ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಏಕರೂಪ ಶಿಕ್ಷಣ ನೀತಿ ಜಾರಿಗೆ ಒತ್ತಾಯ

Mainashree
Updated On : 23 Nov 2013, 11:03 am

ಹುಬ್ಬಳ್ಳಿ: ಬೆಳಗಾವಿಯಲ್ಲಿ ನ. 25ರಿಂದ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಸಮಾನ ಶಾಲೆಗಳಲ್ಲಿ ಏಕರೂಪ ಸಮಾನ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಬೇಕೆಂದು ಜಯ ಕರ್ನಾಟಕ ಸಂಘಟನೆ ಆಗ್ರಹಿಸಿದೆ.
ಈ ಕುರಿತಂತೆ ಸಂಘಟನೆ ಹಮ್ಮಿಕೊಂಡಿರುವ ಜಾಗೃತಿ ಜನಾಂದೋಲನ ಕಾರ್ಯಕ್ರಮಕ್ಕೆ ಸಾಹಿತಿಗಳು, ಶಿಕ್ಷಣ ತಜ್ಞರು, ಚಿಂತಕರು ಸೇರಿದಂತೆ ಶ್ರೀಸಾಮಾನ್ಯರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂವಿಧಾನ ರಾಷ್ಟ್ರಕ್ಕೆ ಬುನಾದಿಯಾದಂತೆಯೇ ಪಠ್ಯಕ್ರಮ ಶಿಕ್ಷಣಕ್ಕೆ ಬುನಾದಿ. ಎಲ್ಲರಿಗೂ ಸಮಾನ ಶಿಕ್ಷಣ ಲಭ್ಯವಾದಾಗ ಮಾತ್ರ ದೇಶ ಹಾಗೂ ರಾಜ್ಯದಲ್ಲಿ ವಾಸವಾಗಿರುವ ಸಮಾಜಗಳು ಅಭಿವೃದ್ಧಿ ಹೊಂದಲು ಸಾಧ್ಯ. ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಇಂತಹ ಏಕತ್ರ ಅಭಿಪ್ರಾಯ ವ್ಯಕ್ತಪಡಿಸಿದವರು ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ, ಸಾಹಿತಿ ಡಾ. ಚಂದ್ರಶೇಖರ ಪಾಟೀಲ (ಚಂಪಾ) ಹಾಗೂ ಡಾ. ಎಂ.ಎಂ. ಕಲಬುರ್ಗಿ.
ಇಂದು ಶಿಕ್ಷಣ ಕ್ಷೇತ್ರ ಎಂಬುದು ಅಸಮಾನತೆ, ತಾರತಮ್ಯ ಹಾಗೂ ವ್ಯವಹಾರದ ಕ್ಷೇತ್ರವಾಗಿ ಪರಿಣಮಿಸಿದೆ. ಜಾಗತೀಕರಣದ ಪಿತೂರಿಯಿಂದಾಗಿ ಈ ಕ್ಷೇತ್ರದಲ್ಲಿ 8-9 ನೀತಿಗಳು ಜಾರಿಗೆ ಬಂದಿವೆ. ಅಲ್ಲದೇ, ಆ ಮೂಲಕ ಖಾಸಗೀಕರಣಕ್ಕೆ ಹೆಚ್ಚೆಚ್ಚು ಒತ್ತು ನೀಡುತ್ತೀವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರದ ಆಡಳಿತ ಇಂದು ಶಿಕ್ಷಣ ಕ್ಷೇತ್ರದಲ್ಲಿನ ಲಾಬಿಯ ಹಿಡಿತದಲ್ಲಿದೆ. ಈ ಲಾಬಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ಅತ್ಯಂತ ವ್ಯವಸ್ಥಿತವಾಗಿ ಮುಂದುವರೆಸಿಕೊಂಡು ಹೊರಟಿದೆ. ಆದರೆ, ಈ ಉದ್ದೇಶ ಫಲಿಸದಂತೆ ಜಯ ಕರ್ನಾಟಕ ಸಂಘಟನೆ 3 ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದೆ.
ಕನಿಷ್ಠ 12ನೇ ತರಗತಿವರೆಗೆ ಶಿಕ್ಷಣ ರಾಷ್ಟ್ರೀಕರಣ ಮಾಡಬೇಕು. ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಮಾತ್ರ ರಾಷ್ಟ್ರೀಯ ನೀತಿಗೆ ಒಳಪಡಿಸಿ ಮಿಕ್ಕ ವಿಷಯಗಳಲ್ಲಿ ಯಾವ್ಯಾವ ಅಂಶಗಳು ಹೊಂದಿರಬೇಕು ಎಂಬುದನ್ನು ತೀರ್ಮಾನಿಸುವ ಅಧಿಕಾರ ದೇಶದ ಆಯಾ ರಾಜ್ಯ ಸರ್ಕಾರಗಳಿಗೆ ನೀಡಬೇಕು. ಇದರಿಂದ ಪ್ರಾಂತೀಯ ಭಾಷೆ ಹಾಗೂ ಸಂಸ್ಕೃತಿ, ಭೌಗೋಳಿಕ ಹಿನ್ನೆಲೆ ವಿದ್ಯಾರ್ಥಿಗಳಿಗೆ ತಿಳಿಸಲು ಅನುಕೂಲವಾಗುತ್ತದೆ ಎಂದೂ ಅವರು ಅಭಿಪ್ರಾಯಪಟ್ಟರು.
ಸಂವಿಧಾನದ ಪ್ರಮುಖ ತತ್ವಗಳಾದ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಅರ್ಥ ಮಾಡಿಕೊಳ್ಳದ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಸ್ವಹಿತಾಸಕ್ತಿಗೆ ಒತ್ತುಕೊಟ್ಟ ಪರಿಣಾಮ ಸರ್ವರಿಗೂ ಸಮಾನ ಶಿಕ್ಷಣ ಎಂಬ ಮಾತು ಇಂದಿಗೂ ಕನಸಾಗಿಯೇ ಉಳಿದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸುವುದಿರಲಿ ಇಂದಿಗೂ ಸಹ ಒಂದು ಬಲಿಷ್ಠ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿಕೊಳ್ಳಲು ತನ್ನದೇ ಆದ ಸಮಗ್ರ ಶೈಕ್ಷಣಿಕ ನೀತಿಯನ್ನು ರೂಪಿಸಿಕೊಂಡಿಲ್ಲ. ಜತೆಗೆ ಮನೋವೈಜ್ಞಾನಿಕ ತಳಹದಿಯ ಮೇಲೆ ವಯೋವಾನಕ್ಕನುಸಾರವಾಗಿ ಕ್ರಮಬದ್ಧವಾದ ತರಗತಿವಾರು-ವಿಷಯವಾರು ಶಿಕ್ಷಣ ಒದಗಿಸುವ ಬದಲು ಬಹು ವರ್ಗ ಬೋಧನೆಯನ್ನು ಸಮರ್ಥಿಸಿ ಸಾಂಸ್ಥೀಕರಣಗೊಳಿಸಲಾಗಿದೆ ಎಂದೂ ಅಸಮಾಧಾನ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗದಂತಹ ಮಹತ್ವಪೂರ್ಣ ಚರ್ಚೆ ನಡೆಸಲು ಎಲ್ಲ ಪಕ್ಷಗಳ ಶಾಸಕರು ಪ್ರಯತ್ನಿಸಬೇಕು. ಅಲ್ಲದೇ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಏಕರೂಪ ನೀತಿ ಜಾರಿಗೆ ಕಾಯ್ದೆ ರೂಪಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ, ಜಯ ಕರ್ನಾಟಕ ಬೆಂಗಳೂರು ಜಿಲ್ಲೆ ಅಧ್ಯಕ್ಷ ಆರ್. ಚಂದ್ರಪ್ಪ, ಕಾರ್ಯಾಧ್ಯಕ್ಷ ಬಿ. ಗುಣರಂಜನ್ ಶೆಟ್ಟಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಶೆ.ಭೋ. ರಾಧಾಕೃಷ್ಣ, ರಾಜ್ಯ ಯುವ ಘಟಕ ಅಧ್ಯಕ್ಷ ಅಣ್ಣಪ್ಪ ಓಲೇಕರ್, ಹು-ಧಾ ಉಸ್ತುವಾರಿ ಪ್ರಸಾದ ಶೆಟ್ಟಿ, ಧಾರವಾಡ ಜಿಲ್ಲಾಧ್ಯಕ್ಷ ಸುಧೀರ ಮುಧೋಳ, ಹುಬ್ಬಳ್ಳಿ ನಗರ ಅಧ್ಯಕ್ಷ ಅಭಿಷೇಕ ಇಜಾರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement