ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

27ರಂದು ಅತಿಥಿ ಉಪನ್ಯಾಸಕರ ರಾಜ್ಯ ಸಮಾವೇಶ

Lingaraj Badiger
Updated On : 21 Nov 2013, 12:16 pm

ಹುಬ್ಬಳ್ಳಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿರುವ 10562 ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಹಾಗೂ ವೇತನ ಹೆಚ್ಚಳ ಮತ್ತಿತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೆಳಗಾವಿಯಲ್ಲಿ ನ. 27ರಂದು 'ಅತಿಥಿ ಉಪನ್ಯಾಸಕರ ಹಕ್ಕೊತ್ತಾಯಗಳ' ರಾಜ್ಯ ಸಮಾವೇಶ ಆಯೋಜಿಸಲಾಗಿದೆ ಎಂದು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಮಾನ್ಪಡೆ ತಿಳಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶವನ್ನು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಉದ್ಘಾಟಿಸಲಿದ್ದಾರೆ. ರಾಜ್ಯದ ಮೂಲೆ ಮೂಲೆಯಿಂದ ಆಗಮಿಸುವ ಅತಿಥಿ ಉಪನ್ಯಾಸಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆಂದರು. ಅತಿಥಿ ಉಪನ್ಯಾಸಕರ ನೈಜ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಈ ಬಗ್ಗೆ ಸಾಕಷ್ಟು ಹೋರಾಟ ಕೈಗೊಂಡರು ಸರ್ಕಾರ ನಿರ್ಲಕ್ಷಿಸುತ್ತಾ ಬಂದಿದೆ. ಪಕ್ಕದ ರಾಜ್ಯಗಳಿಗೆ ಹೋಲಿಸಿದಾಗ ಕರ್ನಾಟಕದ ಅತಿಥಿ ಉಪನ್ಯಾಸಕರಿಗೆ ಅನ್ಯಾಯವಾಗಿದೆ. ಅತಿಥಿ ಉಪನ್ಯಾಸಕರಿಗೆ ಸೇವೆ ಭದ್ರತೆ ಕಾಯಂಗೊಳಿಸಬೇಕು ಹಾಗೂ ಯುಜಿಸಿ ನಿಯಮದಂತ ರು. 25 ಸಾವಿರ ವೇತನ ನಿಗದಿಗೊಳಿಸಬೇಕೆಂಬುದು ತಮ್ಮ ಪ್ರಮುಖ ಬೇಡಿಕೆ. ಇದರೊಟ್ಟಿಗೆ ತಿಂಗಳ ಮೊದಲ ವಾರದಲ್ಲಿ ವೇತನ ಬಿಡುಗಡೆಗೊಳಿಸಬೇಕು. ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯಲ್ಲಿ ಸೇವಾನುಭವ ಆಧರಿಸಿ ವರ್ಷಕ್ಕೆ 5ರಂತೆ ಕೃಪಾಂಕ ನೀಡಬೇಕು. ವಯೋವುತಿ ಮೀರಿರುವ ಹಾಗೂ ಮೀರುತ್ತಿರುವ ಅತಿಥಿ ಉಪನ್ಯಾಸಕರಿಗೆ ನೇಮಕಾತಿಯಲ್ಲಿ ಆದ್ಯತೆ ನೀಡಬೇಕು. ಎಂಪಿಲ್ ಪದವಿಯನ್ನು ಪರಿಗಣಿಸಬೇಕು ಎಂದು ಸಮಾವೇಶದ ಮೂಲಕ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದು ಮಾನ್ಪಡೆ ತಿಳಿಸಿದರು. ಒಂದು ವೇಳೆ ಸರ್ಕಾರ ಸಮಾವೇಶಕ್ಕೂ ಮನ್ನಣೆ ಕೊಡದೇ ಹೋದ ಪಕ್ಷದಲ್ಲಿ 21 ಜನವರಿ 2014ರಂದು ಬೆಂಗಳೂರಿನಲ್ಲಿ ತರಗತಿಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದ ಮಾನ್ಪಡೆ, 10 ಸಾವಿರದಷ್ಟಿರುವ ಅತಿಥಿ ಉಪನ್ಯಾಸಕರ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಬರುವ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಲಿಂಗರಾಜ ಅಂಗಡಿ, ಆರ್. ಎನ್. ಪಾಟೀಲ, ಮಹೇಶ ಪತ್ತಾರ, ವಸಂತಗೌಡ ಇದ್ದರು.
ಕಸ್ತೂರಿ ರಂಗನ್ ವರದಿ ಜಾರಿಗೆ ಒಪ್ಪಿಲ್ಲ: ಆರ್ವಿಡಿ
ಹೊನ್ನಾವರ: ಪಶ್ಚಿಮಘಟ್ಟ ಅರಣ್ಯ ಸಂರಕ್ಷಣೆ ಕುರಿತು ಕೇಂದ್ರ ಸರ್ಕಾರ ಡಾ.ಕಸ್ತೂರಿರಂಗನ್ ಸಮಿತಿ ಜಾರಿಗೆ ರಾಜ್ಯಕ್ಕೆ ಕಳುಹಿಸಿರುವ ವರ್ತಮಾನದ ಕುರಿತು, ರಾಜ್ಯ ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಪ್ರತಿಕ್ರಿಯಿಸಿದ್ದು, ಈ ವರದಿಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರವಿನ್ನೂ ತಾತ್ವಿಕ ಒಪ್ಪಿಗೆ ನೀಡಿಲ್ಲ ಎಂದಿದಾರೆ. ಹೊನ್ನಾವರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವರದಿಯಲ್ಲಿ ಏನಿದೆ? ಅದರ ಪರಿಣಾಮ ಮತ್ತು ದುಷ್ಪರಿಣಾಮಗಳೇನು? ಎಂಬ ಬಗ್ಗೆ ಪರಿಶೀಲನೆ ನಡೆಯಲಿದ್ದು, ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ಚರ್ಚೆ ನಡೆಸಿ ತರುವಾಯ ಶಾಸಕ ಸಭೆಯಲ್ಲೂ ಚರ್ಚಿಸಿ ಈ ಬಗ್ಗೆ ನಿರ್ಧರಿಸಲಿದ್ದೇವೆ ಎಂದರು.

ಸಚಿವನಾಗುವುದು ಖಚಿತ: ಮನೋಹರ ತಹಶೀಲ್ದಾರ್
ಹಾನಗಲ್ಲ:  ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ನಾನು ಸಚಿವನಾಗುವುದು ಖಚಿತ. ಯಾವುದೇ ಒತ್ತಡ ತಂತ್ರದ ಅವಶ್ಯಕತೆ ಇಲ್ಲ. ಹಿರಿತನ ಹಾಗೂ ಸಾಮಾಜಿಕ ನ್ಯಾಯದಲ್ಲಿ ಮಂತ್ರಿಯಾಗಲು ಹೈಕಮಾಂಡ್ ನನ್ನ ಪರವಾಗಿದೆ ಎಂದು ಶಾಸಕ ಮನೋಹರ ತಹಶೀಲ್ದಾರ್ ಹೇಳಿದರು.
ಬುಧವಾರ ಹಾನಗಲ್ಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿಯೇ ಹಿರಿಯ ಶಾಸಕರಲ್ಲಿ ನಾನೂ ಒಬ್ಬ. ಮಂತ್ರಿಯಾಗುವ ಶ್ರೇಯಾಂಕದಲ್ಲಿದ್ದೇನೆ. ಹಾವೇರಿ ಜಿಲ್ಲೆಗೆ ಪ್ರಾತಿನಿಧ್ಯ ನೀಡಲೇಬೇಕಾಗಿದೆ ಎಂದು ತಿಳಿಸಿದರು.
ನ. 21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಅಧ್ಯಕ್ಷ ಜಿ. ಪರಮೇಶ್ವರ ಹೈಕಮಾಂಡ್ ಜೊತೆ ರಾಜ್ಯದ ಸಚಿವ ಸಂಪುಟ ಹಾಗೂ ನಿಗಮ ಮಂಡಳಿಗಳ ಪದಾಧಿಕಾರಿಗಳ ಆಯ್ಕೆ ಕುರಿತು ಚರ್ಚಿಸಲಿದ್ದಾರೆ. ಸರ್ಕಾರ ರಚನೆಯಾದಾಗಲೇ ತಮಗೆ ಮಂತ್ರಿ ಸ್ಥಾನ ನೀಡಲೇಬೇಕಾಗಿತ್ತು. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ತಮಗೆ ಮಂತ್ರಿ ಸ್ಥಾನದ ಬದಲು ವಿಧಾನಸಭೆ ಉಪಸಭಾಪತಿ ಸ್ಥಾನ ನೀಡಲಾಗಿತ್ತು. ಈ ಬಾರಿ ಮಂತ್ರಿ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದೆ. ಹೈಕಮಾಂಡ್ ಮೇಲೆ ಯಾವುದೆ ಒತ್ತಡ ತಂತ್ರ ಹೇರಲು ನಾನು ಮುಂದಾಗಿಲ್ಲ. ಚುನಾವಣಾ ಪೂರ್ವದಲ್ಲಿ ಸಿದ್ದರಾಮಯ್ಯ ಅವರು ಪ್ರಚಾರಾರ್ಥವಾಗಿ ಹಾನಗಲ್ಲಿಗೆ ಬಂದಾಗ ನನ್ನನ್ನು ಆಯ್ಕೆ ಮಾಡಿದರೆ ಮಂತ್ರಿ ಮಾಡುತ್ತೇನೆ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದ್ದನ್ನು ಸಿದ್ದರಾಮಯ್ಯನವರು ನೆನಪಿಸಿಕೊಂಡಿದ್ದಾರೆ. ಅಲ್ಲದೇ ಬೆಂಗಳೂರಿನಲ್ಲಿ ಬಲಿಜ ಸಮಾಜದ ಸಮಾವೇಶದಲ್ಲಿ ಸ್ವತಃ ಸಿದ್ದರಾಮಯ್ಯನವರೇ ಈ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿ ಮಂತ್ರಿ ಮಾಡುವುದಾಗಿ ಭರವಸೆಯನ್ನು ನೀಡಿದ್ದಾರೆ. ಹೀಗಾಗಿ ನಿಸ್ಸಂಶಯವಾಗಿ ನಾನು ಮಂತ್ರಿಯಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement