ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಣ್ಣಿನ ದೋಷಕ್ಕೆ ನಿರ್ಲಕ್ಷ್ಯ ಸಲ್ಲದು

Lingaraj Badiger
Updated On : 21 Nov 2013, 11:58 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 20
ಕನ್ನಡಪ್ರಭ, ಇಂಡಿಯನ್ ಎಕ್ಸ್‌ಪ್ರೆಸ್ ದಿನಪತ್ರಿಕೆ ಹಾಗೂ ದಿವ್ಯಜ್ಯೋತಿ ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ನವನಗರದ ರೋಟರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳ, ಪಾಲಕರ ಹಾಗೂ ಶಿಕ್ಷಕರ ಉಚಿತ ನೇತ್ರ ತಪಾಸಣೆ ಶಿಬಿರ ಬುಧವಾರ ನಡೆಯಿತು.
ಶಿಬಿರ ಉದ್ಘಾಟಿಸಿ ಮಾತನಾಡಿದ ದಿವ್ಯಜ್ಯೋತಿ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಶ್ರೀಧರ ಅಮೀನ್, 12 ವರ್ಷದೊಳಗಿನ ಮಕ್ಕಳು ಕಡ್ಡಾಯವಾಗಿ ನೇತ್ರ ತಪಾಸಣೆ ಮಾಡಿಸಿಕೊಳ್ಳಬೇಕು. ಇದರಿಂದ ಕಣ್ಣಿನ ತೊಂದರೆಗಳನ್ನು ಪ್ರಾಥಮಿಕ ಹಂತದಲ್ಲಿಯೇ ಕಂಡುಹಿಡಿದು, ಸೂಕ್ತ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ ಎಂದರು.
ಮೆಳ್ಳಗಣ್ಣು, ದೂರದೃಷ್ಟಿ ಮತ್ತು ಸಮೀಪ ದೃಷ್ಟಿ ದೋಷ ಸೇರಿದಂತೆ ಇನ್ನಿತರ ಕಣ್ಣಿನ ತೊಂದರೆಗಳುಳ್ಳ ಮಕ್ಕಳ ಬಗ್ಗೆ ಪಾಲಕರು ಹಾಗೂ ಶಿಕ್ಷಕರು ಗಮನ ನೀಡಬೇಕು. ಸೂಕ್ತ ಚಿಕಿತ್ಸೆ ನೀಡುವ ಮೂಲಕ ಈ ತೊಂದರೆಗಳನ್ನು ಪ್ರಾರಂಭದ ಹಂತದಲ್ಲಿಯೇ ನಿವಾರಿಸಬೇಕು ಎಂದು ತಿಳಿಸಿದರು.
ಅತಿಥಿಯಾಗಿದ್ದ ಕನ್ನಡಪ್ರಭ ದಿನಪತ್ರಿಕೆಯ ಹುಬ್ಬಳ್ಳಿ ಆವೃತ್ತಿ ಸ್ಥಾನಿಕ ಸಂಪಾದಕ ಜಿ.ವಿ. ಯತಿರಾಜು ಮಾತನಾಡಿ, ಜೀವನದಲ್ಲಿ ಉಂಟಾಗುವ ಏಳುಬೀಳುಗಳಿಂದ ವಿದ್ಯಾರ್ಥಿಗಳು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಯಾವುದೇ ರೀತಿಯ ಸಾಧನೆ ಮಾಡುವಂಥ ಛಲ ಬೆಳೆಸಿಕೊಳ್ಳಬೇಕು. ಸಾಧನೆಗೆ ಸಾಕಷ್ಟು ಅವಕಾಶಗಳಿದ್ದು, ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಲೆಯ ಕಾರ್ಯದರ್ಶಿ ಎಂ.ಸಿ. ಸುರಗುಂಟ ಮಾತನಾಡಿ, ಕಣ್ಣು ಅತ್ಯಮೂಲ್ಯವಾದುದು. ಕಣ್ಣಿನ ದೋಷಗಳ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಯಾವುದೇ ರೀತಿಯ ಕಣ್ಣಿನ ದೋಷಗಳಿಗೆ ತಕ್ಷಣ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ದಿವ್ಯಜ್ಯೋತಿ ಕಣ್ಣಿನ ಆಸ್ಪತ್ರೆಯ ದಯಾನಂದ ರೇವಣಕರ, ಆಸ್ಪತ್ರೆಯಲ್ಲಿರುವ ಸೌಲಭ್ಯಗಳ ಕುರಿತು ವಿವರಿಸಿದರು. ಪ್ರಾಚಾರ್ಯ ಡಾ. ವಿಜಯಶ್ರೀ ಕಲಬುರ್ಗಿ, ಕನ್ನಡಪ್ರಭ ಹಾಗೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗಳ ಪ್ರಸಾರಾಂಗ ವಿಭಾಗದ ಹುಬ್ಬಳ್ಳಿ ಮುಖ್ಯಸ್ಥ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
ಶಿಬಿರದಲ್ಲಿ ನೂರಾರು ವಿದ್ಯಾರ್ಥಿಗಳ, ಶಿಕ್ಷಕರ ಹಾಗೂ ಪಾಲಕರ ನೇತ್ರ ತಪಾಸಣೆ ಮಾಡಲಾಯಿತು. ಕಣ್ಣಿನ ಪೊರೆಯ ಆರೈಕೆ, ಮಲ್ಟಿಪ್ರೋಕಲ್, ಟೋರಿಕ್ ಮಸೂರ, ಗ್ಲುಕೋಮಾ ಆರೈಕೆ, ಕಾಂಟಾಕ್ಟ್ ಲೆನ್ಸ್, ಆರ್‌ಬಿಟ್ ಮತ್ತು ಅಕ್ಯುಲೋಪ್ಲಾಸ್ಟಿ ಚಿಕಿತ್ಸೆ, ಚಿಕ್ಕ ಮಕ್ಕಳ ನೇತ್ರ ವಿಜ್ಞಾನ ಮತ್ತು ವಕ್ರ ಕಣ್ಣುಗಳ ಚಿಕಿತ್ಸೆ ಸೇರಿದಂತೆ ವಿವಿಧ ಕಣ್ಣಿನ ತಪಾಸಣೆ ಕುರಿತ ತಿಳಿವಳಿಕೆಯನ್ನೂ ಈ ಸಂದರ್ಭದಲ್ಲಿ ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement