ಅರ್ಹ ಮತದಾರರನ್ನು ಪಟ್ಟಿಯಲ್ಲಿ ಸೇರಿಸಿ
ಧಾರವಾಡ: ಮತದಾರರ ಪಟ್ಟಿಯಲ್ಲಿ ಯುವ ಜನರೂ ಸೇರಿದಂತೆ ಅರ್ಹ ಮತದಾರರನ್ನು ಸೇರ್ಪಡೆಗೊಳಿಸಲು ಸರ್ವಕ್ರಮ ಜರುಗಿಸಲು ಬೆಳಗಾವಿ ವಿಭಾಗದ ಮತದಾರ ಯಾದಿ ಪರಿಷ್ಕರಣೆಯ ಚುನಾವಣಾ ಆಯೋಗದ ವೀಕ್ಷಕ ಶಿವಯೋಗಿ ಕಳಸದ ನಿರ್ದೇಶನ ನೀಡಿದರು.
ಧಾರವಾಡದಲ್ಲಿ ಶುಕ್ರವಾರ ರಾಜಕೀಯ ಪಕ್ಷಗಳ ಧುರೀಣರ ಹಾಗೂ ಜಿಲ್ಲೆಯ ಮತದಾರ ನೋಂದಣಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮತದಾರ ನೋಂದಣಿ ಹಾಗೂ ತಿದ್ದುಪಡಿ ಕಾರ್ಯ ಈಗ ಆನ್ಲೈನ್ನಲ್ಲೇ ನಡೆಯುತ್ತಿದ್ದು, ಸ್ವೀಕರಿಸಿದ ಮತದಾರ ಸೇರ್ಪಡೆ, ತಿದ್ದುಪಡಿ ಅರ್ಜಿಗಳನ್ನು ಅದೇ ದಿನ ವಿಲೇವಾರಿ ಮಾಡಲು ಅಗತ್ಯವಿರುವ ಹೆಚ್ಚುವರಿ ಸಿಬ್ಬಂದಿ ನಿಯಮಿಸಲು ಕಳಸದ ಸೂಚಿಸಿದರು.
ಮತದಾರ ನೋಂದಣಿ ಕಾರ್ಯದಲ್ಲಿ ಅಧಿಕಾರಿಗಳಿಗಿಂತ ಜನಪ್ರತಿನಿಧಿಗಳು, ರಾಜಕೀಯ ಧುರೀಣರು ಅರ್ಹ ಮತದಾರರನ್ನು ಗುರುತಿಸಿ, ಅವರ ಹೆಸರು ಸೇರ್ಪಡೆಗೆ ಮನ ಒಲಿಸುವಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಜನವರಿ 16ರಂದು ಇದ್ದ ಅಂತಿಮ ಮತದಾರರ ಪಟ್ಟಿಗೆ ಅಕ್ಟೋಬರ್ 30ರ ಅವಧಿಯಲ್ಲಿ 20,653 ಗಂಡು ಹಾಗೂ 21,039 ಮಹಿಳೆಯರು ಸೇರಿದಂತೆ ಒಟ್ಟು 41,692 ಹೊಸದಾಗಿ ಮತದಾರರು (ಶೇ.3.28) ಸೇರ್ಪಡೆಯಾಗಿದ್ದಾರೆ. ಈ ಯಾದಿಯಲ್ಲಿರುವ 13,13,179 ರ ಪೈಕಿ 12,92,383 ಮತದಾರರಿಗೆ (ಶೇ.98.42) ಚುನಾವಣಾ ಆಯೋಗದ ಗುರುತು ಪತ್ರ ನೀಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಕಾಪಸೆ ವಿವರಿಸಿದರು.
ಮತದಾರ ಪಟ್ಟಿಯಲ್ಲಿ ಕುಂದಗೋಳ, ಕಲಘಟಗಿ ವಿಧಾನಸಭೆ ಕ್ಷೇತ್ರಗಳಲ್ಲಿ 18 ರಿಂದ 19 ರ ವಯೋವುತಿಯಲ್ಲಿನ ಮತದಾರರು ಶೇ.1 ರಷ್ಟು ಹಾಗೂ ನವಲಗುಂದದಲ್ಲಿ ಶೇ.0.51, ಧಾರವಾಡದಲ್ಲಿ ಶೇ.0.89, ಹು-ಧಾ ಪೂರ್ವದ ವಿಧಾನಸಭೆ ಕ್ಷೇತ್ರದಲ್ಲಿ ಶೇ.0.82 ರಷ್ಟು ಇದ್ದಾರೆ. ಜಿಲ್ಲೆಯಲ್ಲಿ 30 ರಿಂದ 39 ರ ವಯೋವುತಿಯಲ್ಲಿರುವವರು ಶೇ.26.77, 20 ರಿಂದ 29 ರ ವಯೋವುತಿಯಲ್ಲಿರುವ ಶೇ.23.15 ರಷ್ಟು ಮತದಾರರಿದ್ದಾರೆ ಎಂದು ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ ವಿವರ ನೀಡಿದರು. ಅರ್ಹ ಮತದಾರರ ನೋಂದಣಿಗೆ ಆಯೋಗವು ಡಿಸೆಂಬರ್ 6ರ ವರೆಗೆ ಅವಧಿ ವಿಸ್ತರಿಸಿದ್ದು, ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಪದಾಧಿಕಾರಿಗಳು, ಧುರಿಣರು ಹಾಗೂ ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಮತದಾರ ಪಟ್ಟಿ ಪರಿಷ್ಕರಣೆ ಬೆಳಗಾವಿ ವಿಭಾಗದ ವೀಕ್ಷಕ ಶಿವಯೋಗಿ ಕಳಸದ ತಿಳಿಸಿದರು.
ಕಾಂಗ್ರೆಸ್ಸಿನ ಎಂ.ಎಂ. ಹಿಂಡಸಗೇರಿ, ಜಕ್ಕಪ್ಪನವರ, ಜೆಡಿಎಸ್ನ ರಾಜಣ್ಣ ಕೊರವಿ, ಬಿಜೆಪಿಯ ಸಂಜಯ ಕಪಟಕರ ವಿವಿಧ ಪಕ್ಷಗಳ ಹಿರಿಯ ಧುರೀಣರು ಮತದಾರರ ಹೆಸರು ಸೇರ್ಪಡೆಗೆ ಇರುವ ಅವಧಿ ಹೆಚ್ಚಿಸಲು, ಬೂತಮಟ್ಟದ ಅಧಿಕಾರಿಯಿಂದ ಮತದಾರರ ನೋಂದಣಿ, ತಿದ್ದುಪಡಿಗೆ ಸಮರ್ಪಕ ಸೇವೆ, ಸಂಪರ್ಕ ಲಭ್ಯವಾಗುವಂತೆ ನೋಡಿಕೊಳ್ಳುವ, ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷ, ಸಂಸ್ಥೆಯಿಂದ ಮತದಾರ ಅರ್ಜಿ ನೀಡಲು ಹೋದಾಗ ಅವುಗಳನ್ನು ಸ್ವೀಕರಿಸುವ ವ್ಯವಸ್ಥೆ ಮಾಡುವಂತೆ ತಿಳಿಸಿದರು.
ಅಧಿಕಾರಿ, ಸಿಬ್ಬಂದಿ ನೇಮಿಸಿ
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹುಬ್ಬಳ್ಳಿ-ಧಾರವಾಡ ಪೂರ್ವ, ಪಶ್ಚಿಮ ಹಾಗೂ ಕೇಂದ್ರ ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾರ ಯಾದಿ ಪರಿಷ್ಕರಣೆ ಕುರಿತಂತೆ ತೃಪ್ತಿಕರ ಕಾರ್ಯ ನಡೆಯುತ್ತಿಲ್ಲ. ಇದಕ್ಕಾಗಿ ತಕ್ಷಣವೇ ಎಲ್ಲ ವಲಯ ಕಚೇರಿಗಳಲ್ಲಿ ಜವಾಬ್ದಾರಿಯುತ ಅಧಿಕಾರಿ ಅಥವಾ ಸಿಬ್ಬಂದಿ ನಿಯಮಿಸಲು ಬೆಳಗಾವಿ ವಿಭಾಗದ ಮತದಾರ ಯಾದಿ ಪರಿಷ್ಕರಣೆ ವೀಕ್ಷಕ ಶಿವಯೋಗಿ ಕಳಸದ, ಪಾಲಿಕೆ ಆಯುಕ್ತ ರಮಣದೀಪ ಚೌಧರಿ ಅವರಿಗೆ ಸೂಚಿಸಿದರು.
ಮತದಾರ ಅರ್ಜಿ ಬಂದಾಕ್ಷಣ ಅದರ ಸ್ವೀಕೃತಿ ಹಾಗೂ ಅದು ಯಾವ ಹಂತದಲ್ಲಿ ಇದೆ ಎನ್ನುವುದರ ಕುರಿತ ಮಾಹಿತಿ ಜನರಿಗೆ ಗೊತ್ತಾಗಬೇಕು. ಅದಕ್ಕಾಗಿ ವಲಯ ಕಚೇರಿಗಳಲ್ಲಿ ನೇಮಿಸಲಾಗುವ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸೂಚಿಸಬೇಕು ಎಂದು ತಿಳಿಸಿದರು. ಹುಬ್ಬಳ್ಳಿ-ಧಾರವಾಡ ಕೇಂದ್ರದಲ್ಲಿ ಭೂತ್ ಮಟ್ಟದ ಅಧಿಕಾರಿಗಳು ಇರದಿರುವ ಕುರಿತು ದೂರುಗಳಿದ್ದು, ಸೂಕ್ತ ಕ್ರಮ ಜರುಗಿಸಬೇಕು. ಸಾಧ್ಯವಾದಷ್ಟು ಕೊನೆ ದಿನಕ್ಕಾಗಿ ಕಾಯದೇ ಅಂದು ಸ್ವೀಕರಿಸಿದ ಅರ್ಜಿಗಳನ್ನು ಅಂದೇ ವಿಲೇವಾರಿ ಮಾಡಲು ಕ್ರಮ ಜರುಗಿಸಬೇಕು. ಮತದಾರರ ಪಟ್ಟಿಯಲ್ಲಿ ಭಾವಚಿತ್ರ ಇರದ ಮತದಾರ ಭಾವಚಿತ್ರ ಅಳವಡಿಸಲು ಕ್ರಮ ಜರುಗಿಸಬೇಕೆಂದರು. ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರಗಳ ನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಮತದಾರರ ಸಹಾಯವಾಣಿ ಸ್ಥಾಪಿಸಲು, ಬೂತ ಮಟ್ಟದ ಸಿಬ್ಬಂದಿಯಿಂದ ನಿಯಮಿತ ವರದಿ ಪಡೆಯಲು ಶಿವಯೋಗಿ ಕಳಸದ ನಿರ್ದೇಶನ ನೀಡಿದರು. ಜಿಪಂ ಸಿಇಒ ಪಿ.ಎ. ಮೇಘಣ್ಣವರ, ಅಪರ ಡಿಸಿ ಶಿವಾನಂದ ಕಾಪಸೆ, ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ, ಪಾಲಿಕೆ ಜಂಟಿ ಆಯುಕ್ತ ವೀರೇಂದ್ರ ಕುಂದಗೋಳ, ಅಧಿಕಾರಿಗಳು ಸಭೆಯಲ್ಲಿದ್ದರು.