ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸುದ್ದಿ ಸಂಕ್ಷೇಪ

Mainashree
Updated On : 20 Nov 2013, 11:56 am

ಜನಪದದಲ್ಲಿ ಸಂಸ್ಕೃತಿಯ ಬೇರುಗಳಿವೆ
ಹುಬ್ಬಳ್ಳಿ: ಜನಪದರು ತಮ್ಮ ಬದುಕು, ಕನಸು-ಕಲ್ಪನೆ, ಆಚಾರ, ವಿಚಾರ, ರೀತಿ ನೀತಿಗಳನ್ನು ಜನಪದ ಸಾಹಿತ್ಯದಲ್ಲಿ ಮುಕ್ತ ಮನಸ್ಸಿನಿಂದ ಅಭಿವ್ಯಕ್ತಗೊಳಿಸಿದ್ದಾರೆ ಎಂದು ಸಾಹಿತಿ ಡಾ.ರಾಮು ಮೂಲಗಿ ಹೇಳಿದರು.  ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ  ನಾಗಮ್ಮ ಈಶ್ವರಪ್ಪ ಅಳಗುಂಡಗಿ ದತ್ತಿ ಉಪನ್ಯಾಸದಲ್ಲಿ ಮಾತನಾಡಿದ ಅವರು, ಜನಪದವು ಸಹಕಾರ, ಭಾವೈಕ್ಯ, ಪರಸ್ಪರ ಅರಿವು-ಆಚರಣೆ ಸಂಸ್ಕಾರಗಳು ಹಬ್ಬಗಳ ಆಚರಣೆಯಿಂದ ಪ್ರಚಾರ ಗೊಳ್ಳುತ್ತಿದ್ದವು ಎಂದು ತಿಳಿಸಿದರು. ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ದತ್ತಿ ಉಪನ್ಯಾಸಗಳ ಉದ್ದೇಶ ತಿಳಿಸಿ ಕನ್ನಡ ಸಂಸ್ಕೃತಿ ತಿಳಿದುಕೊಳ್ಳಲು ಸಲಹೆ ನೀಡಿದರು. ಪೊಲೀಸ್ ಇನ್ಸ್‌ಪೆಕ್ಟರ್ ಪುಷ್ಪಲತಾ ಎನ್., ಹಬ್ಬಗಳ ಆಚರಣೆಯಿಂದ ನೈತಿಕತೆ ಮತ್ತು ಸಾಮಾಜಿಕ ನಿಯಂತ್ರಣ ಹೆಚ್ಚುವುದು ಎಂದರು.  ಪ್ರೊ. ಕೆ.ಎಸ್. ಕೌಜಲಗಿ ಪ್ರಾಸ್ತಾವಿಕ ಮಾತನಾಡಿದರು. ಲಿಂಗರಾಜ ರಾಮಾಪುರ ಸ್ವಾಗತಿಸಿದರು. ಸುರೇಶ ಹೊರಕೇರಿ ನಿರೂಪಿಸಿದರು. ಮೃತ್ಯುಂಜಯ ಮಟ್ಟಿ ವಂದಿಸಿದರು.  ಚಂದ್ರಶೇಖರ ಅಳಗುಂಡಗಿ, ಶಾಂತಮ್ಮ ಅಂಕಲಕೋಟಿ, ಶಾಂತಮ್ಮ ಯಾವಗಲ್, ನಾಗಮ್ಮ ಕಮಡೊಳ್ಳಿ, ಉಮಾ ಅಳಗುಂಡಗಿ, ವಿಜಯಲಕ್ಷ್ಮೀ ಕಟ್ಟಿಮಠ, ನಿಂಬಣ್ಣವರ, ಕುಮಾರಗೌಡ ಪಾಟೀಲ ಮತ್ತಿತರರಿದ್ದರು.
ಉಚಿತ ಮೂಲವ್ಯಾಧಿ   ತಪಾಸಣಾ ಶಿಬಿರ ಇಂದು
ಹುಬ್ಬಳ್ಳಿ: ದಾಜಿಬಾನಪೇಟ, ವಿಕ್ಟೋರಿಯಾ ರಸ್ತೆಯ ಕನ್ಯಾಳ ಬಿಲ್ಡಿಂಗ್‌ನಲ್ಲಿರುವ ಸುಶ್ರುತಾ ಆಯುರ್ವೇದ ಆಸ್ಪತ್ರೆಯಲ್ಲಿ ವಿಶ್ವ ಮೂಲವ್ಯಾಧಿ ದಿನದ ಅಂಗವಾಗಿ 20ರಂದು ಮಧ್ಯಾಹ್ನ 2ರಿಂದ ಸಂಜೆ 6ರ ವರೆಗೆ ಉಚಿತ ಮೂಲವ್ಯಾಧಿ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.
  ಶಿಬಿರದಲ್ಲಿ ಡಾ. ಸಿದ್ದನಗೌಡ ಎ. ಪಾಟೀಲ ಹಾಗೂ ಡಾ. ಶೋಭಾ ಎಸ್. ಪಾಟೀಲ ತಪಾಸಣೆ ನಡೆಸಲಿದ್ದಾರೆ. ಮಾಹಿತಿಗೆ ಮೊ. 94485 65198ಗೆ ಸಂಪರ್ಕಿಸುವಂತೆ ಕೋರಲಾಗಿದೆ.
ಇಂದು ಕನಕ ಜಯಂತಿ
ಧಾರವಾಡ: ಸಂತ ಕನಕದಾಸರ 526ನೇ ಜಯಂತಿಯನ್ನು ನ. 20ರಂದು ಜಿಲ್ಲಾಡಳಿತ ಹಾಗೂ ವಿವಿಧ ಸಂಘ-ಸಂಸ್ಥ್ಥೆಗಳು ಹಮ್ಮಿಕೊಂಡಿವೆ. ನ. 20ರ ಬೆಳಗ್ಗೆ 10.30ಕ್ಕೆ ಕಲಾಭವನದಿಂದ ಕನಕದಾಸರ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಚಾಲನೆ ನೀಡುವರು. ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಇಲಾಖೆ ಅಧಿಕಾರಿಗಳು ಭಾಗವಹಿಸುತ್ತಾರೆ. ಮೆರವಣಿಗೆಯಲ್ಲಿ ಹಲವಾರು ಜಾನಪದ ತಂಡಗಳು ಭಾಗವಹಿಸುತ್ತವೆ. ಮೆರವಣಿಗೆಯು ಕಲಾ ಭವನದಿಂದ ಹೊರಟು ಸುಭಾಸ ರಸ್ತೆ, ಕೆಸಿಸಿ ಬ್ಯಾಂಕ್ ಸರ್ಕಲ್, ಮೆದಾರ ಓಣಿ, ಬೂಸಪ್ಪ ಚೌಕ ಹಾಗೂ ಟಿಕಾರೆ ರಸ್ತೆಯ ಮೂಲಕ ತೆರಳಿ ಪುನಃ  ಕಲಾಭವನಕ್ಕೆ  ಆಗಮಿಸಲಿದೆ ಎಂದು ದೇವರಾಜ ಕಂಬಳಿ ಹೇಳಿದ್ದಾರೆ.
ಇಂದು ಕನಕ ಜಯಂತಿ
ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಆಶ್ರಯದಲ್ಲಿ 20ರಂದು ಬೆಳಗ್ಗೆ 9ಕ್ಕೆ ನಗರದ ಮಿನಿ ವಿಧಾನ ಸೌಧದಲ್ಲಿರುವ ತಾಪಂ ಸಭಾಭವನದಲ್ಲಿ ಭಕ್ತ ಶ್ರೇಷ್ಠ ಕನಕದಾಸರ 526ನೇ ಜಯಂತಿ ಆಚರಿಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ ಶೆಟ್ಟರ ಅಧ್ಯಕ್ಷತೆ ವಹಿಸುವರು.
ನೇತ್ರ ತಪಾಸಣೆ ಶಿಬಿರ
ಹುಬ್ಬಳ್ಳಿ: ನಗರದ ದಿವ್ಯಜ್ಯೋತಿ ಕಣ್ಣಿನ ಆಸ್ಪತ್ರೆ ವತಿಯಿಂದ ನ. 22ರಂದು ಚಿಕ್ಕ ಮಕ್ಕಳಿಗಾಗಿ ಉಚಿತವಾಗಿ ವಿಶೇಷ ನೇತ್ರ ತಪಾಸಣೆ ಶಿಬಿರ ಆಯೋಜಿಸಲಾಗಿದೆ. ಉಣಕಲ್ ಕ್ರಾಸ್‌ನ ಕಿರೆಸೂರ ಕಾಂಪ್ಲೆಕ್ಸ್‌ನಲ್ಲಿರುವ ದಿವ್ಯಜ್ಯೋತಿ ಆಸ್ಪತ್ರೆಯಲ್ಲಿ ಅಂದು ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ನಡೆಯಲಿರುವ ಶಿಬಿರದಲ್ಲಿ 0-12 ವರ್ಷದೊಳಗಿನ ಮಕ್ಕಳ ನೇತ್ರ ತಪಾಸಣೆ ಮಾಡಲಾಗುವುದು. ಬೆಂಗಳೂರಿನ ಚಿಕ್ಕಮಕ್ಕಳ ನೇತ್ರ ತಜ್ಞರು ಮಕ್ಕಳ ಕಣ್ಣುಗಳನ್ನು ತಪಾಸಣೆ ಮಾಡುವರು.  ಚಿಕ್ಕ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮೆಳ್ಳಗಣ್ಣು, ರಾತ್ರಿ ಕುರುಡು, ಕಣ್ಣಿನ ಗಾಯ ಮತ್ತಿತರ ರೋಗಗಳಿಗೆ ಸೂಕ್ತ ವೈದ್ಯಕೀಯ ಉಪಚಾರ, ಸಲಹೆ, ಸೂಚನೆಗಳನ್ನು ನೀಡಲಾಗುವುದು. ಮಾಹಿತಿಗೆ ದೂ: 0836 2272345 ಅಥವಾ 2272728 ಸಪಂರ್ಕಿಸಲು ಕೋರಲಾಗಿದೆ.
ಕೌನ್ಸೆಲಿಂಗ್ ವೇಳಾಪಟ್ಟಿ
ಧಾರವಾಡ: ಬೆಳಗಾವಿ ವಿಭಾಗದ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯ ಜೆಓಸಿ ಸಿಬ್ಬಂದಿ ವಿಲೀನಕ್ಕೆ ಕ್ರಮ ಜರುಗಿಸಿರುವ ಹಿನ್ನೆಲೆಯಲ್ಲಿ ನ. 22ರಂದು ಜೆಓಸಿ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಧಾರವಾಡದ ಡಯಟ್‌ನಲ್ಲಿ ನಡೆಯಲಿದೆ. ಜೆಓಸಿ ಅಭ್ಯರ್ಥಿಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಹುದ್ದೆಗಳಿಗೆ ನೇಮಕ ಮಾಡಲಾಗುವುದು. ದಾಖಲಾತಿ ಪರಿಶೀಲನೆ ನಂತರ ನ. 27 ಹಾಗೂ 28ರಂದು ಬೆಳಗ್ಗೆ 10ಕ್ಕೆ ಅದೇ ಸ್ಥಳದಲ್ಲಿ ಕೌನ್ಸೆಲಿಂಗ್ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡ ಆಯುಕ್ತರ ಪ್ರಕಟಣೆ ತಿಳಿಸಿದೆ.
ಇಂದು ಕನಕ ಜಯಂತಿ
ಹುಬ್ಬಳ್ಳಿ: ಹು-ಧಾ ಪಾಲಿಕೆ ಕಚೇರಿಯಲ್ಲಿ ನ. 20ರಂದು ಬೆಳಗ್ಗೆ 10.30ಕ್ಕೆ ಭಕ್ತ ಕನಕದಾಸ ಜಯಂತಿ ಆಯೋಜಿಸಲಾಗಿದೆ. ಪಾಲಿಕೆ ಆಯುಕ್ತ ರಮಣದೀಪ ಚೌಧರಿ ಕನಕದಾಸ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವರು. ಪ್ರೊ. ಧನವಂತ ಹಾಜವಗೋಳ ಉಪನ್ಯಾಸ ನೀಡುವರು. ಪಾಲಿಕೆ ಸದಸ್ಯರು, ಅಧಿಕಾರಿಗಳು ಪಾಲ್ಗೊಳ್ಳುವರು.
ಲಕ್ಕಮ್ಮನವರ ನೇಮಕ
ಧಾರವಾಡ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೂತನ ಗೌರವ ಕಾರ್ಯದರ್ಶಿಯಾಗಿ ಸಮೀಪದ ಹೆಬ್ಬಳ್ಳಿ ಗ್ರಾಮದ ಉರ್ದು ಪ್ರಾಥಮಿಕ ಶಾಲೆಯ ಕನ್ನಡ ಅಧ್ಯಾಪಕ ಎಲ್.ಐ. ಲಕ್ಕಮ್ಮನವರ ನೇಮಕಗೊಂಡಿದ್ದಾರೆ. ತಾಲೂಕು ಕಸಾಪ ಅಧ್ಯಕ್ಷ ಗುರು ತಿಗಡಿ ಇವರನ್ನು ನೇಮಕ ಮಾಡಿದ್ದಾರೆ.
ನೇಣು ಬಿಗಿದು ಮಹಿಳೆ ಆತ್ಮಹತ್ಯೆ
ಧಾರವಾಡ: ತಾಲೂಕಿನ ಚಿಕ್ಕ-ಮಲ್ಲಿಗವಾಡದಲ್ಲಿ ಮಹಿಳೆಯೋಬ್ಬಳು ಸೋಮವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚಿಕ್ಕಮಲ್ಲಿಗವಾಡ  ಗ್ರಾಮದ ಸುಶೀಲಾ ಅಡಿವೆಪ್ಪ ಕಂಪ್ಲಿಕೊಪ್ಪ (19) ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ಮಹಿಳೆ. ಮಾನಸಿಕವಾಗಿ ಬೇಸತ್ತಿದ್ದ ಸುಶೀಲಾ ಮನೆಯಲ್ಲಿ ಸೀರೆಯಿಂದ ನೇಣು ಹಾಕಿಕೊಂಡಿದ್ದಾಳೆ. ಕಳೆದ 6 ತಿಂಗಳ ಹಿಂದೆ ಅಡಿವೆಪ್ಪ ಕಂಪ್ಲಿಕೊಪ್ಪನಿಗೆ ಸುಶೀಲಾಳನ್ನು ಮದುವೆ ಮಾಡಿಕೊಡಲಾಗಿತ್ತು. ಗಂಡನ ಕಿರುಕುಳವೇ ಸುಶೀಲಾ ಆತ್ಮಹತ್ಯೆಗೆ ಕಾರಣ ಎಂದು ಆಕೆಯ ತಾಯಿ ರಾಜೇಶ್ವರಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೃತ್ಯುಂಜಯ ಮಹಾಮಂತ್ರ ಅನುಷ್ಠಾನ
ಹುಬ್ಬಳ್ಳಿ: ಲೋಕಕಲ್ಯಾಣಾರ್ಥ ಭಗವಾನ ಸೇವಾ ಸಂಸ್ಥೆ ವತಿಯಿಂದ ನ. 21ರಿಂದ 2014ರ ಜನವರಿ 1ರ ವರೆಗೆ ಶ್ರೀ ಮೃತ್ಯುಂಜಯ ಮಹಾಮಂತ್ರ ಅನುಷ್ಠಾನ ಮತ್ತು ಯಾಗವನ್ನು ನಗರದ ಸ್ಟೇಶನ್ ರಸ್ತೆಯಲ್ಲಿರುವ ಶ್ರೀ ಈಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಜ. 7ರಂದು ಯಾಗದ ಪೂರ್ಣಾಯತಿ ಕಾರ್ಯಕ್ರಮ ನಡೆಯಲಿದೆ ಎಂದು ಭಗವಾನ ಸೇವಾ ಸಂಸ್ಥೆಯ ನಾರಾಯಣ ಜರತಾರಘರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆನಂದ ಅಂಬೇಕರ ನಿಧನ
ಧಾರವಾಡ: ಇಲ್ಲಿನ ತೇಜಸ್ವಿನಗರ ನಿವಾಸಿ ಆನಂದಕೃಷ್ಣ ಅಂಬೇಕರ (25) ನಿಧನರಾದರು. ತಬಲಾವಾದಕರಾಗಿದ್ದ ಇವರು ಕರ್ನಾಟಕ ಕಾಲೇಜಿನ ಸಂಗೀತ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೃತರಿಗೆ ತಂದೆ, ತಾಯಿ ಅಪಾರ ಬಂಧು-ಬಳಗವಿದೆ.
ಭೀಮರಾವ್ ಹುದ್ದಾರ ನಿಧನ
ಧಾರವಾಡ: ಇಲ್ಲಿಯ ಗಾಂಧಿನಗರದ ನಿವಾಸಿ, ನಿವೃತ್ತ ಶೀರಸ್ತೆದಾರ ಭೀಮರಾವ್ ಹುದ್ದಾರ (78) ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿ ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement