ಆತ್ಮಾವಲೋಕನಕ್ಕೆ ರಂಗಭೂಮಿ ಪ್ರಬಲ ಮಾಧ್ಯಮ
ಧಾರವಾಡ: ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಮ್ಮ ಜೀವನದ ಭಾಗ. ಕ್ರೀಡೆ ಮನುಷ್ಯನನ್ನು ದೈಹಿಕ ಸದೃಢತೆಯೆಡೆಗೆ ಕೊಂಡೊಯ್ಯದರೆ, ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮಾನಸಿಕ ಬೆಳವಣಿಗೆಗೆ ಪೂರಕವಾಗಿ ಕೆಲಸ ನಿರ್ವಹಿಸುತ್ತವೆ ಎಂದು ಪ್ರೊಬೇಶನರಿ ಐಎಎಸ್ ಅಧಿಕಾರಿ ಚಾರುಲತಾ ಹೇಳಿದರು.
ಇಲ್ಲಿನ ರಂಗಾಯಣದ ಪಂ. ಬಸವರಾಜ ರಾಜಗುರು ರಂಗ ಮಂದಿರದಲ್ಲಿ ರಂಗಾಯಣವು ರಾಯಾಪುರ ನಿರಾಶ್ರಿತರ ಪರಿಹಾರ ಕೇಂದ್ರದ ನಿವಾಸಿಗಳಿಗೆ ಏರ್ಪಡಿಸಿದ್ದ ರಂಗ ತರಬೇತಿ ಶಿಬಿರದ ಸಮಾರೋಪ ಹಾಗೂ ಕಡೆಗೋಲು ರಂಗ ಪ್ರಯೋಗ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಖ್ಯಾತ ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಮಾತನಾಡಿ, ನಿರಾಶ್ರಿತರ ಕೇಂದ್ರದಲ್ಲಿ ಕೇವಲ ಭಿಕ್ಷುಕರಿರುವುದಿಲ್ಲ. ಮಾನಸಿಕ ಅಸ್ವಸ್ಥರೂ ಇರುತ್ತಾರೆ. ಅವರನ್ನು ಸರಿಯಾಗಿ ಪರಿಶೀಲಿಸಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪ್ರತಿಭೆ, ಸಾಮರ್ಥ್ಯ ಇದ್ದೇ ಇರುತ್ತದೆ. ಅದನ್ನು ಗುರುತಿಸುವ ಅಗತ್ಯವಿದೆ. ನಿರಾಶ್ರಿತರಲ್ಲಿ ಇರುವ ಪ್ರತಿಭೆ ಗುರುತಿಸಿ, ಅವರಲ್ಲಿ ಆತ್ಮವಿಶ್ವಾಸ ತುಂಬಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ರಂಗಾಯಣ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಜಾನನ ಮಹಾಲೆಯವರನ್ನು ಸನ್ಮಾನಿಸಲಾಯಿತು. ಬೆಳಗಾವಿ ಜಿಲ್ಲೆ ಪ್ರೊಬೇಶನರಿ ಐಎಎಸ್ ಅಧಿಕಾರಿ ಸುಂದರೇಶಬಾಬು ಹಾಗೂ ಸಮಾಜ ಕಲ್ಯಾಣ ಅಧಿಕಾರಿ ಅಶೋಕ ಚಲವಾದಿ, ನಿರಾಶ್ರಿತ ಪರಿಹಾರ ಕೇಂದ್ರದ ಅಧೀಕ್ಷಕ ದಿವಾಕರ ಸಂಕಿನದಾಸರ, ಡಾ. ದ. ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಶ್ಯಾಮಸುಂದರ ಬಿದರಕುಂದಿ ಅಧ್ಯಕ್ಷತೆ ವಹಿಸಿ ವಹಿಸಿದ್ದರು. ರಂಗಾಯಣದ ಆಡಳಿತಾಧಿಕಾರಿ ಕೆ.ಎಚ್. ಚೆನ್ನೂರ ಸ್ವಾಗತಿಸಿದರು, ಶಿವಾನಂದ ಹೂಗಾರ ವಂದಿಸಿದರು. ಅನಿಲ ದೇಸಾಯಿ ನಿರೂಪಿಸಿದರು. ನಂತರ ವಿಜಯಕುಮಾರ ದೊಡಮನಿ ನಿರ್ದೇಶನ ಹಾಗೂ ದೀಪಾ ಕುರವತ್ತಿ ಸಹ ನಿರ್ದೇಶನದಲ್ಲಿ ಹಾಡು, ನೃತ್ಯ, ಕಡೆಗೋಲು ರಂಗ ಪ್ರಯೋಗ ಪ್ರದರ್ಶನಗೊಂಡವು.