ಕಸ ವಿಲೇವಾರಿ ನಗರಸಭೆಗಳ ಕರ್ತವ್ಯ
ಕನ್ನಡಪ್ರಭ ವಾರ್ತೆ, ಧಾರವಾಡ, ನ. 18
ಕಸ ನಿರ್ವಹಣೆ ಮತ್ತು ವಿಲೇವಾರಿ ನಗರ ಸಭೆಗಳ ಶಾಸನ ಬದ್ಧ ಕರ್ತವ್ಯ. ಈ ದಿಶೆಯಲ್ಲಿ ಕಾರ್ಯನಿರ್ವಹಿಸುವಲ್ಲಿ ನಗರ ಸಭೆಗಳು ವಿಫಲವಾದರೆ ಅವುಗಳು ಕಾನೂನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಕಾರ್ಮಿಕ ಮುಖಂಡ ಪ್ರೊ. ಕೆ.ಎಸ್. ಶರ್ಮಾ ಹೇಳಿದರು.
ಧಾರವಾಡ-ಹುಬ್ಬಳ್ಳಿ ಮಹಾನಗರ ಸಮಗ್ರ ಅಭಿವೃದ್ಧಿ ಸಂಘ ಮತ್ತು ಇನ್ನಿತರ ಸಂಘಟನೆಗಳ ಜಂಟಿ ಹೋರಾಟ ಸಮಿತಿ ಆಶ್ರಯದಲ್ಲಿ ಇಲ್ಲಿಯ ಕೆಪಿಇಎಸ್ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 'ಕಸ ಮುಕ್ತ ಮಹಾನಗರ ಒಂದು ಕ್ರಿಯಾತ್ಮಕ ಚಿಂತನೆ' ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಹಿರಿಯ ಕಾರ್ಮಿಕ ಧುರೀಣ ಎಂ.ಕೆ. ದೇಶಪಾಂಡೆ ಮಾತನಾಡಿ, ನೀರು ಮತ್ತು ಸ್ವಚ್ಛತೆ ಮಾನವನ ಹಕ್ಕು. ಇದು ಸಂಯುಕ್ತ ರಾಷ್ಟ್ರ ಸಂಸ್ಥೆಯ ಆದೇಶ. ಈ ವಿಷಯವಾಗಿ ನಗರ ಸಭೆಗಳ ನಿಷ್ಕ್ರೀಯತೆ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸ್ವಯಂ ಸೇವಾ ಸಂಸ್ಥೆಗಳು ಮತ್ತು ನಗರಸಭೆ ಸದಸ್ಯರೊಳಗೂಡಿ ಕಸ ಮುಕ್ತ ಮಹಾನಗರ ನಿರ್ಮಿಸಲು ಸ್ವಯಂ ಪ್ರೇರಿತರಾಗಿ ಮುಂದಾಗಬೇಕು ಎಂದು ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಸಲಹೆ ನೀಡಿದರು.
ವಿಚಾರ ಸಂಕಿರಣದಲ್ಲಿ ಹಿರಿಯ ನ್ಯಾಯವಾಗಿ ಬಿ.ವಿ. ಸೋಮಾಪುರ, ಧಾ-ಹು ಮಹಾನಗರ ಸಮಗ್ರ ಅಭಿವೃದ್ಧಿ ಸಂಘದ ಅಧ್ಯಕ್ಷ ವಿಠ್ಠಲ ಕಮ್ಮಾರ, ಸಾಮಾಜಿಕ ನ್ಯಾಯ ವೇದಿಕೆಯ ಅಧ್ಯಕ್ಷ ಮಹಾದೇವ ಹೊರಟ್ಟಿ ಮಾತನಾಡಿದರು.
ನಾಗರಿಕರ ಆಯೋಗದ ಮತ್ತು ಉತ್ತಮ ಪರಿಸರ ನಿರ್ವಹಿಸುವಲ್ಲಿ ಕಸಮುಕ್ತ ಮಹಾನಗರಕ್ಕಾಗಿ ತ್ವರಿತವಾಗಿ ಕಾರ್ಯ ಪ್ರವೃತ್ತರಾಗಬೇಕೆಂದು ಸರ್ಕಾರ ಹು-ಧಾ ಮಹಾನಗರ ಪಾಲಿಕೆಗೆ ಆದೇಶಿಸಬೇಕೆಂದು ಒತ್ತಾಯಿಸುವ ಪತ್ರಕ್ಕೆ ಸಭೆಯಲ್ಲಿ ಭಾಗವಹಿಸಿದವರು ಸಹಿ ಹಾಕಿದರು. ಪತ್ರ ಚಳವಳಿಯಿಂದ ಒಂದು ಲಕ್ಷ ಜನರ ಸಹಿ ಸಂಗ್ರಹಿಸಿ ಮುಖ್ಯಮಂತ್ರಿ, ನಗಾಭಿವೃದ್ಧಿ ಸಚಿವರು, ಧಾರವಾಡ ಜಿಲ್ಲಾಧಿಕಾರಿ ಮತ್ತು ಹು-ಧಾ ಮಹಾನಗರ ಪಾಲಿಕೆ ಆಯುಕ್ತರಿಗೆ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಲಿಂಗರಾಜ ಅಂಗಡಿ, ಪ್ರೊ. ಕೃಷ್ಣ ಸಿದ್ಧಾಂತಿ, ರೈತ ನಾಯಕ ಬಿ.ಎಸ್. ಸೊಪ್ಪಿನ, ಪ್ರೊ. ಉಮಾಪತಿ, ಸುಮಿತ್ರಾ ರಾಯ್ಕರ, ಈಶ್ವರ ಪಟ್ಟಣಶೆಟ್ಟಿ, ಮಂಜುನಾಥ ಭೊವಿ, ವಿ.ಬಿ. ಅಣ್ಣಿಗೇರಿ, ಎಸ್.ಸಿ. ನೀರಾವರಿ, ಮಂಜುನಾಥ ಮೊಹರೆ, ವೈ.ಕೆ. ಮೇಲ್ಮನೆ, ಗಿರಿಜಾ ಮೆಳ್ಳಿ, ಕೆ.ವಿ. ಬಡಿಗೇರ, ಎಲ್.ಜಿ. ಬಡಿಗೇರ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಜಿ.ಎಸ್. ಬ್ಯಾಡಗಿ ಸ್ವಾಗತಿಸಿದರು. ಎಂ.ಬಿ. ಕಟ್ಟಿ ನಿರೂಪಿಸಿದರು. ಬಿ.ಎಂ. ಸುರಗೊಂಡ ವಂದಿಸಿದರು.