ಸಂಘಟಿತ ಹೋರಾಟದಿಂದ ಮಾತ್ರ ಯಶಸ್ಸು: ಹನುಮಂತರಾಯ ಅಟ್ಟೂರ
ಹುಬ್ಬಳ್ಳಿ: ಐಟಿಸಿ ತರಬೇತಿದಾರರು ಸಂಘಟಿತ ಹೋರಾಟ ಮಾಡಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಅಖಿಲ ಭಾರತ ಯುವಜನ ಒಕ್ಕೂಟ (ಎಐವೈಎಫ್) ರಾಜ್ಯ ಸಹ ಕಾರ್ಯದರ್ಶಿ ಹನುಮಂತರಾಯ ಅಟ್ಟೂರ ಹೇಳಿದರು.
ಹಳೆಹುಬ್ಬಳ್ಳಿ ಶಿವ ಮಂದಿರದ ಪಕ್ಕದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಭಾರತ ಯುವಜನ ಒಕ್ಕೂಟ ಹಾಗೂ ಐಟಿಸಿ ತರಬೇತಿದಾರರ ವಿಭಾಗೀಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಎಂಟು ವರ್ಷಗಳಿಂದ ಸಂಘಟನೆ ನೇತೃತ್ವದಲ್ಲಿ ಹಲವಾರು ಹೋರಾಟ ಮಾಡಿದರೂ ರಾಜ್ಯ ಸರ್ಕಾರ ಸುಳ್ಳು ಭರವಸೆ ನೀಡುತ್ತಲೇ ತರಬೇತಿದಾರರನ್ನು ಬೀದಿಗೆ ತಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ರಾಜ್ಯದ ಕೆಪಿಟಿಸಿಎಲ್ನ ಐದು ವಿಭಾಗದಲ್ಲಿ ತರಬೇತಿಯನ್ನು ಗೌರವ ಧನದೊಂದಿಗೆ ಕೊಡಲಾಗುತ್ತಿದೆ ಎಂದರು.
ಆದರೆ, ತರಬೇತಿ ಕೇಂದ್ರವಿಲ್ಲ. ರಾಜ್ಯದಲ್ಲಿ ತರಬೇತಿದಾರರೇ ಇಲ್ಲ ಎಂದು ಕೆಪಿಟಿಸಿಎಲ್ ಅಧಿಕಾರಿಗಳು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಅಟ್ಟೂರ ಆರೋಪಿಸಿದರು.
ಆದ್ದರಿಂದ ಸರ್ಕಾರ ಕೆಪಿಟಿಸಿಎಲ್ನಲ್ಲಿ ಐಟಿಸಿ ತರಬೇತಿದಾರರನ್ನು ನೇರ ನೇಮಕಾತಿ ಮೂಲಕ ತಕ್ಷಣ ಪ್ರಕ್ರಿಯೆ ಆರಂಭಿಸಬೇಕು ಎಂದೂ ಆಗ್ರಹಿಸಿದರು.
ಗುಲ್ಬರ್ಗಾ ವಿಭಾಗೀಯ ಕಾರ್ಯಾಧ್ಯಕ್ಷ ಅರುಣಕುಮಾರ ಪಾಟೀಲ, ಐಟಿಸಿ ತರಬೇತಿದಾರರ ನೇಮಕಾತಿಗಾಗಿ ರಾಜ್ಯಾದ್ಯಂತ ಹೋರಾಟದ ರೂಪುರೇಷೆ ರಚಿಸಲು ನ. 20ರಂದು ಬೀದರ್ನಲ್ಲಿ ವಿಭಾಗೀಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಐಟಿಸಿ ಮುಖಂಡರಾದ ಚಂದ್ರಕಾಂತ ಶೇರಖಾನೆ, ಮಂಜುನಾಥ ಆರ್. ಘೋಡಕೆ, ರಾಜು ಕಾಳೆ, ಮಹಾಂತೇಶ ನಾಯಕ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.