ರಾಜಕಾರಣಿಗಳು ಟಿಪ್ಪು ಇತಿಹಾಸ ಅರಿಯಲಿ
ಕನ್ನಡಪ್ರಭ ವಾರ್ತೆ, ಧಾರವಾಡ, ನ. 24
ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆ ಅಂಗವಾಗಿ ಇಲ್ಲಿನ ಟಿಪ್ಪು ಸುಲ್ತಾನ ಆರ್ಟ್ ಆ್ಯಂಡ್ ಕಲ್ಚರಲ್ ಸಂಸ್ಥೆ ಹಿರಿಯ ಪತ್ರಕರ್ತ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರಿಗೆ ಮೈಸೂರ ಹುಲಿ ಟಿಪು ್ಪ ಸುಲ್ತಾನ ಪ್ರಶಸ್ತಿ ನೀಡಿ ಗೌರವಿಸಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಾಡೋಜ ಡಾ.ಪಾಟೀಲ ಪುಟ್ಟಪ್ಪ, ಇಂದಿನ ರಾಜಕಾರಣಿಗಳು ತಮ್ಮ ಮಕ್ಕಳಿಗಾಗಿ ರಾಜ್ಯ ಹಾಗೂ ದೇಶವನ್ನೇ ಮಾರಲು ಹೊರಟಿದ್ದನ್ನು ನೋಡುತ್ತಿದ್ದೇವೆ. ಆದರೆ, ಟಿಪ್ಪು ಸುಲ್ತಾನರು ದೇಶದ ಸ್ವಾತಂತ್ರ್ಯಕ್ಕಾಗಿ ಯುದ್ಧ ಮುಂದುವರೆಸಲು ತಮ್ಮ ಇಬ್ಬರು ಮಕ್ಕಳನ್ನೇ ಬ್ರಿಟಿಷರಲ್ಲಿ ಒತ್ತೆ ಇಡುವ ಸಂದರ್ಭ ಬಂದಾಗಲೂ ಧೃತಿಗೆಡದೆ, ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ರಾಷ್ಟ್ರವೀರ ಟಿಪ್ಪು ಸುಲ್ತಾನರನ್ನು ಕೆಲವು ಜಾತಿವಾದಿಗಳು ಅಪಪ್ರಚಾರ ಮಾಡುತ್ತಿರುವುದು ಖಂಡನೀಯ. ಟಿಪ್ಪು ಸುಲ್ತಾನರು ತಮ್ಮ ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ ಇಟ್ಟುಕೊಂಡಿದ್ದರು. ಅವರ ಕಾಲದಲ್ಲಿಯೇ ಪ್ರಪ್ರಥಮವಾಗಿ ಕನ್ನಡದಲ್ಲಿ ನಾಣ್ಯಗಳು ಚಲಾವಣೆಯಲ್ಲಿದ್ದವು. ಟಿಪ್ಪು ಸುಲ್ತಾನರು ಹಿಂದೂ ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿದ್ದರು ಎಂದರು.
ಸಾಹಿತಿ ಮೋಹನ ನಾಗಮ್ಮನವರ ಮಾತನಾಡಿ, ದೇಶ ರಕ್ಷಣೆಗಾಗಿ ಭಾರತೀಯರಾದ ನಾವೆಲ್ಲರೂ ಜಾತಿ, ಮತ, ಭೇದ, ಮರೆತು ಒಂದಾಗಬೇಕು. ತನ್ಮೂಲಕ ನಮ್ಮ ವೀರ ರಾಷ್ಟ್ರ ನಾಯಕರ ತ್ಯಾಗ, ಬಲಿದಾನ ವ್ಯರ್ಥವಾಗದಂತೆ ರಾಷ್ಟ್ರ ರಕ್ಷಣೆಗಾಗಿ ಪಣ ತೊಟ್ಟು ಎಂತಹ ತ್ಯಾಗಕ್ಕಾದರೂ ಸನ್ನದ್ಧರಾಗಿರಬೇಕು. ಶಾಂತಿ ಸೌಹಾರ್ದತೆಯಿಂದ ಬಾಳಿ ಇತರರಿಗೆ ಮಾದರಿಯಾಗಿ ದೇಶಕ್ಕೆ ಗಂಡಾಂತರ ಬಾರದಂತೆ ಜಾಗರೂಕತೆ ವಹಿಸಿ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಬೇಕು ಎಂದರು.
ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಟ್ರಸ್ಟ್ ಅಧ್ಯಕ್ಷ ಇರ್ಷಾದ ಬಿಸ್ತಿ, ಉಪಾಧ್ಯಕ್ಷ ಮಹಮ್ಮದ ಇಸಾಕ ನಾಲಬಂದ, ಜೈಲಾನಿ ಬಿಸ್ತಿ, ಶುಕೂರಅಹ್ಮದ ಸುರಣಗಿ, ಅತ್ತಾಉಲ್ಲಾ ಮನ್ನಾನಾಯಕ, ಗುಲಜಾರ ಮೂರಬ, ಎನ್.ಜಿ. ಬಿಜಾಪುರ ಮುಂತಾದವರು ಇದ್ದರು.