ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಗಾಂಧೀಜಿ ಚುನಾವಣೆಗೆ ನಿಂತರೂ ಗೆಲ್ಲಲ್ಲ

Lingaraj Badiger
Updated On : 28 Nov 2013, 11:02 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 27
'ಸ್ವತಃ ಮಹಾತ್ಮ ಗಾಂಧೀಜಿ ಧರೆಗಿಳಿದು ಬಂದು ಚುನಾವಣೆಗೆ ಸ್ಪರ್ಧಿಸಿದರೆ ಬಹುಶಃ ಗೆಲ್ಲಲಿಕ್ಕಿಲ್ಲ. ಹೀಗಾಗಿಯೇ ನಾನು ರಾಜಕೀಯ ಸಹವಾಸದಿಂದ ದೂರ ಉಳಿದಿದ್ದೇನೆ'.
ಹೀಗೆಂದವರು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ. ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳೊಂದಿಗೆ ಬುಧವಾರ ಆಯೋಜಿಸಿದ್ದ ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಇಂದಿನ ರಾಜಕೀಯ ವ್ಯವಸ್ಥೆಯ ಬಗ್ಗೆ ಸಿಡಿಮಿಡಿಗೊಂಡರು. ರಾಜಕೀಯ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಹಣ, ಹೆಂಡ, ಜಾತಿ, ಮತ, ಪಂಥವೇ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ರಾಜಕೀಯ ಪ್ರವೇಶಿಸಿದ ಮಾತ್ರಕ್ಕೆ ಎಲ್ಲವೂ ಬದಲಾವಣೆಯಾಗಲು ಸಾಧ್ಯವಿಲ್ಲ. ವ್ಯವಸ್ಥೆಯಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ತರಲು ಭ್ರಷ್ಟಾಚಾರ ಮುಕ್ತವಾಗಿಸಲು ರಾಜಕೀಯವೊಂದೇ ಮಾರ್ಗವಲ್ಲ. ಹೀಗಾಗಿ, ರಾಜಕೀಯ ಮಾರ್ಗ ಬಿಟ್ಟು ಕಾಲೇಜು ವಿದ್ಯಾರ್ಥಿಗಳೊಂದಿಗೆ, ಜನರೊಂದಿಗೆ ಬೆರೆತು ಅವರೊಂದಿಗೆ ಸಂವಾದ ನಡೆಸಿ ಜನರ ಮನಸ್ಸು ಬದಲಾಯಿಸಲು ಮುಂದಾಗಿದ್ದೇನೆ. ಈ ಮಾರ್ಗದಿಂದ ಪರಿಣಾಮಕಾರಿ ಫಲಿತಾಂಶ ಕಾಣುತ್ತೇನೆ ಎನ್ನುವ ವಿಶ್ವಾಸವೂ ಇದೆ ಎಂದರು.
ಅಣ್ಣಾ ಟೀಮ್ ಒಡೆಯಲಾಯಿತು: ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಂತೋಷ್ ಹೆಗ್ಡೆ, ಅಣ್ಣಾ ಹಜಾರೆ ನೇತೃತ್ವದ ತಂಡ ಒಡೆದು ಹೋಗಿಲ್ಲ, ವ್ಯವಸ್ಥಿತವಾಗಿ ಒಡೆದು ಹಾಕಲಾಯಿತು. ಅಣ್ಣಾ ಹಜಾರೆ ಹೋರಾಟ ಆರಂಭವಾದಾಗ ವಿದ್ಯಾರ್ಥಿ ಸಮೂಹ ಮುಖ್ಯವಾಗಿ ಮಧ್ಯಮ ವರ್ಗದಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಆದರೆ, ಬರಬರುತ್ತ ಅಣ್ಣಾ ತಂಡವನ್ನು ಛಿದ್ರ ಮಾಡಲಾಯಿತು. ನಮ್ಮ ರಾಜಕೀಯ ವ್ಯವಸ್ಥೆ ಏನನ್ನಾದರೂ ಮಾಡೀತು ಎನ್ನುವುದಕ್ಕೆ ಇದು ಸಾಕ್ಷಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನರ ಜವಾಬ್ದಾರಿ ಮುಖ್ಯ: ಜನ್‌ಲೋಕಪಾಲ್ ಮಸೂದೆ ಜಾರಿಗೆ ಬಂದ ಮಾತ್ರಕ್ಕೆ ಭಾರತ ಭ್ರಷ್ಟಾಚಾರ ಮುಕ್ತವಾಗುವುದಿಲ್ಲ. ಇದನ್ನು ಭ್ರಷ್ಟಾಚಾರಿಗಳ ವಿರುದ್ಧ ಅಸ್ತ್ರವಾಗಿಸಿಕೊಳ್ಳಲು ಜನ ಮುಂದೆ ಬರಬೇಕಾಗುತ್ತದೆ. ಅಂದ ಹಾಗೆ, ಜನ್‌ಲೋಕಪಾಲ್ ಮಸೂದೆಗೆ ಅನೇಕ ರಾಜಕಾರಣಿಗಳಿಂದ ವಿರೋಧ ವ್ಯಕ್ತವಾಯಿತು. ಈ ಮಸೂದೆ ಜಾರಿಗೆ ಬಂದಲ್ಲಿ ಮೊದಲು ಗಾಳಕ್ಕೆ ಸಿಗುವವವರು ಇದೇ ರಾಜಕಾರಣಿಗಳು. ಈ ಕಾರಣಕ್ಕೆ ಹೇಗಾದರೂ ಮಾಡಿ ಮಸೂದೆ ಜಾರಿಯಾಗದಂತೆ ನೋಡಿಕೊಳ್ಳಲೆತ್ನಿಸಿದರು. ಮಸೂದೆಗೆ ಒಂದು ಹಂತದಲ್ಲಿ ಒಪ್ಪಿಗೆ ಸಿಕ್ಕಿದ್ದರೂ ಅದು ಜಾರಿಯಾದಾಗಲೇ ನಿಜ ಎಂದರು.
ಸಂಪತ್ತು ಉಳಿಸಿಕೊಳ್ಳಿ: ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಯ ವೃತ್ತಾಂತ ವಿದ್ಯಾರ್ಥಿಗಳಿಗೆ ತಿಳಿಸಿದ ಹೆಗ್ಡೆ, ತಪ್ಪಿತಸ್ಥರ ವಿರುದ್ಧ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿದೆ. ಅಪರಾಧಿಗಳಿಗೆ ಶಿಕ್ಷೆಯಾಗುವುದು ಖಚಿತ. ರಾಜ್ಯದ ಸಂಪತ್ತನ್ನು ಉಳಿಸಿಕೊಳ್ಳಲು ವಿದ್ಯಾರ್ಥಿ ಸಮೂಹ ಮುಂದಾಗಬೇಕಿದೆ ಎಂದರು.
ದೇಶವನ್ನು ಭ್ರಷ್ಟಾಚಾರ ಮುಕ್ತವಾಗಿಸಲು ಯುವ ಜನತೆಯಿಂದ ಮಾತ್ರ ಸಾಧ್ಯ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಭ್ರಷ್ಟಾಚಾರ ವಿರೋಧಿ ಗುಣಗಳನ್ನು ಬಿತ್ತುವ ಕೆಲಸ ಮಾಡಬೇಕಿದೆ ಎಂದು ಸಂತೋಷ್ ಹೆಗ್ಡೆ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement