ನಾಟಕ ಸಮಾಜ ಪರಿವರ್ತನೆಗೆ ದಾರಿ
ಹುಬ್ಬಳ್ಳಿ: 21ನೇ ಶತಮಾನದಲ್ಲಿಯೂ ಜಾತಿಯತೆ, ಅಸಮಾನತೆ ಮಿತಿ ಮೀರಿದೆ. ಇದನ್ನು ಕಿತ್ತೊಗೆದು ಮನುಕುಲ ಉದ್ಧಾರ ಮಾಡುವ ಸಂದೇಶವನ್ನು ನಾಟಕ ನೀಡುತ್ತದೆ ಎಂದು ಡಾ. ಕೆ. ಎಸ್. ಶರ್ಮಾ ತಿಳಿಸಿದರು.
ಶ್ರೀ ಶಿವಭಕ್ತ ಶಿವಶರಣ ಹರಳಯ್ಯ ನಾಟ್ಯ ಸಂಘ ಬೇಂದ್ರೆ ಭವನದ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಶಿವಶರಣ ಹರಳಯ್ಯನವರು ಕಂಡ ಬಸವಣ್ಣನವರು ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಸವಣ್ಣನವರ ಹಾಗೂ ಅನುಭವ ಮಂಟಪದ ಶಿವಶರಣರ ಸಂದೇಶ ಇಂದಿನ ಶತಮಾನಕ್ಕೆ ಅತ್ಯಗತ್ಯ ಎಂದರು.
ಸಾಹಿತಿ ಜಗದೀಶ ಮಂಗಳೂರಮಠ ಮಾತನಾಡಿ, ಬಸವಣ್ಣನವರ ಅನುಭವ ಮಂಟಪದ ಉದ್ದೇಶ ಅಂದಿನ ಸಮಾಜ ಪರಿವರ್ತನೆ ಮಾಡುವುದಾಗಿತ್ತು. ಆದರೆ 21ನೇ ಶತಮಾನದಲ್ಲಿಯೂ ಇಂಥ ಅಗತ್ಯತೆ ಎದುರಾಗಿರುವುದು ದುರಂತ.
12ನೇ ಶತಮಾನದಲ್ಲಿ ಬಸವಣ್ಣನವರು ಬೋಧಿಸಿದ ತತ್ವಾದರ್ಶಗಳನ್ನು ಅನುಸರಿಸಿದರೆ, ಮೇಲು-ಕೀಳು, ಉಚ್ಚ-ನೀಚ ಭಾವನೆ ದೂರಾಗಲು ಸಾಧ್ಯ. ನಾಟಕಗಳು ಸಮಾಜವನ್ನು ಸರಿ ದಾರಿಗೆ ತರುವ ಕೆಲಸ ಮಾಡುತ್ತದೆ. ಆಧುನಿಕತೆಯ ಈ ಯುಗದಲ್ಲೂ ಸಾಮಾಜಿಕ, ಪೌರಾಣಿಕ ನಾಟಕಗಳು ತನ್ನದೇ ಆದ ಮಹತ್ವ ಉಳಿಸಿಕೊಂಡಿವೆ ಎಂದರು.
ಧನರಾಜ ಸಾತಪುತೆ, ಎನ್. ಎಚ್. ಕುಲಕರ್ಣಿ, ಸದಾನಂದ ಡಂಗನವರ, ಗುರುನಾಥ ಉಳ್ಳಿಕಾಶಿ, ಪರಶುರಾಮ ಅರಕೇರಿ, ರಾಜಶೇಖರ ಪಾಟೀಲ ಮತ್ತಿತರರಿದ್ದರು.