ವೈಜ್ಞಾನಿಕ ಸಂಶೋಧನೆಯಲ್ಲಿ ಭಾರತ ಹಿಂದೆ: ಡಾ. ಸಕ್ಸೇನಾ
ಕನ್ನಡಪ್ರಭ ವಾರ್ತೆ, ಧಾರವಾಡ, ನ. 29
ಭಾರತದಲ್ಲಿ ಒಟ್ಟು 65 ಕೋಟಿ ಯುವಕರಿದ್ದು, ಅದರಲ್ಲಿ 9 ಕೋಟಿಗೂ ಅಧಿಕ ಯುವಕರು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಆದರೆ, ಜಾಗತಿಕ ವೈಜ್ಞಾನಿಕ ಸಂಶೋಧನೆಯಲ್ಲಿ ಭಾರತೀಯರ ಪಾಲು ಕೇವಲ ಶೇ. 1ರಷ್ಟು ಮಾತ್ರವಿದೆ. ಇದು ಕನಿಷ್ಠ ಶೇ. 5ಕ್ಕಾದರೂ ಏರಬೇಕು ಎಂದು ಭಾರತೀಯ ರಸಾಯನ ಶಾಸ್ತ್ರ ಸಂಸ್ಥೆಯ (ಐಸಿಸಿ) ಅಧ್ಯಕ್ಷ ಡಾ. ಗ್ರೀಷ್ ಸಕ್ಸೇನಾ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಸಹಯೋಗದಲ್ಲಿ ಗುರುವಾರ ಕವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಭಾರತೀಯ ರಸಾಯನಶಾಸ್ತ್ರಜ್ಞರ ಸಮ್ಮೇಳನ (ಐಸಿಸಿಯ 32ನೇ ವಾರ್ಷಿಕ ಸಮ್ಮೇಳನ)ದಲ್ಲಿ ಮಾತನಾಡಿದ ಅವರು, ಜಗತ್ತಿನ ಒಟ್ಟಾರೆ ವೈಜ್ಞಾನಿಕ ಸಂಶೋಧನೆ ಸೂಚ್ಯಂಕದಲ್ಲಿ ಭಾರತ ಹಿಂದುಳಿದಿದೆ ಎಂದು ಖೇದ ವ್ಯಕ್ತಪಡಿಸಿದರು.
ಮೊದಲ ಸ್ಥಾನ ಅಮೆರಿಕ ಅಲಂಕರಿಸಿದ್ದು, ಯೂರೋಪಿಯನ್ ಯೂನಿಯನ್ (ಇಯು)ಗೆ ಸೇರಿದ ಫ್ರಾನ್ಸ್, ಚೀನಾ, ಜಪಾನ್, ಕೊರಿಯಾ, ತೈವಾನ್, ಪೋಲೆಂಡ್ ರಾಷ್ಟ್ರಗಳು ಭಾರತ ದೇಶಕ್ಕಿಂತಲೂ ಮುಂಚೂಣಿಯಲ್ಲಿವೆ ಎಂದರು.
ಇದಕ್ಕೂ ಮೊದಲು ಸಮ್ಮೇಳನ ಉದ್ಘಾಟಿಸಿದ ಕವಿವಿ ಕುಲಪತಿ ಡಾ. ಎಚ್.ಬಿ. ವಾಲೀಕಾರ ಮಾತನಾಡಿ, ರಸಾಯನಶಾಸ್ತ್ರಕ್ಕೂ ಗಣಿತಕ್ಕೂ ಅವಿನಾಭಾವ ಸಂಬಂಧವಿದೆ ಎಂದರು.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ಎಸ್. ಚಂದ್ರಶೇಖರನ್ ಮಾತನಾಡಿದರು. ಕುವೆಂಪು ವಿವಿ ವಿಶ್ರಾಂತ ಕುಲಪತಿ ಡಾ. ಎಸ್.ಪಿ. ಹಿರೇಮಠ, ಐಸಿಸಿ ಕಾರ್ಯದರ್ಶಿ ಪ್ರೊ. ರಾಜೇಶ ಬಧಾಕರೆ, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಎ. ಚಿಮಟದಾರ, ಸಮ್ಮೇಳನ ಕಾರ್ಯದರ್ಶಿ ಪ್ರೊ. ಎಂ.ವಿ. ಕುಲಕರ್ಣಿ ಮತ್ತಿತರರಿದ್ದರು.