ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

60 ಟಿಎಂಸಿ ನೀರಿನಿಂದ ರಾಜ್ಯ ವಂಚಿತ

Vishwanath S
Updated On : 1 Dec 2013, 12:21 pm

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 30
ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೃಷ್ಣಾ ನ್ಯಾಯಾಧಿಕರಣ ನೀಡಿರುವ ಅಂತಿಮ ತೀರ್ಪಿನಿಂದ ರಾಜ್ಯ ಕನಿಷ್ಠ 60 ಟಿಎಂಸಿ ನೀರಿನಿಂದ ವಂಚಿತವಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸವರಾಜ ರಾಯರಡ್ಡಿ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಲಮಟ್ಟಿ ಅಣೆಕಟ್ಟೆಯನ್ನು 524.26 ಮೀಟರ್‌ಗೆ ಎತ್ತರಿಸುವುದಕ್ಕೆ ಅವಕಾಶ ನೀಡಿರುವ ಸಂಗತಿಯನ್ನೇ ಕರ್ನಾಟಕದ ಪರವಾಗಿ ತೀರ್ಪು ಬಂದಿದೆ ಎಂದು ಬೀಗಬೇಕಿಲ್ಲ. ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಕೃಷ್ಣಾ ನದಿ ಪಾತ್ರ ದೊಡ್ಡದು. ಆದರೂ ಬಚಾವತ್ ಆಯೋಗ ಮತ್ತು ಬ್ರಿಜೇಶಕುಮಾರ್ ಆಯೋಗದ ತೀರ್ಪಿನಡಿ ರಾಜ್ಯಕ್ಕೆ ಸಲ್ಲಬೇಕಾದ ನೀರು ದಕ್ಕಿಲ್ಲ. ಇದೀಗ ನ್ಯಾಯಾಧಿಕರಣ ಅಂತಿಮ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲು ಏರುವುದಕ್ಕೆ ಅವಕಾಶ ಇದೆ ಎಂದರು.
ನೀರಾವರಿಗೆ ಬಿಜೆಪಿ ಏನೂ ಮಾಡಿಲ್ಲ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಜಗದೀಶ ಶೆಟ್ಟರ್ ಅವರು ತಮ್ಮ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ 2.54 ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಲಭಿಸಿದ್ದರೆ, ಎಸ್.ಎಂ. ಕೃಷ್ಣ ಮತ್ತು ನಂತರದ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 4.95 ಲಕ್ಷ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಆಲಮಟ್ಟಿ ಅಣೆಕಟ್ಟೆ ಎತ್ತರಿಸುವುದರಿಂದ ಇನ್ನೂ ಬಾಗಲಕೋಟೆ ಮತ್ತು ಬಿಜಾಪುರ ಜಿಲ್ಲೆಯ ವ್ಯಾಪ್ತಿಯ 96 ಸಾವಿರ ಹೆಕ್ಟೇರ್ ಜಮೀನು ಮುಳುಗಡೆ ಆಗಲಿದೆ. ಪರಿಹಾರ ಮತ್ತು ಪುನರ್ವಸತಿ ಕಾರ್ಯಕ್ಕೆ ಸರ್ಕಾರ ಗಮನ ನೀಡಬೇಕಿದೆ. ಕೃಷ್ಣಾ ಕೊಳ್ಳದ ನೀರಾವರಿ ಸೌಲಭ್ಯಕ್ಕೆ ಪ್ರತಿ ವರ್ಷ ಹತ್ತು ಸಾವಿರ ಕೋಟಿಗಳನ್ನು ಸರ್ಕಾರ ತೆಗೆದಿರಿಸಿದೆ.
ಪ್ರಸಕ್ತ ಹಣಕಾಸು ವರ್ಷ ಪೂರ್ಣಗೊಳ್ಳಲು ಕೇವಲ ನಾಲ್ಕು ತಿಂಗಳು ಉಳಿದಿರುವುದರಿಂದ ಕಾಮಗಾರಿ ಪ್ರಗತಿಯತ್ತಲೂ ಗಮನ ಹರಿಸಬೇಕಿದೆ. ಮೀಸಲು ಇರಿಸಿರುವ ಮೊತ್ತದ ಸದ್ಬಳಕೆಗೆ ಸರ್ಕಾರ ಕಾಮಗಾರಿ ಮೇಲುಸ್ತುವಾರಿ ಸಮಿತಿ ರಚನೆ ಮಾಡಿ ಉ-ಕಕ್ಕೆ ನೀರಾವರಿ ಸೌಲಭ್ಯ ನಿಗದಿತಕಾಲಮಿತಿಯಲ್ಲಿ ಲಭಿಸುವಂತೆ ಮಾಡಬೇಕು ಎಂದು ಹೇಳಿದರು.
ವಿಶೇಷ ಚರ್ಚೆಯಾಗಲಿ
ಚಳಿಗಾಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿಯೇ ನ್ಯಾಯಾಧಿಕರಣ ತನ್ನ ಅಂತಿಮ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಕೃಷ್ಣಾ ಕೊಳ್ಳದ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಬೇಕಾದ ನೀರಾವರಿ ಕಾಮಗಾರಿ ಮತ್ತು ಕಳೆದುಕೊಂಡಿರುವ 60 ಟಿಎಂಸಿ ನೀರಿನ ಬಗ್ಗೆ ಸದನದಲ್ಲಿ ವಿಶೇಷ ಚರ್ಚೆಯಾಗಬೇಕು. ಈ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಂದಾಗಿ ಕೃಷ್ಣಾ ಕಣಿವೆಯ ನೀರಿನ ಸದ್ಬಳಕೆ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಬಸವರಾಜ ರಾಯರಡ್ಡಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement