ಖೊಟ್ಟಿ ದಾಖಲೆ ಸೃಷ್ಟಿಸಿ ಮದುವೆ
ಧಾರವಾಡ: ಮೊದಲ ಪತ್ನಿಗೆ ತಲಾಖ್ ನೀಡಿರುವುದಾಗಿ ಖೊಟ್ಟಿ ದಾಖಲೆ ಸೃಷ್ಟಿಸಿ ಮತ್ತೊಂದು ಮದುವೆಯಾದ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬ ತನ್ನ ಎರಡನೇ ಪತ್ನಿಜತೆ ಸೇರಿ ಮೊದಲ ಪತ್ನಿಗೆ ಜೀವ ಬೆದರಿಕೆ ಹಾಕಿದ ಪ್ರಕರಣ ಇಲ್ಲಿನ ಗಾಂಧೀಚೌಕ ಬಳಿಯ ರಸೂಲಪುರ ಓಣಿಯಲ್ಲಿ ನಡೆದಿದೆ.
ಜಮೀರಖಾನ ಯುಸೂಫ್ಖಾನ್ ಕಿತ್ತೂರ ಎಂಬ ಶಿಕ್ಷಕನೇ ತನ್ನ ಮೊದಲ ಪತ್ನಿ ರಜಿಯಾಬೇಗಂ ಕಿತ್ತೂರ ಅವರಿಗೆ ಜೀವಬೆದರಿಕೆ ಹಾಕಿದ್ದಾನೆ. ಕುಂದಗೋಳ ತಾಲೂಕಿನ ಮತ್ತಿಕಟ್ಟಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕನಾಗಿರುವ 52 ವರ್ಷದ ಜಮೀರಖಾನ, ಇದೀಗ ಕುಷ್ಠಗಿ ತಾಲೂಕು ದೋಟಿಹಾಳ ಗ್ರಾಮದ ಮಹಿಳೆ ಮೆಹಬೂಬಿ ಬಿಳೆಕುದರಿ ಎಂಬಾಕೆಯ ಕೈಹಿಡಿದಿದ್ದಾನೆ.
ನಗರದ ಗುಲಗಂಜಿಕೊಪ್ಪದ ಸರ್ಕಾರಿ ಉರ್ದು ಶಾಲೆಯಲ್ಲಿ ಶಿಕ್ಷಕಿಯಾಗಿರುವ ಪತ್ನಿ ರಜಿಯಾಬೇಗಂ ಕಿತ್ತೂರ ಅವರಿಗೆ ಮೂವರು ಗಂಡು ಮಕ್ಕಳಿದ್ದಾರೆ. ತನ್ನ ಮೊದಲ ಪತ್ನಿಗೆ ತಲಾಖ್ ನೀಡಿರುವುದಾಗಿ ಜಮಾತ್ನ ಪಂಚರ ಮತ್ತು ಪತ್ನಿಯ ಸಹಿ ಇರುವ ಖೊಟ್ಟಿ ದಾಖಲೆ ಸೃಷ್ಟಿಸಿದ ಜಮೀರಖಾನ್, ಕೆಲ ದಿನಗಳ ಹಿಂದಷ್ಟೇ ಮೆಹಬೂಬಿ ಮತ್ತು ಆಕೆಯ ಕುಟುಂಬದವರಿಗೆ ಸುಳ್ಳು ಹೇಳಿ ಮರುಮದುವೆ ಮಾಡಿಕೊಂಡಿದ್ದಾನೆ ಎಂದು ದೂರಲಾಗಿದೆ.
ಇತ್ತೀಚೆಗೆ ಜಮೀರನಖಾನ್ನ ಎರಡನೇ ಪತ್ನಿ ತನ್ನ ಬೆಂಬಲಿಗರೊಂದದಿಗೆ ಮೊದಲ ಪತ್ನಿ ರಜಿಯಾಬೇಗಂ ಮನೆಗೆ ತೆರೆಳಿ ಆಕೆಗೆ ಜೀವಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ. ಈ ಕುರಿತು ಧಾರವಾಡ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.