ಸುದ್ದಿ ಸಂಕ್ಷೇಪ
ಚಿದಂಬರ ತೊಟ್ಟಿಲೋತ್ಸವ
ಧಾರವಾಡ: ಇಲ್ಲಿನ ದೇಶಪಾಂಡೆ ಗಲ್ಲಿಯಲ್ಲಿ ಶಿವ ಚಿದಂಬರರು ಸ್ಥಾಪಿಸಿದ ತಾರಕೇಶ್ವರ ದೇವಸ್ಥಾನದಲ್ಲಿ ಚಿದಂಬರ ತೊಟ್ಟಿಲೋತ್ಸವ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು. ತೊಟ್ಟಿಲೋತ್ಸವ ಅಂಗವಾಗಿ ಚಿದಂಬರ ದಿಂಡಿ ಸಂಚಾಲಕ ಎಸ್.ಆರ್. ಕುಲಕರ್ಣಿ ಅವರು ವಿಶೇಷವಾಗಿ ಚಿದಂಬರ ಜನ್ಮೋತ್ಸವ ಬಗ್ಗೆ ಮತ್ತು ಚಿದಂಬರ ಪವಾಡಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ನಿಮಿತ್ತ ನಾರಾಯಣ ಪಾಟೀಲ, ಅರುಣ ಕುಲಕರ್ಣಿ ಬೆಳಗ್ಗೆ ಕಾಕಡಾರತಿ, ರುದ್ರಾಭಿಷೇಕ ಅಲಂಕಾರ ಪೂಜೆ ನಡೆಯಿತು. ನಂತರ ತಾರಕೇಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಅನುರಾಧಾ ಕುಲಕರ್ಣಿ, ಗಿರಿಜಾ ಕುಲಕರ್ಣಿ, ಚೈತ್ರಾ ದೇಶಪಾಂಡೆ, ಚೇತನಾ ದೀಕ್ಷಿತ, ಸುನಂದಾ ಮುರಗೋಡ, ಪುಷ್ಪಾ ದೇಶಪಾಂಡೆ, ಸುಧಾ ಇನಾಮದಾರ, ಶಾರದಾ ಪಾಟೀಲ, ವಿನಾಯಕ ಜೋಶಿ, ಶ್ರೀಧರ ದೇಶಪಾಂಡೆ, ವಿಶ್ವನಾಥ ಕುಲಕರ್ಣಿ ಇದ್ದರು.
ದೇವಸ್ಥಾನದ ಬೀಗ ಮುರಿದು ಕಳ್ಳತನ
ಹುಬ್ಬಳ್ಳಿ: ಇಲ್ಲಿನ ಅರವಿಂದ ನಗರದ ಹುಲಿಗೆಮ್ಮ ದೇವಸ್ಥಾನದ ಬಾಗಿಲು ಮುರಿದು ದೇವಿಗೆ ಅಲಂಕರಿಸಲಾಗಿದ್ದ 1230 ಗ್ರಾಂ ಬೆಳ್ಳಿ ಆಭರಣ, 4 ಗ್ರಾಂನ ಚಿನ್ನಾಭರಣ ಮತ್ತು ತಾಮ್ರದ ಪೂಜಾ ಪರಿಕರಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೇವಸ್ಥಾನದ ಬಾಗಿಲಿಗೆ ಹಾಕಿದ್ದ ಕೀಲಿಯನ್ನು ಮುರಿದು ಚಿನ್ನಾಭರಣ ಸೇರಿದಂತೆ ಇನ್ನಿತರ ವಸ್ತುಗಳನ್ನು ಕಳ್ಳರು ದೋಚಿದ್ದಾಗಿ ಸೋಮಶೇಖರ ಚಲವಾದಿ ಅವರು ದೂರು ನೀಡಿದ್ದಾರೆ. ಇನ್ಸ್ಪೆಕ್ಟರ್ ಶಿವಾನಂದ ಚಲವಾದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ವೀರಶೈವ ಮಹಾಸಭಾಕ್ಕೆ ಗೀತಾ ನೇಮಕ
ಕಲಘಟಗಿ: ಅಖಿಲ ಭಾರತ ವೀರಶೈವ ಮಹಾಸಭೆಯ ಮಹಿಳಾ ವಿಭಾಗದ ಕಾರ್ಯದರ್ಶಿಯನ್ನಾಗಿ ತಾಲೂಕಿನ ಬಗಡಗೇರಿ ಗ್ರಾಮದ ಗೀತಾ ಮರಲಿಂಗಣ್ಣವರ ಅವರನ್ನು ಆಯ್ಕೆ ಮಾಡಲಾಗಿದೆ. ಅಖಿಲ ಭಾರತ ವೀರಶೈವ ಮಹಾಸಭೆಯ ಅಧಕ್ಷ ಸಚಿವ ಡಾ. ಶಾಮನೂರು ಶಿವಶಂಕರಪ್ಪ ನೇಮಕ ಮಾಡಿದ್ದಾರೆ.
ಇಂದು ಎನ್ನೆಸ್ಸೆಸ್ ಶಿಬಿರ
ಕಲಘಟಗಿ: ಸ್ಥಳೀಯ ಜಿ.ಇ. ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ತಾಲೂಕಿನ ಜಮ್ಮಿಹಾಳ ಗ್ರಾಮದಲ್ಲಿ ನ. 25ರಿಂದ ಡಿಸೆಂಬರ್ 1ರ ವರೆಗೆ ಎನ್ನೆಸ್ಸೆಸ್ ವಾರ್ಷಿಕ ಶಿಬಿರ ಆಯೋಜಿಸಿದೆ. ಅಂದು ಸಂಜೆ 4ಕ್ಕೆ ಶಿಬಿರ ಉದ್ಘಾಟನೆಯಾಗಲಿದೆ. ಜಿ.ಇ. ಸಂಸ್ಥೆ ಅಧ್ಯಕ್ಷ ಡಾ. ಎಚ್.ಬಿ. ಪಾಟೀಲ ಅಧ್ಯಕ್ಷತೆ ವಹಿಸುವರು. ಜಿಪಂ ಅಧ್ಯಕ್ಷ ಎಸ್.ಸಿ. ಅಗಡಿ, ಸದಸ್ಯೆ ಕಸ್ತೂರಿ ಧಾರವಾಡ, ತಾಪಂ. ಅಧ್ಯಕ್ಷ ಎಂ.ಎಫ್. ಜಾವುರ, ಉಪಾಧ್ಯಕ್ಷೆ ಕಾಶವ್ವ ಮುಂದಿನಮನಿ, ಗ್ರಾಪಂ ಅಧ್ಯಕ್ಷೆ ಶಾಂತವ್ವ ವಾಲಿಕಾರ, ಉಪಾಧ್ಯಕ್ಷ ವೀರಭದ್ರಪ್ಪ ಪತ್ತೂರ, ಶಿಕ್ಷಣ ಇಲಾಖೆಯ ಗಣೇಶ ಪೂಜಾರ, ತಹಸೀಲ್ದಾರ್ ಕೆ.ಆರ್. ಕುಲಕರ್ಣಿ, ಪಿ.ಎಸ್. ಗಿರಿರಾಜ್, ವಿ.ಜಿ. ಪೋಳ ಪಾಲ್ಗೊಳ್ಳುತ್ತಾರೆಂದು ಎನ್ನೆಸ್ಸೆಸ್ ಸಂಯೋಜಕ ವಿ.ಎನ್. ಹಾಲಿ ತಿಳಿಸಿದ್ದಾರೆ.