ವಕೀಲ ಮೋಹನ ನಿಲುವಿಗೆ ಆಕ್ರೋಶ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 21
ಮಹದಾಯಿ ನ್ಯಾಯಾಧೀಕರಣದಲ್ಲಿ ರಾಜ್ಯದ ಪರ ವಾದಿಸುತ್ತಿರುವ ತಂಡದಲ್ಲಿರುವ ನ್ಯಾಯವಾದಿ ಮೋಹನ ಕಾತರಕಿ ಅವರು ಸರ್ಕಾರದ ದಿಕ್ಕು ತಪ್ಪಿಸುವುದರ ಜತೆಗೆ ಜನರಿಗೂ ಮೋಸ ಮಾಡುತ್ತಿದ್ದಾರೆ ಎಂದು ರಾಜ್ಯ ರೈತ ಸೇನಾ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ನದಿ ತಿರುವು ಯೋಜನೆ ಕೈಗೆತ್ತಿಕೊಳ್ಳುವುದಕ್ಕೆ ಅವಕಾಶವಿದ್ದರೂ, ಜನ ಮತ್ತು ಸರ್ಕಾರವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮಹದಾಯಿ ನದಿಯಲ್ಲಿ ಕರ್ನಾಟಕದ ಪಾಲು 50 ಟಿಎಂಸಿ ನೀರಿದೆ. ಕುಡಿಯುವ ಮತ್ತು ಕೃಷಿಗೆ ಮಹಾದಾಯಿ ನದಿ ತಿರುವು ಯೋಜನೆಗೆ ಅನುಮತಿ ನೀಡಿ ಎಂದು ಸರ್ಕಾರ ನ್ಯಾಯಾಧೀಕರಣದ ಎದುರು ಕೇಳುತ್ತಿಲ್ಲ ಎಂದು ಹೇಳಿದರು.
ಕೆಲವು ದಿನಗಳ ಹಿಂದೆ ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ನ್ಯಾಯವಾದಿ ಕಾತರಕಿ ಅವರು, ನ್ಯಾಯಾಧೀಕರಣದ ಎದುರು ಕೃಷಿ ಬಳಕೆಗೆ ನೀರು ಬೇಕು ಎಂದು ಕೇಳುವುದು ಸಾಧ್ಯವಿಲ್ಲ. 2051ರಲ್ಲಿನ ಜನಸಂಖ್ಯೆಯನ್ನು ಗಮನದಲ್ಲಿರಿಸಿಕೊಂಡು 7.5 ಟಿಎಂಸಿ ಕುಡಿಯುವ ನೀರು ಬೇಕು ಎಂದು ನ್ಯಾಯಾಧೀಕರಣದ ಎದುರು ಬೇಡಿಕೆ ಮಂಡಿಸಿದ್ದೇವೆ ಎಂದು ಹೇಳಿದ್ದರು.
ಮಹದಾಯಿ ತಿರುವು ಯೋಜನೆಗೆ ಸಂಬಂಧಿಸಿದಂತೆ ಖಾಸಗಿ ವಿದ್ಯುತ್ ಕ್ಷೇತ್ರದ ಲಾಬಿ ಜೋರಾಗಿ ನಡೆಯುತ್ತಿದೆ. ಕರ್ನಾಟಕಕ್ಕೆ ವಿದ್ಯುತ್ ಮಾರಿ ಗೋವಾ ರಾಜ್ಯಕ್ಕೆ ನೀರು ಹರಿದುಹೋಗುವಂತೆ ಮಾಡುವುದು ಈ ಲಾಬಿಯ ಹುನ್ನಾರ. ಮಲಪ್ರಭಾ ನದಿಗೆ ನೀರಿನ ಒಳ ಹರಿವು ಕಡಿಮೆಯಾಗಿರುವ ಇಂದಿನ ದಿನಗಳಲ್ಲಿ ರಾಜ್ಯಕ್ಕೆ ವಿದ್ಯುತ್ಗಿಂತ ನೀರಿನ ಅಗತ್ಯ ಹೆಚ್ಚಿದೆ. ಹೀಗಾಗಿ ನ್ಯಾಯಾಧೀಕರಣದ ಮುಂದೆ 24 ಟಿಎಂಸಿ ನೀರನ್ನು ಪಡೆಯುವುದಕ್ಕೆ ಹೋರಾಟ ಮಾಡಬೇಕು.
ಕುಡಿಯುವ ನೀರು ಮತ್ತು ಕೃಷಿ ಉದ್ದೇಶಕ್ಕೆ ನದಿ ತಿರುವು ಯೋಜನೆ ಕೈಗೆತ್ತಿಕೊಳ್ಳುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಒಂದು ವೇಳೆ ಜಲ ವಿದ್ಯುತ್ ಯೋಜನೆ ಕೈಗೆತ್ತಿಕೊಂಡರೂ ನೀರು ಕರ್ನಾಟಕಕ್ಕೆ ಹರಿದುಬರಬೇಕು. 1980ರಿಂದ ಮಹದಾಯಿ ನದಿ ಬಳಸಿಕೊಂಡು ರಾಜ್ಯದಲ್ಲಿ ವಿದ್ಯುತ್ ಉತ್ಪಾದಿಸುವುದಕ್ಕೆ ಖಾಸಗಿ ಕ್ಷೇತ್ರದ ಕಂಪನಿಯೊಂದು ಭಾರಿ ಪ್ರಮಾಣದಲ್ಲಿ ಲಾಬಿ ಮಾಡುತ್ತಿದೆ ಎಂದು ಹೇಳಿದರು.
ಮಲಪ್ರಭಾ ನದಿ ಅಣೆಕಟ್ಟಿನಲ್ಲಿ ಈಗ 37 ಟಿಎಂಸಿ ನೀರನ್ನು ಮಾತ್ರ ಹಿಡಿದಿಡಬಹುದಾಗಿದೆ. 38 ಟಿಎಂಸಿ ನೀರನ್ನು ಸಂಗ್ರಹಿಸುವ ಸಾಮರ್ಥ್ಯವಿರುವ ನವೀಲುತೀರ್ಥ ಅಣೆಕಟ್ಟು, ಹೂಳು ಮತ್ತಿತರ ಕಾರಣಗಳಿಂದಾಗಿ ಕೇವಲ 27 ಟಿಎಂಸಿ ನೀರನ್ನು ಮಾತ್ರ ಹಿಡಿದಿಟ್ಟುಕೊಳ್ಳುತ್ತಿದೆ. 1972ರಲ್ಲಿ ನಿರ್ಮಾಣವಾಗಿರುವ ಈ ಅಣೆಕಟ್ಟು ಕೇವಲ ಮೂರು ಬಾರಿ ಮಾತ್ರ ಭರ್ತಿಯಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯಪ್ರಧಾನ ಕಾರ್ಯದರ್ಶಿ ಶಂಕರ ಅಂಬಲಿ, ನವಲಗುಂದ ತಾಲೂಕು ಘಟಕದ ಅಧ್ಯಕ್ಷ ಸಿ.ಎಸ್. ನವಲಗುಂದ, ನರಗುಂದ ತಾಲೂಕು ಅಧ್ಯಕ್ಷ ಶರಣಗೌಡ ಪಾಟೀಲ, ಹನುಮಂತಗೌಡ ತಿರಕನಗೌಡರ, ಧಾರವಾಡ ಜಿಲ್ಲಾಧ್ಯಕ್ಷ ಸುಭಾಷ ಬಾಳಿಕಾಯಿ ಇದ್ದರು.
ಸುಪ್ರೀಂಗೆ ಮೇಲ್ಮನವಿ
ಮಹದಾಯಿ ನ್ಯಾಯಾಧೀಕರಣದಲ್ಲಿ ಕರ್ನಾಟಕ ರಾಜ್ಯ ತನ್ನ ಪಾಲಿನ ನೀರಿಗಾಗಿ ಸಮರ್ಥ ವಾದ ಮಂಡಿಸುತ್ತಿಲ್ಲ. ಸುಪ್ರೀಂ ಕೋರ್ಟ್ನಲ್ಲಿ ಈ ಕುರಿತು ಅಕ್ಟೋಬರ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾಖಲಿಸಲಾಗಿದ್ದು. ಜುಲೈ 2013ರಲ್ಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸುಜಾರಿ ಮಾಡಿದೆ.
- ವೀರೇಶ ಸೊಬರದಮಠ
ರಾಜ್ಯ ರೈತ ಸೇನಾ ಘಟಕದ ಅಧ್ಯಕ್ಷ