ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸುದ್ದಿ ಸಂಕ್ಷೇಪ

Mainashree
Updated On : 26 Nov 2013, 10:45 am

ಉಟೋಪಚಾರ ಕಾರ್ಯಕ್ರಮ
ಹುಬ್ಬಳ್ಳಿ: ಅಸೆಂಟ್ ರೌಂಡ್ ಟೇಬಲ್ 153 ವತಿಯಿಂದ ಇತ್ತೀಚಿಗೆ ಶ್ರೀಸಿದ್ದಾರೂಢ ಮಠದಲ್ಲಿರುವ ಅಂಧ ಮಕ್ಕಳ ಶಾಲೆಯಲ್ಲಿ ಉಟೋಪಚಾರ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಉಣಕಲ್ ಸಿದ್ದಪ್ಪಜ್ಜ ಸರ್ಕಾರಿ ಶಾಲೆಗೆ 40 ಡೆಸ್ಕ್‌ಗಳನ್ನು ವಿತರಿಸಲಾಯಿತು. ನಂತರ ಎಪಿಎಂಸಿ ಸರ್ಕಾರಿ ಶಾಲೆ ಹಮಾಲಿ ಕಾಲನಿಯ ಚಿಕ್ಕಮಕ್ಕಳಿಗೆ ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಅಮರಗೋಳ ಕೆಎಚ್‌ಬಿ ಕಾಲನಿಯಲ್ಲಿ 135 ಸಸಿಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು. ಅಸೆಂಟ್ ರೌಂಡ್ ಟೇಬಲ್ 153ರ ಅಧ್ಯಕ್ಷ ಗುರುರಾಜ ಪಂಚಾಳ, ನಿತೀನ್ ಶಣೈ, ರಾಜೇಶ ಭಂಡಾರಿ, ಪ್ರಮೋದ ಕದಂ, ಅಮಿತ್ ಬೆಳಮಕರ, ಪ್ರವೀಣ ನಾಯಕ, ಪವನ ಕುಲಕರ್ಣಿ, ಅವಿನಾಶ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ನೋಂದಣಿಗೆ ಅವಕಾಶ
ಧಾರವಾಡ; ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಕಾಲೇಜು ಮೈದಾನದಲ್ಲಿ 2014 ಜನೇವರಿ 7, 8 ಹಾಗೂ 9 ರಂದು ಜರುಗಲಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಬಯಸುವ ಸಾಹಿತ್ಯಾಸಕ್ತರು ಪ್ರತಿನಿಧಿಯಾಗಿ ಹೆಸರು ನೋಂದಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕಸಾಪ ನಿಗದಿಪಡಿಸಿರುವ ರು. 300 ಪ್ರತಿನಿಧಿ ಶುಲ್ಕವನ್ನು ನೇರವಾಗಿ ಡಿಸೆಂಬರ್ 10ರ ಒಳಗಾಗಿ  ಬೆಂಗಳೂರಿನ ಕಸಾಪಕ್ಕೆ ಭರಿಸುವ ಮೂಲಕ ಪ್ರತಿನಧಿಗಳಾಗಬಹುದಾಗಿದೆ. ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯಾಸಕ್ತರಿಗೆ ಅನುಕೂಲವಾಗುವ ದೃಷ್ಟಿಯಿಂದ ನಗರದ ಕೆಸಿಸಿ ಬ್ಯಾಂಕ್ ಬಳಿಯ ತಾಲೂಕು ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಪತ್ತು ಬೆಳೆಸುವ ಸಹಕಾರಿ ಸಂಘದ ಕಚೇರಿಯಲ್ಲಿ ಮಡಿಕೇರಿ ಸಾಹಿತ್ಯ ಸಮ್ಮೇಳನದ ಪ್ರತಿನಿಧಿಗಳ ನೋಂದಣಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿದೆ. ಮಾಹಿತಿಗಾಗಿ ಮೊ: 96326 47070 ಅಥವಾ 98866 49375 ಅಥವಾ 89712 11603ಗೆ ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ಇಸ್ಕಾನ್‌ನಿಂದ ಸಾತ್ವಿಕ ಆಹಾರ ಮಳಿಗೆ
ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದ ಶಿರೂರ ಪಾರ್ಕ್‌ನಲ್ಲಿ ಇಸ್ಕಾನ್ ವತಿಯಿಂದ ಕೃಷ್ಣಾಮೃತ ಶುದ್ಧ ಸಾತ್ವಿಕ ಆಹಾರ ಮಳಿಗೆ ಆರಂಭಿಸಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ಇಸ್ಕಾನ್ ಅಧ್ಯಕ್ಷ ರಾಜೀವಲೋಚನ ದಾಸ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಸ್ಕಾನ್ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತಿದೆ. ಈ ಸಮಾಜಸೇವಾ ಕಾರ್ಯಗಳಿಗೆ ಸಂಪನ್ಮೂಲ ಕ್ರೋಢಿಕರಿಸುವ ನಿಟ್ಟಿನಲ್ಲಿ ಶುದ್ಧ ಸಾತ್ವಿಕ ಆಹಾರದ ಮಳಿಗೆ ತೆರೆಯಲಾಗುತ್ತಿದೆ. ಇಸ್ಕಾನ್ ಅಕ್ಷಯ ಪಾತ್ರೆ ಯೋಜನೆಯಡಿ ಧಾರವಾಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಸರ್ಕಾರ ಕೂಡ ಬಿಸಿಯೂಟ ಯೋಜನೆಯಡಿ ಆರ್ಥಿಕ ನೆರವು ನೀಡುತ್ತಿದೆ. ಆದರೆ ಸರ್ಕಾರ ನೀಡುವ ಆರ್ಥಿಕ ನೆರವು ಯೋಜನೆಯನ್ನು ಸಮರ್ಪಕವಾಗಿ ನಡೆಸಿಕೊಂಡು ಹೋಗುವುದಕ್ಕೆ ಸಾಲುತ್ತಿಲ್ಲ. ಆದ್ದರಿಂದ ಯೋಜನೆ ಪರಿಣಾಮಕಾರಿ ಜಾರಿಗೆ ಸಂಪನ್ಮೂಲ ಕ್ರೋಡೀಕರಿಸುವುದಕ್ಕೆ ಕೃಷ್ಣಾಮೃತ ಆಹಾರ ಮಳಿಗೆ ಆರಂಭಿಸಲಾಗುತ್ತಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಇಂತಹ ಯೋಜನೆಯನ್ನು ಇಸ್ಕಾನ್ ಜಾರಿಗೊಳಿಸಿದ್ದು, ಶಿರೂರ ಪಾರ್ಕ್‌ನಲ್ಲಿ ಪ್ರಥಮ ಮಳಿಗೆ ಆರಂಭಿಸಲಾಗುತ್ತಿದೆ. ನಂತರ ಅವಳಿ ನಗರದ ವ್ಯಾಪ್ತಿಯಲ್ಲಿ ಇನ್ನು ಎರಡು ಕೃಷ್ಣಾಮೃತ ಮಳಿಗೆ ಆರಂಭಿಸಲಾಗುವುದು. ಅವಳಿ ನಗರದಲ್ಲಿ ಕೃಷ್ಣಾಮೃತ ಮಳಿಗೆಯ ವಹಿವಾಟು ನೋಡಿ ಬೆಳಗಾವಿ ಸೇರಿದಂತೆ ಇನ್ನಿತರ ನಗರಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದರು. ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಇಸ್ಕಾನ್‌ನಿಂದ ಸಾಂಸ್ಕೃತಿಕ ಉತ್ಸವ, ಕೃಷ್ಣ ಸ್ಪರ್ಧೆ, ಗೋಲೋಕ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಅದೇ ರೀತಿ ಯುವಜನರಲ್ಲಿ ಸಾತ್ವಿಕ ಆಹಾರ ಪದ್ಧತಿ ಬೆಳೆಸುವ ನಿಟ್ಟಿನಲ್ಲಿ ಕೃಷ್ಣಾಮೃತ ಆಹಾರ ಮಳಿಗೆಯ ಜೊತೆಗೆ ವಿವಿಧ ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement