ಬೇಡಿಕೆ ಈಡೇರಿಸಿ: ಅಲೆಮಾರಿಗಳ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಧಾರವಾಡ, ನ.18
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ಹಿಂದುಳಿದ ವರ್ಗಗಳ ಅಲೆಮಾರಿ, ಅರೆ ಅಲೆಮಾರಿ ವಿಮುಕ್ತ ಸಮುದಾಯಗಳ ಒಕ್ಕೂಟದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.
ಕಲಾಭವನದಿಂದ ಮೆರವಣಿಗೆಯಲ್ಲಿ ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಪ್ರತಿಭಟನಾಕಾರರು, ಕಚೇರಿ ಎದುರು ಧರಣಿ ಕುಳಿತರು. ಜಿಲ್ಲೆಯಲ್ಲಿ ವಾಸಿಸುವ ಗುಡಿಸಲು ವಾಸಿಗಳಲ್ಲಿ ಮೊಬೈಲ್ ಫೋನ್ ನಂಬರ್ ಹಾಗೂ ವಿದ್ಯುತ್ ಸಂಪರ್ಕ ಇರದೇ ಇದ್ದರೂ ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಚೀಟಿ ನೀಡುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸೂಚಿಸಬೇಕು. ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿರುವವರೆಲ್ಲರಿಗೂ ಸಾಲ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಅಲೆಮಾರಿ ಜನಾಂಗದವರು ವಾಸಿಸುವ ಆಶ್ರಯ ಮನೆಗಳ ಹಕ್ಕು ಪತ್ರ ಹಾಗೂ ಸ್ವಾಧೀನ ಪತ್ರಗಳನ್ನು ತಕ್ಷಣ ನೀಡಬೇಕು. ರಾಜಕೀಯವಾಗಿ ಮುಂದುವರೆಯಲು ಈ ಜನಾಂಗದವರಿಗೆ ಚುನಾವಣೆಯಲ್ಲಿ ಪ್ರತ್ಯೇಕ ಮೀಸಲಾತಿ ನೀಡಬೇಕು.
ಕಾನೂನು ಅರಿವು ಕಾರ್ಯಾಗಾರ, ವಿಚಾರ ಸಂಕಿರಣ ಹಾಗೂ ಮತ್ತಿತರ ಜಾಗೃತಿ ಕಾರ್ಯಕ್ರಮಗಳನ್ನು ಪ್ರತಿ ತಿಂಗಳು ಆಯೋಜಿಸಬೇಕು ಹಾಗೂ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬೇಡಿಕೆಗಳ ಮನವಿ ಪತ್ರವನ್ನು ಮುಖ್ಯಮಂತ್ರಿಯವರಿಗೆ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳ ಮೂಲಕ ಸಲ್ಲಿಸಿದರು. ರಾಜ್ಯ ಅಲೆಮಾರಿ ಒಕ್ಕೂಟದ ಅಧ್ಯಕ್ಷ ಗುರುನಾಥ ಹುಲಗೂರ, ಶಿವಾನಂದ ಪಾಚಂಗಿ, ಅನಿಲ ಜಾಧವ, ಅಂಬಿಕಾ ಕಾನನ, ರುಕ್ಮಿಣಿ ನರವಟೆ, ರಾಜು ಭಿಸ್ಸೆ, ತುಕಾರಾಮ ಶಿಂಧೆ ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
-