ಬಾಡಾದ ಮಹಾದೇವ ವಿನಾಯಕ ದೇವಸ್ಥಾನಕ್ಕೆ ಆಡಳಿತಾಧಿಕಾರಿ ನೇಮಿಸಲು ಆಗ್ರಹ
ಕಾರವಾರ: ಇಲ್ಲಿನ ಬಾಡಾದಲ್ಲಿರುವ ಮಹಾದೇವ ವಿನಾಯಕ ದೇವಸ್ಥಾನವು ಕಳೆದ ಎರಡುವರೆ ವರ್ಷಗಳ ಹಿಂದೆಯೇ ಕರ್ನಾಟಕ ಸರ್ಕಾರದ ಧಾರ್ಮಿಕ ಸಂಸ್ಥೆಗಳ ಪಟ್ಟಿಗೆ ಸೇರಿದ್ದರೂ ಮುಜರಾಯಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಇದುವರೆಗೂ ದೇವಸ್ಥಾನಕ್ಕೆ ಆಡಳಿತಾಧಿಕಾರಿ ನೇಮಿಸಲಾಗಿಲ್ಲ. ಇದರಿಂದ ಇಲ್ಲಿನ ಟ್ರಸ್ಟ್ನವರು ದೇವಸ್ಥಾನದ ಹಣ ದೋಚಲು ಸಹಾಯವಾಗುತ್ತಿದೆ ಎಂದು ದೇವಸ್ಥಾನದ ಜನ ಜಾಗೃತಿ ವೇದಿಕೆ ಅಧ್ಯಕ್ಷ ವಿಶ್ವಾಸ ಬಿ. ಸಾವಂತ ಆರೋಪಿಸಿದರು.
ಗುರುವಾರ ಮಹಾದೇವ ದೇವಸ್ಥಾನದ ಬಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದತ್ತಿ ತಿದ್ದುಪಡಿ ಕಾಯ್ದೆ ಪ್ರಕಾರ 26.6.2012ರಿಂದ ಬಾಡಾದ ಮಹಾದೇವ ವಿನಾಯಕ ದೇವಸ್ಥಾನ ಕರ್ನಾಟಕ ಸರ್ಕಾರದ ಧಾರ್ಮಿಕ ಸಂಸ್ಥೆಗಳ ಪಟ್ಟಿಗೆ ಸೇರಿದೆ. ಜಿಲ್ಲಾಡಳಿತ ಉಚ್ಚ ನ್ಯಾಯಾಲಯದ ಆದೇಶ ಪಾಲಿಸಿ ಆಡಳಿತಾಧಿಕಾರಿ ನೇಮಿಸಿದ್ದರೆ ಆಡಳಿತಾಧಿಕಾರಿಯಿಂದ ದೇವಸ್ಥಾನ ಮಂಡಳಿಗೆ ಆಡಳಿತ ಮಂಡಳಿ ನೇಮಕಗೊಂಡು ಸ್ಥಳೀಯರಿಂದ ದೇವಸ್ಥಾನದ ಆಡಳಿತ ನಡೆಸಲು ಸಾಧ್ಯವಾಗುತ್ತಿತ್ತು. ಆದರೆ, ಕಾರವಾರ ಜಿಲ್ಲಾಡಳಿತದ ಅಲಕ್ಷ್ಯ ಹಾಗೂ ವಿಳಂಬ ನೀತಿಯಿಂದಾಗಿ ಮಹಾದೇವ ದೇವಸ್ಥಾನಕ್ಕೆ ಇದುವರೆಗೂ ಆಡಳಿತ ಅಧಿಕಾರಿ ನೇಮಕ ಮಾಡಲಾಗಿಲ್ಲ ಎಂದು ಆಪಾದಿಸಿದರು.
ಅಲ್ಲದೆ, 4.5. 2011ರ ನಂತರ 1950 ಮುಂಬೈ ಪಬ್ಲಿಕ್ ಟ್ರಸ್ಟ್ ಕಾಯ್ದೆಗೆ ಒಳಪಟ್ಟ ಎಲ್ಲ ದೇವಸ್ಥಾನಗಳಿಗೆ ನ್ಯಾಯಸಮ್ಮತ ಹಕ್ಕು ಇಲ್ಲ. ಸದ್ಯ ಮಹಾದೇವ ದೇವಸ್ಥಾನ ಹಾಗೂ ಅದರ ಪರಿವಾರ ದೇವಸ್ಥಾನಗಳಿಗೆ ವರ್ಷಕ್ಕೆ ಸುಮಾರು ರು. 15ರಿಂದ 20 ಲಕ್ಷ ಆದಾಯವಿದೆ. ಆದರೆ, ಇದರ ಮೇಲ್ವಿಚಾರಣೆ ನಡೆಸುತ್ತಿರುವ ಟ್ರಸ್ಟ್ ಮಾತ್ರ ಭಕ್ತರಿಗೆ ಒಂದು ರುಪಾಯಿಯ ಲೆಕ್ಕವನ್ನೂ ತೋರಿಸುವುದಿಲ್ಲ. ಹೀಗಾಗಿ ಆದಷ್ಟು ಬೇಗ ಜಿಲ್ಲಾಡಳಿತವು ಮಹಾದೇವ ದೇವಸ್ಥಾನಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿ ಸ್ಥಳೀಯರ ಕಮಿಟಿ ರಚಿಸಬೇಕಾಗಿದೆ ಎಂದರು.
ಪ್ರೇಮಾನಂದ ಚಿಪಕರ, ಸುರೇಶ ಕೆ. ಬಿಣಗೇಕರ, ದೀಪಕ ಡಿ. ಕಳಸ್, ಸುರೇಶ್ ವಿ. ನಾಯ್ಕ, ಪಾಂಡುರಂಗ ಜಿ. ಶೆಟ್ಟಿ ಮತ್ತಿತರರು ಇದ್ದರು.