ಸಚಿವ ಲಾಡ್ ತಲೆದಂಡ: ಜಿಲ್ಲೆ ಭವಿಷ್ಯ?
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ತಲೆದಂಡಕ್ಕೆ ಜಿಲ್ಲೆಯ ಜನತೆಯಲ್ಲಿ ಮುಂದೇನು...? ಎಂಬ ಪ್ರಶ್ನೆ ಎದುರಾಗಿದೆ.
ಹೌದು, ಸಂತೋಷ ಲಾಡ್ ದಿಢೀರ್ ರಾಜೀನಾಮೆಯಿಂದ ಜಿಲ್ಲೆಯಲ್ಲಿ ಕಥೆ ಮುಂದೇನು ಎಂಬ ಚಿಂತೆ ಶುರುವಾಗಿದೆ. ಸಚಿವ ಸಂತೋಷ ಲಾಡ್ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವುದಾಗಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್. ಆರ್. ಹಿರೇಮಠ ಆರೋಪಿಸಿದ್ದರು. ಆದರೆ ಸಚಿವ ಲಾಡ್ ತಾವು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿಲ್ಲ ಹಿರೇಮಠ ದಾಖಲೆ ಇದ್ದರೆ ಬಿಡುಗಡೆಗೊಳಿಸಲಿ ಎಂದು ಸವಾಲು ಹಾಕಿದ್ದರು. ಏತನ್ಮಧ್ಯೆ ಎಸ್.ಆರ್. ಹಿರೇಮಠ ಅವರು ಸಂತೋಷ ಲಾಡ್ ವಿಎಸ್ಎಲ್ ಮೈನಿಂಗ್ ಕಂಪನಿಯಲ್ಲಿ ಪಾಲುದಾರರಾಗಿದ್ದಾರೆಂಬ ದಾಖಲೆ ಬಿಡುಗಡೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಸಂತೋಷ ಲಾಡ್ ವಿಎಸ್ಎಲ್ ಮೈನಿಂಗ್ ಕಂಪನಿ ತಮಗೆ ಸೇರಿದ್ದಲ್ಲ, ಈ ಮೈನಿಂಗ್ ಕಂಪನಿಯೊಂದಿಗೆ ಯಾವುದೇ ನಂಟಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಇಷ್ಟು ಸಾಲದ್ದಕ್ಕೆ ಸಚಿವ ಸಂತೋಷ್ ಲಾಡ್ ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡಿರುವ ಬಗ್ಗೆ ಯಾವುದೇ ದಾಖಲೆ ತಮಗೆ ಬಂದು ತಲುಪಿಲ್ಲ. ಹೀಗಿರುವಾಗ ಸಂತೋಷ ಲಾಡ್ ಅವರನ್ನು ಸಂಪುಟದಿಂದ ಕೈಬಿಡುವ ಪ್ರಶ್ನೆಯೇ ಉದ್ಭವಿಸದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದರು.
ಇಷ್ಟಿದ್ದಾಗ್ಯೂ ಸಚಿವ ಲಾಡ್ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಪ್ರತಿಪಕ್ಷಗಳ, ಸಾಮಾಜಿಕ ಕಾರ್ಯಕರ್ತರ ಒತ್ತಡ ಹೆಚ್ಚಾಗಿದ್ದರಿಂದ, ಲಾಡ್ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ.
ಜಿಲ್ಲೆಗೆಟುಕಲೇ ಇಲ್ಲ: ಸಚಿವ ಲಾಡ್ ಅಧಿಕಾರ ಸ್ವೀಕರಿಸಿದಾಗಿನಿಂದಲೇ ಜಿಲ್ಲೆಯ ಜನತೆಯ ಕೈಗೆಟುಕಲೇ ಇಲ್ಲ. ಸಚಿವರಾದ ಕೂಡಲೇ ಅವರು ಉತ್ತರಾಖಂಡಕ್ಕೆ ಹೋಗಿ ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡ ಕನ್ನಡಿಗರಿಗೆ ನೆರವಿನ ಹಸ್ತ ಚಾಚಿದ್ದರು. ಅಲ್ಲೇ ನೆಲೆಯೂರಿ ಕನ್ನಡಿಗರ ರಕ್ಷಣೆ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಸಚಿವರಾದ ಕೂಡಲೇ ಜಿಲ್ಲೆಗೆ ಹೆಚ್ಚಿನ ಸಮಯ ಕೊಡದೇ ಉತ್ತರಾಖಂಡದಲ್ಲಿಯೇ ಇದ್ದು ಸಂತ್ರಸ್ತರ ನೆರವಿನಲ್ಲಿ ಲಾಡ್ ತೊಡಗಿದ್ದರಿಂದ ಸಹಜವಾಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿತ್ತು. ಆದರೆ ಲಾಡ್ ಕೈಗೊಂಡಿದ್ದ ಉತ್ತಮ ಕಾರ್ಯಕ್ಕೆ ಜಿಲ್ಲೆಯ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ, ಜಿಲ್ಲಾ ಉಸ್ತುವಾರಿ ಸಚಿವರು ತಮಗೆ ಲಭ್ಯವಿಲ್ಲ ಎನ್ನುವುದನ್ನು ಯೋಚಿಸಿಯೂ ಇರಲಿಲ್ಲ.
ಇದಾದ ಬಳಿಕ ಜಿಲ್ಲೆಗಾಗಮಿಸಿದ ಸಚಿವ ಲಾಡ್, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಿದ್ದರು. ಮೊಟ್ಟ ಮೊದಲು ಕಿಮ್ಸ್ ಅವ್ಯವಸ್ಥೆ ಸರಿಪಡಿಸುವ ಕೆಲಸ ಮಾಡಿದರು. ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನತೆಯನ್ನು ಬಹುವಾಗಿ ಕಾಡುತ್ತಿರುವ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಬಹುಬೇಗನೆ ಮುಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.
ಕಾಡಿದ ವಿಘ್ನ: ಇನ್ನೇನು ಜಿಲ್ಲೆ ಅಭಿವೃದ್ಧಿಯತ್ತ ಮುಖ ಮಾಡಿದೆ ಎನ್ನುತ್ತಿರುವಾಗಲೇ ಗಣಿ ಅಕ್ರಮದ ಆರೋಪ ಲಾಡ್ ಅವರನ್ನು ಸುತ್ತುಕೊಂಡಿತು. ಈ ಆರೋಪದಿಂದ ಮುಕ್ತರಾಗಬೇಕೆಂದು ಲಾಡ್ ಕೆಲಕಾಲ ದೆಹಲಿಯಲ್ಲಿ ಬೀಡುಬಿಟ್ಟಿದ್ದರು. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲಿ ಆಗಮಿಸುತ್ತಿಲ್ಲ ಎನ್ನುವ ಆರೋಪ ಜನರಿಂದ ಕೇಳಿ ಬಂದ ಹಿನ್ನೆಲೆಯಲ್ಲಿ ಕಳೆದ ವಾರವಷ್ಟೇ ಜಿಲ್ಲೆಗೆ ಆಗಮಿಸಿದ ಲಾಡ್, ಒಂದರ ಹಿಂದೊಂದು ಸಭೆ ನಡೆಸಿ ಜಿಲ್ಲೆಯ ಪ್ರಗತಿ ಪರಿಶೀಲಿಸಿದ್ದರು. ರಾತ್ರೋರಾತ್ರಿ ರಸ್ತೆ ಸಮಸ್ಯೆ ಗಮನಿಸುವುದು ಸೇರಿದಂತೆ ಜನರ ಸಮಸ್ಯೆ ಆಲಿಸಿ, ಅಭಿವೃದ್ಧಿ ಕಾರ್ಯಕ್ಕೆ ಮುನ್ನುಡಿ ಬರೆದಿದ್ದರು. ಜಿಲ್ಲಾ ಉಸ್ತುವಾರಿ ಸಚಿವರ ಆಸ್ಥೆಯಿಂದ ಸಮಸ್ಯೆ ಪರಿಹಾರವಾಗಲಿದೆ ಎನ್ನುತ್ತಿರುವಾಗಲೇ ಲಾಡ್ ಸಚಿವ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಜಿಲ್ಲೆಯ ಗತಿ?: ಮೊದಲೇ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತಗೊಂಡಿತ್ತು. ಏತನ್ಮಧ್ಯೆ ಲಾಡ್ ಸಚಿವ ಸ್ಥಾನ ತ್ಯಜಿಸಿರುವುದರಿಂದ ಜಿಲ್ಲೆಯ ಪ್ರಗತಿಗೆ ಬ್ರೇಕ್ ಬೀಳಲಿದೆ. ಜತೆಗೆ ಜಿಲ್ಲೆಗೆ ಮುಂದಿನ ವಾರಸುದಾರರು ಯಾರು? ಜಿಲ್ಲೆಯ ಅಭಿವೃದ್ಧಿ ಹೇಗೆ? ಎಂಬಿತ್ಯಾದಿ ಪ್ರಶ್ನೆ ಜನರನ್ನು ಕಾಡಲಾರಂಭಿಸಿದೆ.
ಮುಂದಿನ ವಾರಸುದಾರ ಯಾರು?
ಸಂತೋಷ ಲಾಡ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಂಗತಿ, ಜಿಲ್ಲೆಯ ಜನತೆಯಲ್ಲಿ ಮುಂದೇನು ಎಂಬ ಪ್ರಶ್ನೆ ಹುಟ್ಟು ಹಾಕಿದೆ. ಲಾಡ್ ಸಚಿವರಾದ ಬಳಿಕ ಜಿಲ್ಲೆಗೆ ಸಿಕ್ಕಿದ್ದೇ ಅಪರೂಪ. ಉತ್ತರಾಖಂಡ ಪ್ರವಾಹ, ಅಕ್ರಮ ಗಣಿಗಾರಿಕೆಯ ಆರೋಪ ಲಾಡ್ ಅವರನ್ನು ಸುತ್ತುಕೊಂಡಿದ್ದರಿಂದ ಜಿಲ್ಲೆಯತ್ತ ಅವರು ಗಮನ ಕೊಡಲೇ ಇಲ್ಲ. ಇವೆಲ್ಲದರ ಮಧ್ಯೆ ಕಳೆದ ವಾರವಷ್ಟೇ ಜಿಲ್ಲೆಗಾಗಮಿಸಿ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದ ಲಾಡ್ ಇದೀಗ ರಾಜೀನಾಮೆ ಕೊಟ್ಟಿದ್ದಾರೆ. ಹೀಗಾಗಿ ಜಿಲ್ಲೆಯ ಪ್ರಗತಿಗೆ ಬ್ರೇಕ್ ಬೀಳಲಿದೆ. ಜತೆಗೆ ಜಿಲ್ಲೆಗೆ ಮುಂದಿನ ವಾರಸುದಾರರು ಯಾರು? ಜಿಲ್ಲೆಯ ಅಭಿವೃದ್ಧಿ ಹೇಗೆ? ಎಂಬ ಚಿಂತೆ ಜನರನ್ನು ಕಾಡಲಾರಂಭಿಸಿದೆ.