ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕೃಷಿ ವಲಯ ಸಾಲ ಪ್ರಮಾಣ ಏರಿಸಿ

Lingaraj Badiger
Updated On : 27 Nov 2013, 11:00 am

ಧಾರವಾಡ: ಕೃಷಿ ವಲಯಕ್ಕೆ ಬ್ಯಾಂಕುಗಳು ನೀಡುತ್ತಿರುವ ಕೃಷಿ ಸಾಲ ಪ್ರಮಾಣ ಕಡಿಮೆಯಾಗುತ್ತಿದ್ದು, ಕಳೆದ ಸೆಪ್ಟೆಂಬರ್ ಅಂತ್ಯದಲ್ಲಿ ಕೇವಲ ಶೆ. 40ರಷ್ಟು ಕೃಷಿ ಸಾಲ ನೀಡಲಾಗಿದೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಿ, ಸಾಲ ಪ್ರಮಾಣ ಹೆಚ್ಚಿಸಿಬೇಕೆಂದು ಜಿಪಂ ಸಿಇಒ ಪಿ.ಎ. ಮೇಘಣ್ಣವರ ತಿಳಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ನಡೆದ ಲೀಡ್ ಬ್ಯಾಂಕ್‌ನ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಕ್ರಮ ಕೈಗೊಳ್ಳಲಾಗುವುದು: ಜಿಲ್ಲೆಯಲ್ಲಿನ ಪ್ರತಿಯೊಂದು ಬ್ಯಾಂಕ್‌ಗಳು ನೀಡಿದ ಸಾಲ ಮರಳಿ ಬರುವುದಿಲ್ಲ ಎಂಬ ಋಣಾತ್ಮಕ ಮನೋಭಾವನೆಯಿಂದಾಗಿ ರೈತರಿಗೆ ಕೃಷಿ ಸಾಲ ನೀಡದೇ ಇರುವುದು ಆದ್ಯತಾ ವಲಯಕ್ಕೆ ಕಡಿಮೆ ಸಾಲ ನೀಡಿಕೆಯಾಗಿದೆ. ಆದ್ದರಿಂದ ಇವುಗಳನ್ನು ಆಯಾ ಬ್ಯಾಂಕ್ ವ್ಯವಸ್ಥಾಪಕರು ಸರಿಪಡಿಸಿಕೊಂಡು ಕೃಷಿ ಸಾಲ ಪ್ರಮಾಣ ಹೆಚ್ಚಿಸಬೇಕು. ಇಲ್ಲದಿದ್ದಲ್ಲಿ ಅಂತಹ ಬ್ಯಾಂಕ್‌ನ ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್ ಕ್ರಮ ಕೈಕೊಳ್ಳುವುದು ಎಂದು ಬ್ಯಾಂಕ್ ಪ್ರತಿನಿಧಿಗಳನ್ನು ಎಚ್ಚರಿಸಿದರು.
ವಿಜಯಾ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಶ್ರೀಧರ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ನೀಡಲಾಗುತ್ತಿರುವ ಒಟ್ಟಾರೆ ಸಾಲದ ಪ್ರಮಾಣ ಕಳೆದ ಸಾಲಿನಲ್ಲಿ ಶೇ. 72ರಷ್ಟು ಇತ್ತು. ಈ ಬಾರಿ ಶೇ. 58 ಬಂದಿದೆ. ಇದು ನಿಜಕ್ಕೂ ಕಳವಳಕಾರಿ ಎಂದ ಅವರು, ಅರ್ಥಿಕ ಒಳಗೊಳ್ಳುವಿಕೆ ಕುರಿತಂತೆ 2000ಕ್ಕಿಂತ ಹೆಚ್ಚಿನ ಜನಸಂಖ್ಯೆಯುಳ್ಳ ಎಲ್ಲ ಗ್ರಾಮಗಳಲ್ಲಿ ಬ್ಯಾಂಕಿನ ಶಾಖೆ ಅಥವಾ ಪ್ರತಿನಿಧಿಯನ್ನು ನಿಯೋಜಿಸುವ ಕಾರ್ಯ ಪೂರ್ಣಗೊಂಡಿದೆ. ಜಿಲ್ಲೆಯ 231 ಗ್ರಾಮಗಳ ಪೈಕಿ 9 ಗ್ರಾಮಗಳಲ್ಲಿ ಮಾತ್ರ ಆರ್ಥಿಕ ಒಳಗೊಳ್ಳುವಿಕೆ ಕಾರ್ಯ ಪೂರ್ಣಗೊಳ್ಳುವುದು ಬಾಕಿ ಇದೆ ಎಂದು ತಿಳಿಸಿದರು.
ಪಿಎಲ್‌ಪಿ ವರದಿಯ ಕುರಿತು ನಬಾರ್ಡ್ ಸಹಾಯಕ ಪ್ರಬಂಧಕ ವೈ.ಎನ್. ಮಹದೇವಯ್ಯ ಮಾತನಾಡಿ, ವ್ಯವಸ್ಥಿತ ಅಭಿವೃದ್ಧಿಯ ಧ್ಯೇಯದ ಈ ವರದಿಯು 2012-13ರಿಂದ 2016-17ರ ಅವಧಿಯ 12ನೇ ಪಂಚವಾರ್ಷಿಕ ಯೋಜನೆಗೆ ಅನುಗುಣವಾಗಿ ಹಾಗೂ ಹಿಂದಿನ ಸಾಲಿನಲ್ಲಿ ಜಿಲ್ಲೆಯಲ್ಲಿ ನಡೆದ ಆರ್ಥಿಕ ಚಟಿವಟಿಕೆ ಆಧರಿಸಿ ವಾಸ್ತವಿಕ ಅಂಶಗಳನ್ನು ಗಣನೆಗೆ ತೆಗೆದುಕೊಂಡು ತಯಾರಿಸಲಾಗಿದೆ. 2014-15ರ ಸಾಲಿನಲ್ಲಿ ಬೆಳೆ ಉತ್ಪಾದನಾ ವಲಯಕ್ಕೆ ರು. 965 ಕೋಟಿ, ಕೃಷಿ ಅವಧಿ ಸಾಲಕ್ಕೆ ರು. 299 ಕೋಟಿ, ಕೃಷಿ ಪೂರಕ ಹೈನುಗಾರಿಕೆ, ಸ್ವಯಂ ಉದ್ಯೋಗ, ಬೆಳೆ ಸಂರಕ್ಷಣೆ ಗೋಡೌನ್ ಇತ್ಯಾದಿಗಳಿಗೆ ರು. 345 ಕೋಟಿ ಹಾಗೂ ಇತರ ವಲಯದಲ್ಲಿ ರು. 945 ಕೋಟಿ ಹೀಗೆ ಜಿಲ್ಲೆಯಲ್ಲಿ ಒಟ್ಟು ರು. 2554 ಕೋಟಿ ಸಾಲ ಒದಗಿಸುವ ಅವಕಾಶವನ್ನು ಗುರುತಿಸಲಾಗಿದೆ ಎಂದರು.
ಜಿಲ್ಲೆಯ 2014-15ನೇ ಸಾಲಿನ ವಿತ್ತೀಯ ಸಾಲದ ಅವಕಾಶವುಳ್ಳ (ಪಿಎಲ್‌ಪಿ) ನಬಾರ್ಡ್ ವರದಿಯನ್ನು ಜಿಪಂ ಸಿಇಒ ಬಿಡುಗಡೆಗೊಳಿಸಿದರು. ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಸವರಾಜ ಹೂಗಾರ, ಐಎಎಸ್ ಪ್ರೊಬೇಶನರಿ ಅಧಿಕಾರಿ ಚಾರುಲತಾ, ಆರ್‌ಬಿಐ ಅಧಿಕಾರಿ ಅನಿಲ ಬಿಸ್ವಾಸ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್.ಎಂ. ಗಡಾದ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement