ವಿವಿಧ ಬೇಡಿಕೆ: ಮಾಧ್ಯಮಿಕ ಶಾಲಾ ನೌಕರರಿಂದ ಪ್ರತಿಭಟನೆ
ಧಾರವಾಡ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಘಟಕ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಇಲ್ಲಿನ ಕಡಪಾ ಮೈದಾನದಲ್ಲಿ ಮಾಜಿ ಸಚಿವ ಬಸವರಾಜ ಹೊರಟ್ಟಿ ಪ್ರತಿಭಟನಾ ರ್ಯಾಲಿಗೆ ಚಾಲನೆ ನೀಡಿದರು. ಅನುದಾನರಹಿತ ಸೇವಾವಧಿಯ ಎಲ್ಲ ಸೌಲಭ್ಯಗಳನ್ನು ಅನುದಾನಿತ ಶಾಲಾ ನೌಕರರಿಗೆ ನೀಡುವ ಕುರಿತು ನ್ಯಾಯಾಲಯದ ಆದೇಶ ಅನುಷ್ಠಾನಗೊಳಿಸಬೇಕು. 2006 ಏಪ್ರಿಲ್ 1ರ ನಂತರ ನೇಮಕವಾದ ಹಾಗೂ ಅನುದಾನಕ್ಕೊಳಪಟ್ಟ ನೌಕರರಿಗೂ ಸಹ ಸರ್ಕಾರಿ ನೌಕರರಿಗೆ ಜಾರಿಗೊಳಿಸದ ಅಂಶದಾಯಿ ವಂತಿಗೆ ಹಾಗೂ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಅದರಂತೆ ವೃತ್ತಿ ಶಿಕ್ಷಣ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಬೋಧಕೇತರ ಸಿಬ್ಬಂದಿ ನೇಮಕಾತಿಗೆ ಅನುಮತಿ ನೀಡಬೇಕು ಹಾಗೂ ಈಗಾಗಲೇ ಕಾರ್ಯನಿರ್ವಹಿಸುತ್ತಿರುವರನ್ನು ಕಾಯಂಗೊಳಿಸಬೇಕು. ವಿವಿಧ ಮಾಹಿತಿ ಪಡೆಯಲು ಸರ್ಕಾರ ಶಿಕ್ಷಣ ಇಲಾಖೆಯ ನೌಕರನ್ನು ಬಳಸಿಕೊಳ್ಳುತ್ತಿದೆ. ಇದರಿಂದಗಾಗಿ ಬೋಧನೆಗೆ ಸಮಯ ಸಿಗದಂತಾಗಿದೆ. ಆದ್ದರಿಂದ ಶಿಕ್ಷಕರನ್ನು ಪಾಠ ಮಾಡಲು ಬಿಡಬೇಕು ಎಂದು ಒತ್ತಾಯಿಸಿದರು.ಎಸ್.ಎನ್. ಗಡದಿನ್ನಿ, ಆನಂದ ಕುಲಕರ್ಣಿ, ಜೆ.ಎ. ಜಹಾಗೀರದಾರ, ಜಿ.ಆರ್. ಭಟ್, ಎಸ್.ಎನ್. ನೆಗಳೂರಮಠ, ಎ.ಬಿ. ಗೊಜನೂರ, ಜಿ.ಎಂ. ಹೊಸಮನಿ, ಎಸ್.ಆರ್. ಮುರಕಟ್ಟಿ ಇದ್ದರು.