ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಸಕ್ಕೆ ಮುಕ್ತಿ ಕಾಣಿಸಿ ಮಾನ ಕಾಪಾಡಿ

Lingaraj Badiger
Updated On : 18 Nov 2013, 10:46 am

ಹುಬ್ಬಳ್ಳಿ: ಕೋಯಿನ್ ರಸ್ತೆ ಹುಬ್ಬಳ್ಳಿಯ ಹೃದಯ ಭಾಗದಲ್ಲಿದೆ. ನಗರದ ಜನನಿಬಿಡ ಪ್ರದೇಶಗಳಲ್ಲಿ ಇದೂ ಒಂದು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿಗೆ ಕೂಗಳತೆ ದೂರದಲ್ಲಿರುವ ಸ್ಥಳವಿದು. ಹುಬ್ಬಳ್ಳಿ ಆಸುಪಾಸಿನ ಜಿಲ್ಲೆಯಿಂದ ಖರೀದಿಗಾಗಿ ಬಂದವರು ಈ ರಸ್ತೆಯಲ್ಲಿ ಹಾದು ಹೋಗೇ ಹೋಗುತ್ತಾರೆ. ಇಂಥ ಪ್ರಮುಖ ರಸ್ತೆಗೆ ಬಂದವರಿಗೆ ದಿನನಿತ್ಯ ರಾಶಿ ರಾಶಿ ಕಸದ ದರ್ಶನವಾಗುತ್ತದೆ.  ಕಳೆದ ಹಲವು ದಿನಗಳಿಂದ ಪಾಲಿಕೆಯ ಪೌರ ಕಾರ್ಮಿಕರು ಕಸತೊಟ್ಟಿಯಿಂದ ಕಸ ತೆಗೆದುಕೊಂಡು ಹೋಗದಿರುವುದರಿಂದ ಈ ರಸ್ತೆಯಲ್ಲಿ ಓಡಾಡುವುದೇ ದುಸ್ತರವಾಗಿದೆ. ಕಸದ ತೊಟ್ಟಿ ತುಂಬಿಕೊಂಡಿರುವುದರಿಂದ, ತೊಟ್ಟಿಯ ಪಕ್ಕದ ರಸ್ತೆಯಲ್ಲಿಯೇ ಜನ ಕಸ ಹಾಕಿ ಕೈತೊಳೆದುಕೊಂಡಿದ್ದಾರೆ. ಇನ್ನೇನು ಮಾಡಲು ಸಾಧ್ಯ? ಕಸ ವಿಲೇಮಾರಿ ಮಾಡದೇ ಇರುವುದರಿಂದ ದುರ್ನಾತ ಬೀರುತ್ತಿದೆ. ಈ ಬಗ್ಗೆ ಪಾಲಿಕೆಯ ಕಂಟ್ರೋಲ್ ರೂಮ್‌ಗೆ ದೂರಿದರೂ ಅಧಿಕಾರಿಗಳು ನಿಗಾ ವಹಿಸಿಲ್ಲ. ಕಸ ಬಿದ್ದಿರುವುದರಿಂದ ಇಲ್ಲಿನ ಅಂಗಡಿಗಳತ್ತ ಬರಲು ಜನ ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳು ಇನ್ನಾದರೂ ಕಸ ವಿಲೇವಾರಿ ಮಾಡಿ ಪರ ಊರಿನಿಂದ ಬರುವವರ ಮುಂದೆ ಹುಬ್ಬಳ್ಳಿಯ ಮಾನ ಕಾಪಾಡಿ ಪುಣ್ಯ ಕಟ್ಟಿಕೊಳ್ಳುವರೇ?
- ಗಣು ಜರತಾರಘರ,ಹುಬ್ಬಳ್ಳಿ


ಅಂಡರ್ ಪಾಸ್‌ಗೆ ಬೇಕಿದೆ ರಸ್ತೆ
ಹುಬ್ಬಳ್ಳಿ: ಬೆಳಗ್ಗೆ 6ರಿಂದ ಹತ್ತರವರೆಗೆ ಕನಿಷ್ಠ ಏನಿಲ್ಲವೆಂದರೂ ಹನ್ನೊಂದಕ್ಕೂ ಹೆಚ್ಚು ರೈಲುಗಳು ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸುತ್ತವೆ ಇಲ್ಲವೇ ನಿಲ್ದಾಣದಿಂದ ತೆರಳುತ್ತವೆ. ಪದೇಪದೇ ಸಾಯಿನಗರ-ಸುಳ್ಳ ರಸ್ತೆ ಮಧ್ಯೆ ಇರುವ ರೇಲ್ವೆ ಗೇಟ್ ಹಾಕುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದರೆ, ಇನ್ನೊಂದು ವಿಷಯ ಎಂದರೆ ಲಘು ವಾಹನಗಳ ಸಂಚಾರಕ್ಕೆ ನಿರ್ಮಿಸಿರುವ ರೇಲ್ವೆ ಅಂಡರ್‌ಪಾಸ್ ಉಪಯೋಗಕ್ಕೆ ಬಾರದಂತಾಗಿದೆ. ಅಂಡರ್ ಪಾಸ್ ಏನೋ ನಿರ್ಮಿಸಲಾಗಿದೆ ಆದರೆ ರಸ್ತೆಯೇ ಇಲ್ಲ. ಹೀಗಾಗಿ ಅನಿವಾರ್ಯವಾಗಿ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಅಂಡರ್ ಪಾಸ್ ಉಪಯೋಗಿಸಲಿಕ್ಕಾಗದೇ ರೇಲ್ವೆ ಗೇಟ್ ತೆರೆಯುವುದನ್ನು ಕಾಯುತ್ತ ನಿಲ್ಲುತ್ತವೆ. ಮೊದಲು ರೇಲ್ವೆ ದಾಟಿದ ನಂತರ ಗೇಟ್‌ಮನ್ ತಕ್ಷಣ ಗೇಟ್ ತೆಗೆಯುತ್ತಿದ್ದರು. ಆದರೆ, ರೇಲ್ವೆ ಸುರಕ್ಷಾ ದೃಷ್ಟಿಯಿಂದ ಅಳವಡಿಸಿಕೊಂಡಿರುವ ನೂತನ ತಾಂತ್ರಿಕತೆ ಸ್ವಯಂ ಚಾಲಿತವಾಗಿದ್ದು, ಮುಂದಿನ ರೇಲ್ವೆ ಗೇಟ್ ತಲುಪುವವರೆಗೆ ಹಾಕಿರುವ ರೇಲ್ವೆ ಗೇಟ್ ತೆರೆಯಲು ಬರುವುದಿಲ್ಲ. ಸಾಯಿನಗರ, ಉಣಕಲ್ ಪ್ರದೇಶದ ಹಲವಾರು ರೈತರ ಹೊಲಗಳು ಸುಳ್ಳ ಮಾರ್ಗದಲ್ಲಿ ಇದ್ದು, ರೈತಾಪಿ ವರ್ಗ ಪ್ರತಿದಿನ ಟ್ರ್ಯಾಕ್ಟರ್, ಚಕ್ಕಡಿಗಳಲ್ಲಿ ತಮ್ಮ ಹೊಲಗಳಿಗೆ ಹೋಗುವುದು ಸಾಮಾನ್ಯ. ಇದರ ಜೊತೆಗೆ ಪಕ್ಕದ ಫಾರೆಸ್ಟ್ ಕಾಲೋನಿ, ಜೆ.ಕೆ. ಸ್ಕೂಲ್ ಹತ್ತಿರದ ನಿವಾಸಿಗಳು ಧಾರವಾಡದತ್ತ ಹೋಗಬೇಕಾದರೆ ಇದೇ ಮಾರ್ಗ ಬಳಸುತ್ತಾರೆ. ರೈಲು ಬರುವ ಹತ್ತು ನಿಮಿಷ ಮೊದಲು ರೇಲ್ವೆ ಗೇಟ್ ಹಾಕುತ್ತಾರೆ ಇದರ ಜೊತೆಗೆ ರೇಲ್ವೆ ದಾಟಿದ ಬಳಿಕ ಕನಿಷ್ಠ ಐದು ನಿಮಿಷಗಳವರೆಗಾದರೂ ಗೇಟ್ ತೆಗೆಯುವುದಕ್ಕೆ ಕಾಯಬೇಕು. ಸಾಯಿನಗರ ಬಳಿ ನಿರ್ಮಿಸಿರುವ ರೇಲ್ವೆ ಅಂಡರ್ ಪಾಸ್‌ಗೆ ಉತ್ತಮ ರಸ್ತೆ ನಿರ್ಮಿಸಿದರೆ ಕನಿಷ್ಠ ದ್ವಿಚಕ್ರ ಮತ್ತು ಲಘು ವಾಹನಗಳಾದರೂ ಗೇಟ್ ತೆರೆಯುವುದಕ್ಕೆ ಕಾಯದೇ ಅಂಡರ್‌ಪಾಸ್ ಮುಖಾಂತರ ಸಾಗಬಹುದು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆ ಅಥವಾ ಪಾಲಿಕೆ ಎಚ್ಚೆತ್ತುಕೊಂಡು ಹೂಳು, ರಾಡಿ ಸೇರಿ ಹಾಳಾಗಿರುವ ರಸ್ತೆ ಸರಿಮಾಡುವರೆ?
- ಸಿದ್ದು ಕಬಾಡಗಿ, ಸಾಯಿನಗರ ನಿವಾಸಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement