ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನಿವೃತ್ತಿ ಸೌಲಭ್ಯ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ

Mainashree
Updated On : 26 Nov 2013, 10:44 am

ಹುಬ್ಬಳ್ಳಿ: ನಿವೃತ್ತಿ ಸೌಲಭ್ಯ ಬಿಡುಗಡೆ ಮಾಡುವಂತೆ ಒತ್ತಾಯಿಸಿ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿವೃತ್ತ ನೌಕರರು ಸಾರಿಗೆ ಸಂಸ್ಥೆಯ ಕೇಂದ್ರೀಯ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.
ಸಾರಿಗೆ ಸಂಸ್ಥೆ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಗದಗ, ಹಾವೇರಿ ಉತ್ತರ ಕನ್ನಡ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ ವಿಭಾಗಗಳಲ್ಲಿ ಚಾಲಕ, ನಿರ್ವಾಹಕ, ಮೆಕ್ಯಾನಿಕಲ್‌ನಂತಹ ಹುದ್ದೆ ನಿರ್ವಹಿಸಿ ನಿವೃತ್ತಿ ಹೊಂದಿದವರಿಗೆ ಸೌಲಭ್ಯ ನೀಡಲಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಮೂರು ವರ್ಷಗಳಿಂದ ನಿವೃತ್ತಿ ಸೌಲಭ್ಯಕ್ಕಾಗಿ ಸುಮಾರು 1900 ನೌಕರರು ಪರದಾಡುತ್ತಿದ್ದಾರೆ. ಈ ಕುರಿತು ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಸರ್ಕಾರ ಮಧ್ಯಸ್ಥಿಕೆ ವಹಿಸಿಲ್ಲ. ಇದರಿಂದಾಗಿ ನಿವೃತ್ತಿ ಹೊಂದಿರುವ ನೌಕರರ ಬದುಕು ಮೂರಾಬಟ್ಟೆಯಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಈ ಸಂದರ್ಭ ಮಾತನಾಡಿದ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಚ್.ಜಿ. ಕೊಪ್ಪದ, ಕಳೆದ ಮೂರು ವರ್ಷಗಳಿಂದ ಸಾರಿಗೆ ಸಂಸ್ಥೆ ಆರ್ಥಿಕ ಮುಗ್ಗಟ್ಟಿನ ಕಾರಣ ಕೊಟ್ಟು ನಿವೃತ್ತಿ ಸೌಲಭ್ಯ ನೀಡುವಲ್ಲಿ ಹಿಂದೇಟು ಹಾಕುತ್ತಿದೆ. ನಿವೃತ್ತಿ ಸೌಲಭ್ಯದಿಂದಲೇ ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಹೊಂದಿರುವ ನಿವೃತ್ತ ನೌಕರರು ಒಪ್ಪತ್ತಿನ ಊಟಕ್ಕೆ ತೊಂದರೆ ಅನುಭವಿಸುವಂತಾಗಿದೆ.
ಸಾರಿಗೆ ಸಂಸ್ಥೆಯ ನಿವೃತ್ತಿ ಸೌಲಭ್ಯ ನೀಡುವಲ್ಲಿಯೂ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಉನ್ನತ ಹುದ್ದೆಯಲ್ಲಿರುವವರಿಗೆ ಮಾತ್ರ ತಕ್ಷಣ ನಿವೃತ್ತಿ ಸೌಲಭ್ಯ ನೀಡುತ್ತಿದೆ. ಆದರೆ,ಕೆಳ ಹಂತದ ನೌಕರರನ್ನು ಗೋಳಾಡಿಸುತ್ತಿದೆ. ಈ ವಿಷಯವಾಗಿ ಸರ್ಕಾರ ಮಧ್ಯಸ್ಥಿಕೆ ವಹಿಸಿ ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಸರ್ಕಾರ ಈ ಕೂಡಲೇ ಸ್ಪಂದಿಸಿ ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ನಿರ್ಧಾರಕ್ಕೆ ಬರಬೇಕು. ಇಲ್ಲದೇ ಹೋದಲ್ಲಿ ಸುವರ್ಣಸೌಧ ಚಲೋ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಆ ಬಳಿಕ ವಾಯವ್ಯ ಸಾರಿಗೆ ಸಂಸ್ಥೆ ಕೇಂದ್ರೀಯ ಕಚೇರಿಯ ವ್ಯವಸ್ಥಾಪಕರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಲಾಯಿತು.
ಪ್ರತಿಭಟನೆಯಲ್ಲಿ ಆರ್.ಬಿ. ಎಲಿಸೂರ, ಎಸ್.ಬಿ. ಧಾರವಾಡ, ಎಂ.ಎನ್. ಪ್ರಭು, ವಿ.ವಿ. ಮತ್ತೂರ, ಆರ್. ಸಿ. ಮಠದ, ಹೊಸಮನಿ, ಎಸ್.ಎಸ್. ಗುದ್ಲಿ, ಎ.ಎ. ಜವಳಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement