ಹಳ್ಳಿಗರನ್ನು ಮುಖ್ಯವಾಹಿನಿಗೆ ತನ್ನಿ
ಧಾರವಾಡ: ಗ್ರಾಮೀಣ ಪ್ರದೇಶದಲ್ಲಿ ರೈತ ಸಮುದಾಯ ಹಾಗೂ ಇತರ ಗ್ರಾಮೀಣ ಜನರ ಆರ್ಥಿಕ ಸ್ಥಿತಿಗತಿಯನ್ನು ಉತ್ತಮಪಡಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವುದೇ ಸಹಕಾರ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯ ಆಶಯ ಎಂದು ಶಾಸಕ ಎನ್.ಎಚ್. ಕೋನರೆಡ್ಡಿ ಹೇಳಿದರು.
60ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಶನಿವಾರ ಕೆಲಗೇರಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು-ಸಹಕಾರಿ ಸಂಸ್ಥೆಗಳ ನಡುವೆ ಸಮನ್ವಯ ಮತ್ತು ಆಹಾರ ಭದ್ರತೆ ಆಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಈ ಎರಡೂ ವ್ಯವಸ್ಥೆಗಳು ಪರಸ್ಪರ ಪೂರಕ ಮತ್ತು ಪೋಷಕವಾಗಿ ಸಮನ್ವಯದೊಂದಿಗೆ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದರು.
ಪಾಲಿಕೆಯ ಮಾಜಿ ಮಹಾಪೌರರಾದ ಪೂರ್ಣಾ ಪಾಟೀಲ ಮಾತನಾಡಿದರು. ಕೆಲಗೇರಿ ಶ್ರೀ ಶಿವಶಕ್ತಿ ಮಹಿಳಾ ವಿವಿಧೋದ್ದೇಶಗಳ ಸಹಕಾರ ಸಂಘದ ಅಧ್ಯಕ್ಷ ವಿಜಯಲಕ್ಷ್ಮಿ ಲೂತಿಮಠ ಮಾತನಾಡಿದರು.
ಪಾಲಿಕೆಯ ಸದಸ್ಯರಾದ ಕಾತುನಬಿ ತಮಟಗಾರ, ಐ.ಎಸ್. ಪಾಟೀಲ, ಮಹೇಶ ಗೊರಾಬಾಳ, ಪಿ.ಪಿ. ಗಾಯಕವಾಡ ಇದ್ದರು.