ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹುಬ್ಳಿ ಮಾರ್ಕೆಟ್‌ನಲ್ಲಿ ನಿಷೇಧಿತ ಮಾತ್ರೆ!

Lingaraj Badiger
Updated On : 19 Nov 2013, 10:46 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 18
ನಿಮೆಸುಲೈಡ್ ಅಂಶವುಳ್ಳ ಔಷಧಿ ಜಗತ್ತಿನಾದ್ಯಂತ ನಿಷೇಧಕ್ಕೊಳಪಟ್ಟಿದ್ದರೂ ಭಾರತದಾದ್ಯಂತ ಇದಕ್ಕೆ ನಿರ್ಬಂಧ ಬಿದ್ದಿಲ್ಲ. ಹುಬ್ಬಳ್ಳಿ ಮಾರುಕಟ್ಟೆಯಲ್ಲಂತೂ ಈ ಔಷಧ ರಾಜಾರೋಷವಾಗಿ ಮಾರಾಟವಾಗುತ್ತಿದೆ.
ವಿಶೇಷವಾಗಿ ಮಧುಮೇಹ ಕಾಯಿಲೆ ಹೊಂದಿರುವವರಿಗೆ ಲಿವರ್ ಹಾಗೂ ಕಿಡ್ನಿಗೆ ತೀವ್ರತರವಾದ ತೊಂದರೆಯನ್ನುಂಟು ಮಾಡುತ್ತದೆ ಎಂಬ ಆಘಾತಕಾರಿ ಸಂಗತಿ ಬಿಚ್ಚಿಟ್ಟವರು ಭೂಮಿ ಎಜ್ಯುಕೇಶನ್ ಟ್ರಸ್ಟ್‌ನ ಮುಖ್ಯಸ್ಥ ಭಾಸ್ಕರ ಜಿತೂರಿ.
ನಿಮೆಸುಲೈಡ್ ಅಂಶವುಳ್ಳ ಮಾತ್ರೆ ಸೇವನೆಯಿಂದ ಸ್ವತಃ ತೊಂದರೆ ಅನುಭವಿಸಿದ ಭಾಸ್ಕರ್, ಈ ಮಾತ್ರೆಗಳನ್ನು ನಿಷೇಧ ಮಾಡಬೇಕೆಂದು ಹೋರಾಟ ಆರಂಭಿಸಿದ್ದಾರೆ. ಮಾತ್ರೆಯಿಂದಾಗುವ ಅಡ್ಡ ಪರಿಣಾಮ, ತಾವು ಕೈಗೊಂಡಿರುವ ಹೋರಾಟದ ವಿವರಣೆಯನ್ನು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ವಿವರಿಸಿದರು.
1990ರ ದಶಕದಲ್ಲಿಯೇ ನಿಮೆಸುಲೈಡ್ ಔಷಧ ನಿಷೇಧಗೊಂಡಿದೆ. ನಿಮೆಸುಲೈಡ್ ಅಂಶದ ಜೊತೆಗೆ ಅನಾಜಿನ್, ಸೆರಿವರಸ್ಟ್ಯಾಟಿನ್, ಡ್ರೊಪೆರಿಡಾಲ್, ಪೊರಾಜೊಲಿಡಾನ್, ಲೆನಿಸ್ಟ್ರಿನಾಲ್, ನೈಟ್ರೋಫಿರೋಜನ್ ಫೆನ್‌ಫಾರ್ಮಿನ್, ಫಿನೈಲ್‌ಬುಟಾಜಾನ್, ಪೈಪರೆಜಿನ್, ಕ್ಲುನಿಡೊಕ್ಲೊರ್‌ನಂತಹ ಔಷಧಿಗಳು ಜಗತ್ತಿನ ಪ್ರಮುಖ ಮುಂದುವರೆದ ದೇಶಗಳಲ್ಲಿ ನಿಷೇಧ ಹೊಂದಿದೆ.
ಈ ಸಂಗತಿಯನ್ನು ಮನಗಂಡ ತಾವು 10 ಜನವರಿ 2013ರಲ್ಲಿ ಭಾರತ ಸರ್ಕಾರಕ್ಕೆ ಪತ್ರ ಬರೆದು ಔಷಧ ನಿಷೇಧಿಸಲು ಮನವಿ ಮಾಡಿದ್ದೇವು.
ಈ ಪತ್ರವನ್ನು ಸರ್ಕಾರ 18 ಜನವರಿ 2013ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರವಾನಿಸಿತು. ಬಳಿಕ ರಾಜ್ಯದ ಡ್ರಗ್ಸ್ ಕಂಟ್ರೋಲ್ ಡಿಪಾರ್ಟ್‌ಮೆಂಟ್‌ಗೆ ತಲುಪಿಸಿತು.
ಆದರೆ, ಸುಮಾರು ಆರು ತಿಂಗಳ ಕಾಲ ಈ ಪತ್ರವನ್ನು ಇಟ್ಟುಕೊಂಡ ಇಲಾಖೆ ತದನಂತರ, ಈ ಔಷಧಿಯನ್ನು ನಿಷೇಧಿಸುವ ಅಧಿಕಾರಕ್ಕೆ ನವದೆಹಲಿಯ ದಿ ಡ್ರಗ್ಸ್ ಕಂಟ್ರೋಲರ್ ಜನರಲ್‌ಗೆ ಇದೆ ಎಂಬ ಉಲ್ಲೇಖದೊಂದಿಗೆ 25 ಜುಲೈ 2013ರಂದು ಅಲ್ಲಿಗೆ ಪತ್ರ ರವಾನಿಸಿತು. ಆದರೆ, ಅಲ್ಲಿಂದ ಔಷಧಿ ನಿಯಂತ್ರಿಸುವ ಯಾವುದೇ ಕಾರ್ಯವಾಗಿಲ್ಲ ಎಂದು ಭಾಸ್ಕರ್ ಜಿತೂರಿ ಅಸಮಾಧಾನ ವ್ಯಕ್ತಪಡಿಸಿದರು.
ಜಗತ್ತಿನಾದ್ಯಂತ ನಿಷೇಧಿಸಲ್ಪಟ್ಟಿದ್ದರೂ ಜೀವಕ್ಕೆ ಮಾರಕವಾದ ಇಂಥ ಔಷಧಿಗಳು ಭಾರತದಲ್ಲಿ ತಯಾರಾಗಿ ಮಾರಾಟವಾಗುತ್ತಿದ್ದರೂ ದಿ ಡ್ರಗ್ಸ್ ಕಂಟ್ರೋಲರ್ ಜನರಲ್ ಕಣ್ಣುಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಭಾಸ್ಕರ್ ಜಿತೂರಿ, ಕೇಂದ್ರ ಸರ್ಕಾರ ಈ ಕೂಡಲೇ ಔಷಧ ನಿಷೇಧಕ್ಕೆ ಮುಂದಾಗದಿದ್ದರೆ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದರು.

ನಿಷೇಧಿತ ಔಷಧ ಕಂಟೆಂಟ್ಸ್
ನಿಮೆಸುಲೈಡ್, ಅನಾಜಿನ್, ಸೆರಿವರಸ್ಟ್ಯಾಟಿನ್, ಡ್ರೊಪೆರಿಡಾಲ್, ಪೊರಾಜೊಲಿಡಾನ್, ಲೆನಿಸ್ಟ್ರಿನಾಲ್, ನೈಟ್ರೋಫಿರೋಜನ್ ಫೆನ್‌ಫಾರ್ಮಿನ್, ಫಿನೈಲ್‌ಬುಟಾಜಾನ್, ಪೈಪರೆಜಿನ್, ಕ್ಲುನಿಡೊಕ್ಲೊರ್.
ನಿಷೇಧಿತ ಮಾತ್ರೆಗಳು..
ಸುಮೋ, ನೈಸ್, ನಿಮಿಜೆಸಿಕ್, ನೊವಾಲಿಡ್, ನಿಮ್ಯುಲಿಡ್, ಅನಾಲ್ಜಿನ್, ಬರಾಲ್ಗನ್ ಎಂ., ನವಾಲಜೆನ್, ಅಲ್ಟ್ರಾಜಿನ್, ಪಿರೋಕ್ಸೋಜ್, ಲಿನಡಿಯೋಲ್, ಪಿರ್ಯಾಸಿನ್ ಸ್ಕೀನ್ ಕ್ರೀಮ್, ಡಿಬಿಐ, ಡಿಬಿಐ ಟಿಡಿ, ಪೈಪರಿಜೈನ್ ಸಿಟ್ರೇಟ್, ಎಂಟಿರೋಕ್ಯುನಾಲ್, ಕ್ಯೂನೋಫಾಮ್.

ಬಿಲ್ ಕೊಡಲ್ಲ...
ನಿಷೇಧಿತ ಮಾತ್ರೆಗಳು ಹುಬ್ಬಳ್ಳಿಯ ಅನೇಕ ಔಷಧಿ ಅಂಗಡಿಗಳಲ್ಲಿ ಖುಲ್ಲಂ ಖುಲ್ಲಾ ಮಾರಾಟವಾಗುತ್ತಿವೆ. ಆದರೆ, ಇಂಥ ಮಾತ್ರೆ ಪಡೆದುಕೊಂಡ ಬಗ್ಗೆ ಬಿಲ್ ಕೇಳಿದರೆ ಔಷಧಿ ಅಂಗಡಿಕಾರರು ನಿರಾಕರಿಸುತ್ತಾರೆ. ಇನ್ನು ವೈದ್ಯರ ವಿಷಯಕ್ಕೆ ಅಂದಾಗ ಅನೇಕ ವೈದ್ಯರೂ ಇಂಥ ಔಷಧಿ ಬರೆದುಕೊಡುತ್ತಾರೆಂಬ ಆರೋಪ ಭಾಸ್ಕರ್ ಅವರದ್ದು. ಮಾರಣಾಂತಿಕ ನಿಷೇಧಿತ ಔಷಧಿಗಳು ಮಾರಾಟ ಮಾಡುವುದು ಎಷ್ಟು ತಪ್ಪೋ ವೈದ್ಯರು ಇಂಥ ಔಷಧಿ ಬರೆದುಕೊಡುವುದೂ ತಪ್ಪೇ. ಇಂಥ ದಂಧೆಗೆ ಡ್ರಗ್ಸ್ ಕಂಟ್ರೋಲ್ ಜನರಲ್ ಕಡಿವಾಣ ಹಾಕಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement