ಮಕ್ಕಳ ಸಹಾಯವಾಣಿ ಚಾಲನೆ
ಹುಬ್ಬಳ್ಳಿ: ಬಿಡಿಎಸ್ಎಸ್ ಸಂಸ್ಥೆ ಆಶ್ರಯದಲ್ಲಿ ಆನಂದ ನಗರದ ಸರ್ಕಾರಿ ಹಿರಿಯ ಉರ್ದು ಪ್ರೌಢ ಶಾಲೆಯಲ್ಲಿ ಸೋಮವಾರ ಬೆಳಗ್ಗೆ ಮಕ್ಕಳ ಸಹಾಯವಾಣಿ 1098 ಓಪನ್ ಹೌಸ್ (ತೆರೆದ ಮನೆ) ಕಾರ್ಯಕ್ರಮದ ಉದ್ಘಾಟನೆ ನೆರವೇರಿತು.
ಮಹಾನಗರ ಪಾಲಿಕೆ ಸದಸ್ಯ ಸತೀಶ ಹಾನಗಲ್ ಉದ್ಘಾಟಿಸಿದರು. ಮಕ್ಕಳ ಸಹಾಯವಾಣಿ ಸಂಯೋಜಕ ರವಿ ಭಂಡಾರಿ, ಸಹಾಯವಾಣಿ ಬಗ್ಗೆ ಮಾಹಿತಿ ನೀಡಿದರಲ್ಲದೇ ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮ ವಿವರಿಸಿದರು.
ಶಾಲೆಯ ಮುಖ್ಯೋಧ್ಯಾಪಕಿ ಎಸ್.ಎಚ್. ಕುಲಕರ್ಣಿ, ಮಕ್ಕಳ ಸಹಾಯವಾಣಿ 1098 ಕಾರ್ಯಕ್ರಮ ಮಕ್ಕಳಿಗಾಗಿಯೇ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಹಾನಗಲ್ ಅವರಿಗೆ ಶಾಲೆಗೆ ಅವಶ್ಯಕವಾಗಿ ಬೇಕಾಗಿರುವ ಪೀಠೋಪಕರಣಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದಂತೆ ಮನವಿ ಪತ್ರ ಅರ್ಪಿಸಲಾಯಿತು. ಶಿಕ್ಷಕಿ ಕೆ.ಎ. ಹೆಸರೂರ, ಸಹ ಶಿಕ್ಷಕಿ ಎಸ್.ಎಚ್. ಹಿರೇಮಠ, ಎಂ.ಜಿ. ರಾಣೆಬೆನ್ನೂರ, ಎಸ್.ಎಂ. ಶೇಖ, ಸಹಾಯವಾಣಿ ಜಿಲ್ಲಾ ಸಂಯೋಜಕ ಬಸವರಾಜ ಬಗಡಗೇರಿ, ಬಾಬಾಜಾನ ಮೇಗಡೆ ಮತ್ತಿತರರು ಇದ್ದರು.