮಾದರಿ. ಅವರು ರಚಿಸಿದ ರಾಮಾಯಾಣ ಮಹಾಕಾವ್ಯ ಇಡೀ ಜಗತ್ತಿಗೆ ಅನುಕರಣೀಯ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಇಲ್ಲಿಗೆ ಸಮೀಪದ ಎತ್ತಿನಗುಡ್ಡ ಗ್ರಾಮದಲ್ಲಿ ಶುಕ್ರವಾರ ಮಹರ್ಷಿ ವಾಲ್ಮೀಕಿ ದೇವಸ್ಥಾನದ ಅಡಿಗಲ್ಲು ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ವಾಲ್ಮೀಕಿಯವರು ಬೇಡ ಜನಾಂಗದಲ್ಲಿ ಜನಿಸಿ ಬೇಟೆಗಾರನಾಗಿ ತಿರುಗುತ್ತಿದ್ದಾಗ ನಾರದ ಮುನಿಗಳ ದರ್ಶನವಾಯಿತು. ಅವರ ಉಪದೇಶದಂತೆ ತಪಸ್ಸು ಮಾಡಿ ಸನ್ಯಾಸಿ ಜೀವನ ರೂಪಿಸಿಕೊಂಡು ಮಹರ್ಷಿಯಾದರು. ಅವರು ರಚಿಸಿದ ರಾಮಾಯಣವು ದೇಶಕ್ಕೆ ಅದ್ವಿತೀಯ ಕೊಡುಗೆಯಾಗಿದ್ದು ಸರ್ವ ಕಾಲಕ್ಕೂ ನೈತಿಕತೆಯನ್ನು ಸಾರುವ ಮೇರು ಕೃತಿ ಎಂದರು.
ವ್ಯಕ್ತಿಯ ವಿಕಸನಕ್ಕೆ ಜೀವನದಲ್ಲಿ ನಡೆಯುವ ಘಟನೆಗಳು ಅವರ ಜೀವನ ಪರಿವರ್ತನೆಗೆ ಪ್ರಮುಖ ಪಾತ್ರವಹಿಸುತ್ತವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮಹಾತ್ಮರ ತತ್ವಾದರ್ಶ, ಗುಣ ಮತ್ತು ಸಿದ್ದಾಂತಗಳನ್ನು ಅಳವಡಿಸಿಕೊಂಡು ಜೀವನ ನಡೆಸಬೇಕು. ಎತ್ತಿನಗುಡ್ಡ ಗ್ರಾಮದಲ್ಲಿ ಮಹರ್ಷಿಯವರ ದೇವಸ್ಥಾನ ನಿರ್ಮಾಣ ಕಾರ್ಯ ಮಾಡುತ್ತಿರುವ ಪಾಲಿಕೆ ಸದಸ್ಯ ಶ್ರೀಕಾಂತ ಅವರ ಕಾರ್ಯ ಶ್ಲಾಘನೀಯ ಎಂದರು.
ಶ್ರೀಕಾಂತ ಜಮನಾಳ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಎನ್.ಎಚ್. ಕೋನರಡ್ಡಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಸುಭಾಸ ಶಿಂಧೆ, ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ, ಜೆಡಿಎಸ್ ಮುಖಂಡ ಇಸ್ಮಾಯಿಲ್ ತಮಟಗಾರ, ಮೋಹನ ಅರ್ಕಸಾಲಿ, ಸಲೀಂಖಾನ ಪಠಾಣ ಇದ್ದರು. ಮೋಹನ ಅರ್ಕಸಾಲಿ ನಿರೂಪಿಸಿದರು. ರಾಜೇಂದ್ರ ಗಾಮನಗಟ್ಟಿ ಸ್ವಾಗತಿಸಿದರು.