ಅನಧಿಕೃತ ಜಾಹೀರಾತು ಫಲಕ ತೆರವು
ಹುಬ್ಬಳ್ಳಿ: ನಗರದ ವಿವಿಧ ಬಡಾವಣೆಯಲ್ಲಿದ್ದ ಅನಧಿಕೃತ ಜಾಹೀರಾತು ಫಲಕಗಳನ್ನು ಮಹಾನಗರ ಪಾಲಿಕೆ ಸಿಬ್ಬಂದಿ ಸೋಮವಾರ ತೆಗೆದು ಹಾಕಿದರು.
ಚೆನ್ನಮ್ಮ ವೃತ್ತ, ಕೊಪ್ಪಿಕರ ರಸ್ತೆ ಸೇರಿದಂತೆ ವಿವಿಧೆಡೆಯ 10ಕ್ಕೂ ಹೆಚ್ಚು ಫಲಕಗಳನ್ನು ತೆಗೆದುಹಾಕಿದ ಸಿಬ್ಬಂದಿ, ನಿಗದಿತ ಶುಲ್ಕ ಭರಣ ಮಾಡುವ ಜತೆಗೆ ಜಾಹೀರಾತು ಫಲಕಗಳನ್ನು ನಿಯಮಾನುಸಾರ ಲಗತ್ತಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಜಾಹೀರಾತು ಫಲಕಗಳಿಂದ ಸುಮಾರು ರು. 1.16 ಕೋಟಿ ಹಣ ಪಾಲಿಕೆಗೆ ಬರಬೇಕಿತ್ತು, ಇದುವರೆಗೆ ರು. 70 ಲಕ್ಷ ಮಾತ್ರ ಶುಲ್ಕ ವಸೂಲಾಗಿದೆ. ಜಾಹೀರಾತು ಫಲಕಗಳ ಕೆಳಗೆ ಫಲಕ ಪ್ರದರ್ಶನದ ಅವಧಿ, ಜಾಹೀರಾತು ಸಂಸ್ಥೆಯ ಹೆಸರು ಹಾಗೂ ಮತ್ತಿತರ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕೆಂದು ಪಾಲಿಕೆ ಅಧಿಕಾರಿಗಳು ಸೂಚಿಸಿದ್ದಾರೆ.