ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಇಂದು ಮದ್ಯಮುಕ್ತರ ಧಾರವಾಡ ಜಿಲ್ಲಾ ಸಮಾವೇಶ: ಜಯಶಂಕರ

Vishwanath S
Updated On : 3 Oct 2013, 11:06 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 1
ಮದ್ಯವ್ಯಸನದಿಂದ ಮುಕ್ತರಾಗಿ ನೂತನ ಜೀವನಕ್ಕೆ ಕಾಲಿಟ್ಟಿರುವ ವ್ಯಕ್ತಿಗಳ ನವಜೀವನ ಸದಸ್ಯರ ಜಿಲ್ಲಾ ಸಮಾವೇಶವನ್ನು ಅ. 2ರಂದು ಬೆಳಗ್ಗೆ 10:30ಕ್ಕೆ ಕೇಶ್ವಾಪುರದ ರಾಯಲ್ ಫಂಕ್ಷನ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಪ್ರಾದೇಶಿಕ ನಿರ್ದೇಶಕ ಜಯಶಂಕರ ಶರ್ಮಾ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ಯಮುಕ್ತ ಸಮಾಜ ನಿರ್ಮಿಸುವ ಉದ್ದೇಶದಿಂದ ಡಾ. ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಜನಜಾಗೃತಿ ವೇದಿಕೆ ಹುಟ್ಟು ಹಾಕಲಾಗಿದ್ದು, ಈ ವೇದಿಕೆ ಮುಖಾಂತರ ಮನಃ ಪರಿವರ್ತನೆ, ಮದ್ಯವರ್ಜನೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಇಲ್ಲಿಯವರೆಗೆ 625 ಶಿಬಿರ ಆಯೋಜಿಸಿ 50 ಸಾವಿರಕ್ಕೂ ಹೆಚ್ಚು ಜನರನ್ನು ಮದ್ಯವ್ಯಸನದಿಂದ ಮುಕ್ತಗೊಳಿಸಲಾಗಿದೆ ಎಂದರು.
ಕಳೆದ ವರ್ಷ ಧಾರವಾಡ ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಿರುವ ಕರ್ನಾಟಕ ಜನಜಾಗೃತಿ ವೇದಿಕೆ ಇದುವರೆಗೆ ಸಂಶಿ, ವರೂರ, ಹುಬ್ಬಳ್ಳಿ, ಧಾರವಾಡ ಮತ್ತು ನವಲಗುಂದಗಳಲ್ಲಿ ಮದ್ಯವರ್ಜನ ಶಿಬಿರ ಆಯೋಜಿಸಿತ್ತು. ಜಿಲ್ಲೆಯಲ್ಲಿ ನಡೆದ ಐದು ಶಿಬಿರಗಳಲ್ಲಿ 372 ಮದ್ಯವ್ಯಸನಿಗಳು ಪಾಲ್ಗೊಂಡು ತಮ್ಮ ಜೀವನ ಸುಧಾರಿಸಿಕೊಂಡಿದ್ದಾರೆ. ವೇದಿಕೆಯ ಮುಖಾಂತರ ಪ್ರತಿವರ್ಷ ಹಮ್ಮಿಕೊಳ್ಳುವ ಮದ್ಯವರ್ಜನ ಶಿಬಿರಗಳಿಂದ 38,225 ಜನರಿಗೆ ಚಿಕಿತ್ಸೆ ನೀಡಲಾಗಿದೆ. ಎಂಟು ದಿನ ನಡೆಯುವ ಶಿಬಿರದಲ್ಲಿ ಮದ್ಯ ಬಿಡುವಂತೆ ಔಷಧ ನೀಡುವುದಿಲ್ಲ ಬದಲಿಗೆ ಮಾನಸಿಕವಾಗಿ ಮದ್ಯ ಸೇವನೆ ತ್ಯಜಿಸುವಂತೆ ಪ್ರೇರೇಪಿಸಲಾಗುತ್ತದೆ. ಒಂದು ವೇಳೆ ಮದ್ಯಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮವಾಗಿದ್ದರೆ ಅದಕ್ಕೆ ಚಿಕಿತ್ಸೆ ನೀಡಲಾಗುವುದು ಎಂದರು.
ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮುಖಾಂತರ ಕೈಗೆತ್ತಿಕೊಂಡಿರುವ ವಿವಿಧ ಗ್ರಾಮೀಣಾಭಿವೃದ್ಧಿ ಯೋಜನೆಗಳ ಕುರಿತು ಮಾತನಾಡಿದ ಪ್ರಾದೇಶಿಕ ವ್ಯವಸ್ಥಾಪಕ ಎನ್. ಜಯಶಂಕರ ಶರ್ಮ ಅವರು, ಹುಬ್ಬಳ್ಳಿಯನ್ನು ಕೇಂದ್ರವಾಗಿಟ್ಟು 5 ಜಿಲ್ಲೆಗಳಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದರು.
ಗೋಷ್ಠಿಯಲ್ಲಿ ಧಾರವಾಡ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಪೀರಾಜಿ ಖಂಡೇಕರ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಧಾರವಾಡ ಜಿಲ್ಲಾ ನಿರ್ದೇಶಕ ಎಸ್. ಸೀತಾರಾಮ ಶೆಟ್ಟಿ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement