ತೆರೆದ ಚರಂಡಿ ಎಚ್ಚರ ತಪ್ಪಿದ್ರೆ ಅಪಾಯ!
ಹುಬ್ಬಳ್ಳಿ: ತೆರೆದ ಮ್ಯಾನ್ಹೋಲ್ಗಳ ಕಥೆ ಒಂದೆಡೆಯಾದರೆ ಚರಂಡಿ ತೆರೆದ ಮೇಲ್ಭಾಗದ ದುರಂತದ ವ್ಯಥೆ ಮತ್ತೊಂದೆಡೆ. ನಗರದ ಬಹುತೇಕ ಪ್ರದೇಶಗಳಲ್ಲಿ ಚರಂಡಿಯ ಮೇಲ್ಭಾಗ ಒಡೆದು ಹೋಗಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಘಂಟಿಕೇರಿಯಲ್ಲಿ ಮೂರು ವರ್ಷಗಳ ಹಿಂದೆ ಇಂಥ ತೆರೆದ ಚರಂಡಿಯಲ್ಲಿಯೇ ಬಾಲಕನೊಬ್ಬ ಬಿದ್ದು ಸಾವಿಗೀಡಾದ ಘಟನೆ ಜನಮಾನಸದಿಂದ ಇನ್ನೂ ಮಾಸಿಲ್ಲ. ಆದರೂ ಮಹಾನಗರ ಪಾಲಿಕೆ ಆಡಳಿತ ಇದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದೆ.
ತೆರೆದ ಚರಂಡಿಯಲ್ಲಿ ಬಿದ್ದು ಅನೇಕರು ಗಾಯಾಳುಗಳಾಗಿದ್ದಾರೆ. ಜಾನುವಾರುಗಳು, ನಾಯಿ, ಹಂದಿಗಳು ಬಿದ್ದಿವೆ. ಆದರೂ ಪಾಲಿಕೆ ಅಧಿಕಾರಿಗಳು ಈ ಚರಂಡಿಗಳನ್ನು ಸಮರ್ಪಕವಾಗಿ ಮುಚ್ಚಲು ಕ್ರಮ ಕೈಗೊಂಡಿಲ್ಲ. ಮ್ಯಾನ್ಹೋಲ್ಗಳಂತೆಯೇ ಈ ತೆರೆದ ಚರಂಡಿಗಳೂ ರಸ್ತೆ ಪಕ್ಕದಲ್ಲಿದ್ದು, ಅಪಾಯ ಆಹ್ವಾನಿಸುವಂತಿವೆ. ಜನ ಸಂಚಾರ ಹಾಗೂ ವಾಹನ ದಟ್ಟಣೆ ಹೆಚ್ಚಿರುವ ಪ್ರದೇಶದಲ್ಲಿಯೂ ತೆರೆದ ಚರಂಡಿಗಳನ್ನು ಮುಚ್ಚಿಲ್ಲ. ಪರಿಣಾಮ ಪಾದಚಾರಿಗಳು ಹಾಗೂ ವಾಹನಗಳ ಚಾಲಕರು ಸ್ವಲ್ಪ ಯಾಮಾರಿದರೂ ಸಾಕು, ಅಪಾಯಕ್ಕೀಡಾಗುವ ಸಾಧ್ಯತೆ ಇದೆ. ಇಂಥ ಕೆಲ ತೆರೆದ ಚರಂಡಿಯ ಚಿತ್ರಗಳನ್ನು ವರದಿ ಸಹಿತ ಇಲ್ಲಿ ಪ್ರಕಟಿಸಲಾಗಿದೆ.
ಮ್ಯಾನ್ಹೋಲ್ಗೆ ಟೈರ್ ಹೊದಿಕೆ
3. ಮರಾಠಾ ಕಾಲೋನಿಯಲ್ಲಿನ ಈ ತೆರೆದ ಮ್ಯಾನ್ಹೋಲ್ ಮೇಲೆ ಮುನ್ನಚ್ಚರಿಕೆ ಉದ್ದೇಶದಿಂದ ಸಾರ್ವಜನಿಕರು ಟೈರ್ ಇಟ್ಟಿದ್ದಾರೆ. ರಸ್ತೆ ಮಧ್ಯದ ಈ ತೆರೆದ ಮ್ಯಾನ್ಹೋಲ್ನಲ್ಲಿ ಅನೇಕರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಪಾದಚಾರಿಗಳು ಹಾಗೂ ಬೈಕ್ ಸವಾರರಿಗೆ ತೆರೆದ ಮ್ಯಾನ್ಹೋಲ್ ಅಪಾಯಕಾರಿಯಾಗಿದ್ದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಇದಕ್ಕೆ ಮುಚ್ಚಳಿಕೆ ಹಾಕುವತ್ತ ಗಮನ ಹರಿಸಲಿಲ್ಲ. ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಬೇಸತ್ತ ಇಲ್ಲಿನ ನಾಗರಿಕರು ಬೇರೆ ದಾರಿ ಕಾಣದೇ ಮ್ಯಾನ್ಹೋಲ್ ಮೇಲೆ ಟೈರ್ ಇಟ್ಟಿದ್ದಾರೆ.
ಬಿದ್ದರೆ ಪತ್ತೆಯಾಗುವುದೇ ಕಷ್ಟ
1. ಹಳೇ ಹುಬ್ಬಳ್ಳಿಯ ಚನ್ನಪೇಟೆಯಲ್ಲಿರುವ ಈ ತೆರೆದ ಚರಂಡಿಯೊಳಗೇನಾದರೂ ಬಿದ್ದರೆ, ಬಿದ್ದವರ ಸುಳಿವು ಅಷ್ಟು ಸರಳವಾಗಿ ಸಿಗಲಿಕ್ಕಿಲ್ಲ. ವಾಹನ ಹಾಗೂ ಜನದಟ್ಟಣೆ ಹೆಚ್ಚಿರುವ ಈ ಪ್ರದೇಶದಲ್ಲಿ ಮಕ್ಕಳ ಓಡಾಟವೂ ಹೆಚ್ಚು. ಬೀದಿನಾಯಿ, ದನ, ಹಂದಿಗಳ ಕಾಟವೂ ತಪ್ಪಿಲ್ಲ. ಅಂಥದರಲ್ಲಿ ಮಕ್ಕಳು ಅಥವಾ ಜಾನುವಾರುಗಳು ತೆರೆದ ಚರಂಡಿಯಲ್ಲಿ ಅಪ್ಪಿತಪ್ಪಿ ಕಾಲಿಟ್ಟರೋ ಮುಗಿತು, ಅವರನ್ನು ದೇವರೇ ಕಾಪಾಡಬೇಕು. ಕಳೆದ ಅನೇಕ ತಿಂಗಳಿಂದ ತೆರೆದೇ ಇರುವ ಚರಂಡಿಯ ಮೇಲ್ಭಾಗ ಮುಚ್ಚುವ ಗೋಜಿಗೆ ಪಾಲಿಕೆ ಸಿಬ್ಬಂದಿ ಹೋಗಿಲ್ಲ. ಸ್ಥಳೀಯರೇ ಒಂದೆರೆಡು ಕಲ್ಲು ಇಟ್ಟು, ಚರಂಡಿ ಮುಚ್ಚುತ್ತಾರಾದರೂ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ.
ತೆರೆದ ಮ್ಯಾನ್ಹೋಲ್ಗಳಲ್ಲಿ ಬಿದ್ದು ಗಾಯಗೊಳ್ಳುವುದು ಹುಬ್ಬಳ್ಳಿ-ಧಾರವಾಡದಲ್ಲಿ ಸಾಮಾನ್ಯ ಸಂಗತಿಯಂತಾಗಿದೆ. ಈ ಮಧ್ಯೆ ಮ್ಯಾನ್ಹೋಲ್ಗಳಲ್ಲಿ ಇಳಿದು, ಸ್ವಚ್ಛತಾ ಕಾರ್ಯ ನಡೆಸುತ್ತಿದ್ದವರೂ ಇಲ್ಲಿ ಮಾಮೂಲು. 2007ರ ಏಪ್ರಿಲ್ 6ರಂದು ಹೆಗ್ಗೇರಿ ಬಳಿ ಮ್ಯಾನ್ಹೋಲ್ನಲ್ಲಿ ಇಳಿದು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದ ಪೌರ ಕಾರ್ಮಿಕರಾದ ಶಿವಪುತ್ರಪ್ಪ ಬಳ್ಳಾರಿ ಹಾಗೂ ಶಂಕರ ಬಿಳಾರ ಸಾವಿಗೀಡಾದರು. ಮ್ಯಾನ್ಹೋಲ್ನ ಆಳಕ್ಕೆ ಇಳಿದಿದ್ದ ಇಬ್ಪರ ಸಾವಿಗೆ ಕಾರಣ ಆಮ್ಲಜನಕದ ಕೊರತೆ. ಇಂಥದ್ದೇ ಘಟನೆ 2012ರ ಜುಲೈ 22ರಂದು ಕಾರವಾರ ರಸ್ತೆಯ ಚಾಣಕ್ಯಪುರಿಯಲ್ಲಿ ಮರುಕಳಿಸಿತ್ತು. ರಮೇಶ ಲಮಾಣಿ (20) ಮತ್ತು ಸಂತೋಷ ಲಮಾಣಿ (24) ಎಂಬ ಕಾರ್ಮಿಕರು ಮ್ಯಾನ್ಹೋಲ್ನಲ್ಲಿ 12 ಅಡಿ ಆಳಕ್ಕೆ ಇಳಿದು ಸಾವಿಗೀಡಾದರು. ಮ್ಯಾನ್ಹೋಲ್ ಹಾಗೂ ತೆರೆದ ಚರಂಡಿಗಳನ್ನು ಮುಚ್ಚುವಲ್ಲಿ ಬೇಜವಾಬ್ದಾರಿತನ ತೋರುತ್ತಾ ಬಂದಿರುವ ಪಾಲಿಕೆ, ಮ್ಯಾನ್ಹೋಲ್ ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೂ ಸೂಕ್ತ ಸೌಲಭ್ಯ ಒದಗಿಸದೆ ಅವರ ಸಾವಿಗೆ ಕಾರಣವಾಗಿರುವುದು ಕಳವಳಕಾರಿ.
ಸಂತೆಯೊಳಗೊಂದು ಚರಂಡಿ
2. ಜನಸಂಚಾರ ಹೆಚ್ಚಿರುವ ದುರ್ಗದಬೈಲ್ ಶಾ ಬಜಾರ್ ಬಳಿಯ ಈ ತೆರೆದ ಚರಂಡಿಯಲ್ಲಿ ಅದೆಷ್ಟು ಜನ ಬಿದ್ದು ಗಾಯ ಮಾಡಿಕೊಂಡಿದ್ದಾರೋ? ನಿತ್ಯ ಸಂಜೆಯಾಯಿತೆಂದರೆ ಸಾಕು ಸಾವಿರಾರು ಜನರು ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಇವರಲ್ಲಿ ಮಹಿಳೆಯರು ಹಾಗೂ ಮಕ್ಕಳ ಸಂಖ್ಯೆ ಹೆಚ್ಚು. ಈ ಚರಂಡಿ ಬಗ್ಗೆ ಎಚ್ಚರಿಕೆ ನೀಡುವುದಕ್ಕಾದರೂ ಸುತ್ತಲೂ ಕಲ್ಲು ಇನ್ನಿತರ ವಸ್ತುಗಳನ್ನೂ ಇಟ್ಟಿಲ್ಲ. ಸಂತಸದಿಂದ ಕುಟುಂಬ ಸದಸ್ಯರೊಂದಿಗೆ ಮಾರುಕಟ್ಟೆಗೆ ಬರುವ ಜನರು, ಚರಂಡಿಯಲ್ಲಿ ಬಿದ್ದು ಗಾಯ ಮಾಡಿಕೊಂಡು ಹೋದ ಉದಾಹರಣೆಗಳಿಗೇನೂ ಕಮ್ಮಿ ಇಲ್ಲ.
ಎಚ್ಚರ ವಹಿಸದಿದ್ದರೆ ಅಪಾಯ
4. ಮೇಲ್ಭಾಗ ಒಡೆದಿರುವ ಈ ಚರಂಡಿ ಗಣೇಶಪೇಟದಲ್ಲಿದೆ. ತೆರೆದ ಚರಂಡಿ ಸುತ್ತಲೂ ಜನವಸತಿ ಪ್ರದೇಶವಿದ್ದು, ಜನತೆ ಸ್ವಲ್ಪ ಎಚ್ಚರ ತಪ್ಪಿದರೂ ಚರಂಡಿಯಲ್ಲಿ ಬೀಳುವುದು ಖಚಿತ. ಈ ಪ್ರದೇಶದಲ್ಲಿ ವಿದ್ಯುತ್ ಸೌಕರ್ಯವೂ ಅಷ್ಟಕ್ಕಷ್ಟೇ ಇರುವುದರಿಂದ ರಾತ್ರಿ ವಾಹನ ಸವಾರರು ಹೆಚ್ಚಿನ ಎಚ್ಚರಿಕೆ ಣವಹಿಸಲೇಬೇಕು. ಮಕ್ಕಳಂತೂ ಈ ಚರಂಡಿಯಲ್ಲಿ ಬಿದ್ದರೆ ಪರಿಸ್ಥಿತಿ ಊಹಿಸಲೂ ಅಸಾಧ್ಯ. ಮಳೆಗಾಲದಲ್ಲಂತೂ ರಸ್ತೆ ಯಾವುದೋ, ತೆರೆದ ಚರಂಡಿ ಹಾಗೂ ಮ್ಯಾನ್ಹೋಲ್ಗಳು ಯಾವುವೋ ಅರಿಯಲಾರದಂಥ ದುಸ್ಥಿತಿ ಇದೆ
ತೆರೆದ ಮ್ಯಾನ್ಹೋಲ್ ಅಪಾಯ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ತಿಳಿದಿಲ್ಲವೇ? ಈ ಮ್ಯಾನ್ಹೋಲ್ಗಳಲ್ಲಿ ಜನ ಬಿದ್ದು ಗಾಯಗೊಳ್ಳುವ ಘಟನೆ ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಪಾಲಿಕೆ ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧವಿಲ್ಲವೆನ್ನುವಂತೆ ವರ್ತಿಸುತ್ತಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಗಮನವೇ ಇಲ್ಲ. ತೆರಿಗೆ ವಸೂಲಿ ಮಾತ್ರ ಕಟ್ಟುನಿಟ್ಟಾಗಿ ಕೈಗೊಳ್ಳುವ ಅಧಿಕಾರಿಗಳು, ಜನತೆಗೆ ಮೂಲಸೌಲಭ್ಯ ಕಲ್ಪಿಸುವಲ್ಲಿ ಹಿಂದೇಟು ಹಾಕುತ್ತಿರುವುದು ಖೇದನೀಯ. ಇನ್ನಾದರೂ ಅಧಿಕಾರಿಗಳು ಜನತೆಗೆ ಸ್ಪಂದಿಸುವ ಕೆಲಸಕ್ಕೆ ಕೈಹಾಕಲಿ.
- ಸುಧಾಕರ ಭೈರೋಜಿ, ಹುಬ್ಬಳ್ಳಿ