ಕವಿವಿ ಅವ್ಯವಹಾರ ತನಿಖೆಗಾಗಿ ಎಬಿವಿಪಿ ಪ್ರತಿಭಟನೆ
ಹುಬ್ಬಳ್ಳಿ: ಕರ್ನಾಟಕ ವಿವಿಯಲ್ಲಿ ನಡೆದಿರುವ ಹಣಕಾಸು ಅವ್ಯವಹಾರದ ತನಿಖೆಯನ್ನು ಸೂಕ್ತ ಕಾನೂನು ಕ್ರಮದಿಂದ ಕೈಗೊಳ್ಳಬೇಕು ಹಾಗೂ ರಾಜ್ಯಪಾಲರು ತಕ್ಷಣ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಹುಬ್ಬಳ್ಳಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಕವಿವಿಯಲ್ಲಿ ರು. 260 ಕೋಟಿ ಅವ್ಯವಹಾರ ನಡೆದಿರುವುದನ್ನು ವಿವಿಯ ಲೆಕ್ಕಪರಿಶೋಧನ ಇಲಾಖೆ ಬೆಳಕಿಗೆ ತಂದಿದೆ. ಬೆಂಗಳೂರು, ಮೈಸೂರು, ಗುಲ್ಬರ್ಗಾ ಹಾಗೂ ಬಿಜಾಪುರ ಮಹಿಳಾ ವಿವಿಗಳಲ್ಲಿ ಈ ಹಿಂದೆ ಕೋಟಿಗಟ್ಟಲೇ ಹಣದ ಅವ್ಯವಹಾರ ನಡೆದಿದ್ದರೂ ಸರ್ಕಾರ ಯಾವುದೇ ಕ್ರಮಕೈಗೊಳ್ಳಲಿಲ್ಲ ಎಂದು ಪ್ರತಿಭಟನಾಕಾರರುದೂರಿದರು.
ಕವಿವಿಯಲ್ಲಿ ನಡೆದಿರುವ ಹಣಕಾಸು ಅವ್ಯವಹಾರದಿಂದ ಶಿಕ್ಷಣ ಕ್ಷೇತ್ರ ತಲೆ ತಗ್ಗಿಸುವಂತಾಗಿದೆ. ಈ ರೀತಿಯ ಅವ್ಯವಹಾರ ಮರುಕಳಿಸಬಾರದೆಂದರೆ ರಾಜ್ಯಪಾಲರು ತಕ್ಷಣ ಮಧ್ಯ ಪ್ರವೇಶಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯವರನ್ನು ತನಿಖೆಗೆ ನೇಮಿಸಬೇಕು ಎಂದು ಆಗ್ರಹಿಸಿದರು. ಈ ಅವ್ಯವಹಾರದ ಕುರಿತು ತಕ್ಷಣ ತನಿಖೆ ನಡೆಸದಿದ್ದರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಎಬಿವಿಪಿ ನಗರ ಕಾರ್ಯದರ್ಶಿ ಸಿದ್ದು ಸಾಲಿಮಠ, ಎಸ್.ಕೆ. ರವಿ ಮತ್ತಿತರರು ಪಾಲ್ಗೊಂಡಿದ್ದರು.