ಬೂಟಾಟಿಕೆಯಿಂದ ಕನ್ನಡ ಅಭಿವೃದ್ಧಿ ಅಸಾಧ್ಯ
ಕನ್ನಡಪ್ರಭ ವಾರ್ತೆ, ಧಾರವಾಡ, ನ. 30
ಕೇವಲ ಬೂಟಾಟಿಕೆ ಮಾತುಗಳಿಂದ ಕನ್ನಡದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹಿರಿಯ ಪತ್ರಕರ್ತ, ನಾಡೋಜ ಡಾ. ಪಾಟೀಲ ಪುಟ್ಟಪ್ಪ ಹೇಳಿದ್ದಾರೆ.
ಇಲ್ಲಿನ ಕರ್ನಾಟಕ ವಿದ್ಯಾರ್ವಧಕ ಸಂಘದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರ್ನಾಟಕ ವಿದ್ಯಾರ್ವಧಕ ಸಂಘದ ಸಂಸ್ಥಾಪಕ ರಾ.ಹ. ದೇಶಪಾಂಡೆ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದಿನ ರಾಜಕಾರಣಿಗಳು ಕೇವಲ ಭಾಷಣದಲ್ಲಿ ಮಾತ್ರ ಕರ್ನಾಟಕ ಹಾಗೂ ಕನ್ನಡ ಅಭಿವೃದ್ಧಿಯ ಮಾತುಗಳನ್ನಾಡುತ್ತಿದ್ದಾರೆ. ಈ ರೀತಿಯ ಮಾತುಗಳನ್ನಾಡುವ ಬದಲು ಅವುಗಳನ್ನು ಕಾರ್ಯರೂಪಕ್ಕೆ ತರಬೇಕಿದ್ದು, ಕನ್ನಡವನ್ನು ಸಿಂಹಾಸನದ ಮೇಲೇರಿಸುವ ಕೆಲಸವಾಗಬೇಕಿದೆ ಎಂದರು.
ರಾ.ಹ. ದೇಶಪಾಂಡೆ ಅವರು ಸ್ವಾರ್ಥಿಗಳಾಗಿ ಶಿಕ್ಷಣ ಇಲಾಖೆಯಲ್ಲಿ ಮೇಲ್ದರ್ಜೆಯ ಹುದ್ದೆಗೆ ತಲುಪುವ ಆಸೆ ಮಾಡಿದ್ದರೆ ಕರ್ನಾಟಕ ವಿದ್ಯಾರ್ವಧಕ ಸಂಘ ಕಟ್ಟಲು ಆಗುತ್ತಿರಲಿಲ್ಲ. ಅವರಿಗೆ ವಿಪುಲ ಅವಕಾಶಗಳಿದ್ದರೂ ಸಹ ಕನ್ನಡದ ಏಳ್ಗೆಗಾಗಿ ಎಲ್ಲವನ್ನೂ ತೊರೆದು ಕನ್ನಡದ ಸರ್ವತೋಮುಖ ಬೆಳವಣಿಗೆ ಶ್ರಮಿಸಿದರು.
ಕನ್ನಡ ಭಾಷೆ ಮೇಲೆ ಮರಾಠಿ ಭಾಷೆ ದಾಳಿ ಮಾಡಿದಾಗ ಅದರ ವಿರುದ್ಧ ಹೋರಾಡಿದ ದೇಶಪಾಂಡೆ ಅವರ ಜೀವನ ಚರಿತ್ರೆ ಶಾಲಾ ಪಠ್ಯಕ್ರಮವಾಗಬೇಕು. ಕನ್ನಡ ಕಟ್ಟಲು ದೇಶಪಾಂಡೆ ಅವರು ಮಾಡಿದ ಸಾಧನೆಯ ಕುರಿತು ಪಠ್ಯಕ್ರಮದಲ್ಲಿ ಜೋಡಿಸುವ ಮೂಲಕ ಮಕ್ಕಳ ಮನಸ್ಸನ್ನು ಜಾಗ್ರತಗೊಳಿಸಬೇಕು ಎಂದು ತಿಳಿಸಿದರು.
ಹಿರಿಯ ಕವಿ ಡಾ. ಚನ್ನವೀರ ಕಣವಿ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಮರಾಠಿ ಭಾಷೆ ದಂಡೆತ್ತಿ ಬಂದಾಗ ಶೈಕ್ಷಣಿಕವಾಗಿ ಈ ನಾಡಿಗೆ ಕರ್ನಾಟಕ ವಿದ್ಯಾವರ್ಧಕ ಸಂಘ ಅನಿವಾರ್ಯವಾಗಿ ಬೇಕಾಯಿತು. ರಾ.ಹ. ದೇಶಪಾಂಡೆ ಅವರು ಕನ್ನಡದ ಜನರನ್ನು ಕ್ರೋಡೀಕರಿಸುವ ಮೂಲಕ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪಿಸಿದರು.
ಕನ್ನಡದ ಕೆಲಸ ದೇವರ ಕೆಲಸ ಎಂದು ನಂಬಿ ಪ್ರಾಮಾಣಿಕವಾಗಿ ಕನ್ನಡದ ಕೆಲಸ ಮಾಡಿದವರು ದೇಶಪಾಂಡೆಯವರು ಎಂದು ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್.ಬಿ. ವಾಲೀಕಾರ ಪುತ್ಥಳಿ ಅನಾವರಣಗೊಳಿಸಿದರು. ಡಾ. ಎನ್.ಪಿ. ಭಟ್, ಹಿರಿಯ ಗ್ರಂಥಪಾಲಕ ಡಾ. ಕೆ.ಎಸ್. ದೇಶಪಾಂಡೆ, ಸಂಘದ ಉಪಾಧ್ಯಕ್ಷ ಜಿ.ಜಿ. ದೊಡವಾಡ, ಶಿವಣ್ಣ ಬೆಲ್ಲದ, ಮೋಹನ ನಾಗಮ್ಮನವರ, ಶಂಕರ ಕುಂಬಿ, ಗುರು ಹಿರೇಮಠ ಮತ್ತಿತರರಿದ್ದರು. ಶಂಕರ ಹಲಗತ್ತಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.
ರಾ.ಹ. ದೇಶಪಾಂಡೆ ಅವರು ಸ್ವಾರ್ಥಿಗಳಾಗಿ ಶಿಕ್ಷಣ ಇಲಾಖೆಯಲ್ಲಿ ಮೇಲ್ದರ್ಜೆಯ ಹುದ್ದೆಗೆ ತಲುಪುವ ಆಸೆ ಮಾಡಿದ್ದರೆ ಕರ್ನಾಟಕ ವಿದ್ಯಾವರ್ಧಕ ಸಂಘ ಕಟ್ಟಲು ಆಗುತ್ತಿರಲಿಲ್ಲ. ಅವರಿಗೆ ವಿಪುಲ ಅವಕಾಶಗಳಿದ್ದರೂ ಕನ್ನಡದ ಏಳ್ಗೆಗಾಗಿ ಎಲ್ಲ ತೊರೆದು ಕನ್ನಡದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದರು. ಕನ್ನಡ ಭಾಷೆ ಮೇಲೆ ಮರಾಠಿ ಭಾಷೆ ದಾಳಿ ಮಾಡಿದಾಗ ಅದರ ವಿರುದ್ಧ ಹೋರಾಡಿದ ದೇಶಪಾಂಡೆ ಅವರ ಜೀವನ ಚರಿತ್ರೆ ಶಾಲಾ ಪಠ್ಯಕ್ರಮವಾಗಬೇಕು. ಕನ್ನಡ ಕಟ್ಟಲು ದೇಶಪಾಂಡೆ ಅವರು ಮಾಡಿದ ಸಾಧನೆ ಕುರಿತು ಪಠ್ಯಕ್ರಮದಲ್ಲಿ ಜೋಡಿಸುವ ಮೂಲಕ ಮಕ್ಕಳ ಮನಸ್ಸನ್ನು ಜಾಗ್ರತಗೊಳಿಸಬೇಕು.
- ಡಾ. ಪಾಟೀಲ ಪುಟ್ಟಪ್ಪ, ಹಿರಿಯ ಪತ್ರಕರ್ತ, ನಾಡೋಜ