ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮಕ್ಕಳ ಗ್ರಾಮಸಭೆಗೆ ಅಧಿಕಾರಿಗಳಿಲ್ಲ

Mainashree
Updated On : 20 Nov 2013, 11:49 am

ಕನ್ನಡಪ್ರಭ ವಾರ್ತೆ, ಉಪ್ಪಿನ ಬೆಟಗೇರಿ, ನ. 19
ಎಲ್ಲ ಇಲಾಖೆಗಳ ಅಧಿಕಾರಿಗಳ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಯಬೇಕಿದ್ದ ಮಕ್ಕಳ ವಿಶೇಷ ಗ್ರಾಮ ಸಭೆಗಳು ಕೆಲವೇ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಯುತ್ತಿವೆ.
ಇತ್ತೀಚೆಗೆ ಉಪ್ಪಿನ ಬೆಟಗೇರಿಯಲ್ಲಿ ಆಯೋಜಿಸಿದ್ದ ಮಕ್ಕಳ ಗ್ರಾಮ ಸಭೆಗೆ ಶಾಸಕರು, ಜಿ.ಪಂ ಸದಸ್ಯರು, ತಾ. ಪಂ ಸದಸ್ಯರು, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಜಲಾನಯನ ಇಲಾಖೆ ಸೇರಿದಂತೆ 17 ವಿವಿಧ ಇಲಾಖೆ ಅಧಿಕಾರಿಗಳು ಬರಬೇಕಿತ್ತು.  ಆದರೆ, ತಾಪಂ ಸದಸ್ಯ ಬಾಬಾ ಮೋಹಿದ್ದೀನ್ ಚೌಧರಿ, ತಾಲ್ಕು ವೈದ್ಯಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಧಾರವಾಡದ ಕಿಡ್ಸ್ ಸಂಸ್ಥೆ, ಹಾಗೂ  ಗ್ರಾಪಂ ಪಿಡಿಓ, ಅಧ್ಯಕ್ಷ್ಯ, ಉಪಾಧ್ಯಕ್ಷ ಮತ್ತು ಕೆಲ ಸದಸ್ಯರನ್ನು ಹೊರತುಪಡಿಸಿ ಉಳಿದವರರು ಯಾರೂ ಬಂದಿರಲಿಲ್ಲ.
ಮುಖ್ಯವಾಗಿ ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ, ಹೆಸ್ಕಾಂ, ಪೋಲಿಸ್ ಇಲಾಖೆ ಮತ್ತು ಶಾಲಾ ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
ಮಕ್ಕಳು ಏನು ಮಾಡಿದರು?: ಇಲ್ಲಿನ ವಿರುಪಾಕ್ಷೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಮಕ್ಕಳ ವಿಶೇಷ ಗ್ರಾಮ ಸಭೆ ಬರೀ ಚರ್ಚೆಗೆ ಸೀಮಿತವಾಯಿತು. ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗೈರು ಹಾಜರಿಯಿಂದ ಮಕ್ಕಳ ಕುಂದು-ಕೊರತೆಗಳಿಗೆ ಸ್ಪಂದಿಸದ್ದರಿಂದ ಬೇಸರಗೊಂಡ ಕೆಲವು ಮಕ್ಕಳು ಸಭೆಯಿಂದ ನಡೆದರು.
ಹೇಳಿಕೊಳ್ಳೊದಕ್ಕೆ ನೂರು ಸಮಸ್ಯೆಗಳು: ನಮಗೆ ಕಲಿಯಲು ಕಂಪ್ಯೂಟರಗಳಿಲ್ಲ, ಕಂಪ್ಯೂಟರಗಳಿದ್ದರೂ ಕಲಿಸಲು ಶಿಕ್ಷಕರಿಲ್ಲ. ಆಟಕ್ಕೆ ಮೈದಾನ ಇಲ್ಲ ಮತ್ತು ದೈಹಿಕ ಶಿಕ್ಷಕರಿಲ್ಲ. ವಿದ್ಯುತ್ ಸಂಪರ್ಕ ಇಲ್ಲ ಹೀಗಾಗಿ ತರಗತಿಯಲ್ಲಿ ಕತ್ತಲು ಆವರಿಸುತ್ತದೆ. ದನ-ಕರುಗಳ ಹಾವಳಿಯಿಂದ ತೊಂದರೆಯಾಗುತ್ತಿದ್ದು ಶಾಲೆಗೆ ಕಂಪೌಂಡ್ ನಿರ್ಮಿಸಿಕೊಡಿ, ಸಮಯಕ್ಕೆ ಸರಿಯಾಗಿ ಬಸ್ ಸೌಭ್ಯವಿಲ್ಲ ಒದಗಿಸಿ ಎಂದು ಕೇಳಿಕೊಂಡರು.
ಕಾಟಾಚಾರ: ಮಕ್ಕಳ ಗ್ರಾಮ ಸಭೆ ಆಯೋಜಿಸುವುದಕ್ಕೆ ಶಿಕ್ಷಣ ಇಲಾಖೆಗೆ ಸಾಕಷ್ಟು ಸಮಯಾವಕಾಶ ಇದೆ. ಆದರೆ ಇಡೀ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಒಂದೇ ದಿನ ಮಕ್ಕಳ ಗ್ರಾಮಸಭೆ ಆಯೋಜಿಸುವ ಮೂಲಕ ಶಿಕ್ಷಣ ಇಲಾಖೆ ಇದೊಂದು ಕಾಟಾಚಾರಕ್ಕೆ ನಡೆಸಿದೆ.
ಮಕ್ಕಳ ಗ್ರಾಮ ಸಭೆಗೆ ಸರ್ಕಾರಿ ಅಧಿಕಾರಿಗಳ ಗೈರುಹಾಜರಿ ಕುರಿತು ಮಾಹಿತಿ ಇಲ್ಲ. ಈ ಕೂಡಲೇ ಎಲ್ಲ ಇಲಾಖೆಗಳಿಗೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಪಿಡಿಓಗಳಿಗೆ ನಿರ್ದೇಶನ ನೀಡಲಾಗುವುದು. ಇನ್ನು ಜನಪ್ರತಿನಿಧಿಗಳು ಸಾಮಾಜಿಕ ಹೊಣೆಗಾರಿಕೆ ಅರಿತು, ಮಕ್ಕಳು ಮತ್ತವರ ಸಮಸ್ಯೆಗಳಿಗೆ ಸ್ಪಂದಿಸಬೇಕು.
- ಪಿ.ಎ. ಮೇಘಣ್ಣವರ,
ಜಿಪಂ ಸಿಇಒ, ಧಾರವಾಡ

ಪ್ರಕಾಶ ಹೂಗಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement