ಮಲಪ್ರಭೆಗೂ ಕಾಡುತ್ತಿದೆ ಹೂಳಿನ ಗೋಳು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 27
ಮಲಪ್ರಭಾ ನದಿ ತೀರದುದ್ದಕ್ಕೂ ನಡೆಯುತ್ತಿರುವ ಅಕ್ರಮ ಸಾಗುವಳಿ ಪರಿಣಾಮ ಮಲಪ್ರಭೆಯ ಅಣೆಕಟ್ಟಿನ ಒಡಲು ಹೂಳಿನಿಂದ ಭರ್ತಿಯಾಗುತ್ತಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ, ಬೈಲಹೊಂಗಲ, ರಾಮದುರ್ಗ ಮತ್ತು ಸವದತ್ತಿ ತಾಲೂಕಿನ ವ್ಯಾಪ್ತಿಯಲ್ಲಿ ಮುಳುಗಡೆ ಜಮೀನನ್ನು ರೈತರು ಹಿಂಗಾರು ಬೆಳೆ ಕೃಷಿ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದಾರೆ. ಕೃಷಿ ಚಟುವಟಿಕೆಯಿಂದ ಪ್ರತಿ ವರ್ಷ ಸಡಿಲಗೊಳ್ಳುವ ಮಣ್ಣು, ಮಳೆಗಾಲದಲ್ಲಿ ಉಕ್ಕೇರುವ ನದಿಯ ಜತೆಗೆ ಅಣೆಕಟ್ಟು ಸೇರುತ್ತಿದೆ. ಇದರ ಪರಿಣಾಮವಾಗಿ ಕಳೆದ 3 ದಶಕಗಳ ಅವಧಿಯಲ್ಲಿ ಸುಮಾರು 1 ಟಿಎಂಸಿಯಷ್ಟು ಹೂಳು ರೇಣುಕಾ ಸಾಗರದ ಒಡಲು ಸೇರಿದೆ. 38 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯದ ರೇಣುಕಾ ಸಾಗರದಲ್ಲಿ ಇದೀಗ ಕೇವಲ 37 ಟಿಎಂಸಿ ನೀರು ಮಾತ್ರ ಸಂಗ್ರಹಿಸಬಹುದು.
ಬೈಲಹೊಂಗಲ, ರಾಮದುರ್ಗ ಮತ್ತು ಸವದತ್ತಿ ತಾಲೂಕಿನ ನದಿ ಪಾತ್ರದುದ್ದಕ್ಕೂ ಕಪ್ಪುಮಣ್ಣು ಇರುವ ಹಿನ್ನೆಲೆಯಲ್ಲಿ ಕಳೆದ ಒಂದು ದಶಕದ ಅವಧಿಯಲ್ಲಿ ನದಿ ಪಾತ್ರ ವಿಶಾಲವಾಗುತ್ತಿದೆ. ನದಿ ಅಗಲಗೊಂಡಂತೆ ಅಣೆಕಟ್ಟಿನಲ್ಲಿ ಹೂಳಿನ ಪ್ರಮಾಣವೂ ಹೆಚ್ಚುತ್ತಿರುವುದರಿಂದ ನೆರೆ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗುತ್ತಿದೆ.
ಮಲಪ್ರಭೆ ಅಣೆಕಟ್ಟು ಹಿನ್ನೀರಿನಲ್ಲಿ 1,35,776 ಹೆಕ್ಟೇರ್ ಅಂದರೆ 3,39,440 ಎಕರೆ ಜಮೀನು ಮುಳುಗಡೆಯಾಗಿದ್ದು, ಮೂರು ದಶಕಗಳ ಅವಧಿಯಲ್ಲಿ ಮುಳುಗಡೆ ಜಮೀನಿನಲ್ಲಿ ನಡೆಯುತ್ತಿರುವ ಕೃಷಿ ಚಟುವಟಿಕೆಯಿಂದಾಗಿ 1 ಟಿಎಂಸಿಯಷ್ಟು ಹೂಳು ಅಣೆಕಟ್ಟಿನಲ್ಲಿ ಸಂಗ್ರಹವಾಗಿದೆ.
ಕಳಸಾ ಯೋಜನೆಯಾದರೆ?: ಮಲಪ್ರಭಾ ನದಿಗೆ ಕಳಸಾ ಮತ್ತು ಬಂಡೂರಿ ನಾಲಾಗಳಿಂದ 7.56 ಟಿಎಂಸಿ ನೀರು ತರುವಲ್ಲಿ ಸರ್ಕಾರ ಯಶಸ್ವಿಯಾದರೆ ಮತ್ತೊಂದು ಸಮಸ್ಯೆಗೆ ಹುಟ್ಟಿಕೊಳ್ಳುವ ಆತಂಕ ಇದ್ದೇ ಇದೆ. ಪ್ರತಿ ವರ್ಷ ಅಣೆಕಟ್ಟಿನಲ್ಲಿ 30-32 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಇದರ ಹೊರತಾಗಿ ಹೆಚ್ಚುವರಿಯಾಗಿ ಬರುವ 7 ಟಿಎಂಸಿ ನೀರನ್ನು ಎಲ್ಲಿ ಸಂಗ್ರಹಿಸುವುದು. ಹೆಚ್ಚುವರಿ ನೀರಿನ ಜತೆಗೆ ಮುಳುಗಡೆ ಜಮೀನಿನ ಅಕ್ರಮ ಸಾಗುವಳಿಯಿಂದಾಗಿ ಮಣ್ಣು ಸವೆತ ಮುಂದುವರಿದಿದ್ದು, ಇದು ಅಣೆಕಟ್ಟನ್ನು ಹೂಳಿನ ರೂಪದಲ್ಲಿ ಭರ್ತಿ ಮಾಡುತ್ತಿದೆ. ಈಗಾಗಲೇ 1 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಕಳೆದುಕೊಂಡಿರುವ ಅಣೆಕಟ್ಟು, ಮುಂದಿನ ವರ್ಷದ ಹೊತ್ತಿಗೆ ಬರಬಹುದಾದ ಏಳು ಟಿಎಂಸಿ ನೀರನ್ನು ಹೇಗೆ ಹಿಡಿದಿಡಲು ಸಾಧ್ಯ?
ಮಹದಾಯಿ ನ್ಯಾಯಾಧೀಕರಣವಾದರೆ?: ನ್ಯಾಯಾಧೀಕರಣದಲ್ಲಿ ಕರ್ನಾಟಕದ ವಾದಕ್ಕೆ ಪುಷ್ಟಿ ದೊರೆತು ಕನಿಷ್ಠ 44 ಟಿಎಂಸಿ ನೀರು ರಾಜ್ಯಕ್ಕೆ ಲಭ್ಯವಾದರೆ ನೀರು ಸಂಗ್ರಹ ಸಮಸ್ಯೆ ಇನ್ನಷ್ಟು ಹೆಚ್ಚಾಗಲಿದೆ. ನ್ಯಾಯಾಧೀಕರಣ ತೀರ್ಪು ಬರುವ ಮೊದಲೇ ಸರ್ಕಾರ ನದಿ ತೀರದ ವ್ಯಾಪ್ತಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು. ಬೆಳಗಾವಿ, ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಯ ಕೆರೆಗಳಿಗೆ ಮಲಪ್ರಭಾ ಎಡ ಮತ್ತು ಬಲದಂಡೆ ಕಾಲುವೆ ಮುಖಾಂತರ ಕೆರೆಗಳಿಗೆ ನೀರು ಹರಿಸುವುದಕ್ಕೆ ಶಾಶ್ವತ ಯೋಜನೆ ರೂಪಿಸಿದರೆ ಮಾತ್ರ ಹೆಚ್ಚುವರಿ ನೀರಿನ ಸದ್ಬಳಕೆಯಾಗಬಲ್ಲದು. ಒಂದು ವೇಳೆ ಹೆಚ್ಚುವರಿ ನೀರಿನ ಬಳಕೆಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ರೂಪಿಸದಿದ್ದಲ್ಲಿ, ಅಗುವ ಅನುಕೂಲಕ್ಕಿಂತ ಅವಘಡಗಳೇ ಹೆಚ್ಚು.
ಕಾಡಾ ಮೌನ: ಮಲಪ್ರಭಾ ಯೋಜನೆಗೆ ವಶಪಡಿಸಿಕೊಂಡ ಜಮೀನಿನಲ್ಲಿ ಬಿದಿರು ನೆಡಬೇಕು ಎಂದು ಮಲಪ್ರಭಾ-ಘಟಪ್ರಭಾ ಅಚ್ಚುಕಟ್ಟು ಪ್ರಾಧಿಕಾರಕ್ಕೆ (ಕಾಡಾ) ಅಧಿಕಾರ ನೀಡಿದ್ದರೂ ಇಲ್ಲಿಯವರೆಗೆ ಈ ನಿಟ್ಟಿನಲ್ಲಿ ಒಂದೇ ಒಂದು ಕೆಲಸ ಆಗಿಲ್ಲ. ಸಾಮಾಜಿಕ ಅರಣ್ಯದಡಿ ನದಿ ತೀರದುದ್ದಕ್ಕೂ ಬಿದಿರು ನೆಡುವುದರಿಂದ ಮಣ್ಣಿನ ಸವೆತ ತಡೆಯುವುದರ ಜೊತೆಗೆ ಪರಿಸರ ಸಮತೋಲನ ಕೂಡ ಕಾಪಾಡಬಹುದು.
-ಸತೀಶ ಪಾಗಾದ