ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಜಯಂತಿಯಂದೂ ಗಾಂಧೀಜಿ ಅನಾಥ

Vishwanath S
Updated On : 3 Oct 2013, 11:20 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 2
ಹುಬ್ಬಳ್ಳಿ ಅಯೋಧ್ಯಾನಗರ ದಲಿತಕೇರಿಯಲ್ಲಿರುವ ದೇಶದ ಏಕೈಕ 'ಗಾಂಧಿ ಚಿತಾಭಸ್ಮ ಸ್ಮಾರಕ' ಗಾಂಧಿ ಜಯಂತಿಯಂದೇ ಅಕ್ಷರಶಃ ಅನಾಥವಾಗಿ ನಿಂತಿತ್ತು...!
ಗಾಂಧೀಜಿ ಪುತ್ಥಳಿ ಸಹಿತ ಸ್ಮಾರಕಕ್ಕೆ ಮಾಲೆ ಹಾಕಿದ್ದೊಂದು ಬಿಟ್ಟರೆ, ಅಲ್ಲಿ ಭಜನೆಯ ನಿನಾದವಾಗಲಿ, ಖಾದಿಧಾರಿಗಳ ದೌಡಾಗಲಿ, ಹುಟ್ಟು ಹಬ್ಬದ ಸಂಭ್ರಮವಾಗಲಿ ಇದ್ದಿರಲಿಲ್ಲ. ಮಧ್ಯಾಹ್ನದ ಹೊತ್ತಿಗಾಗಲೇ ಸ್ಮಾರಕ ಕೋಣೆಗೂ ಬೀಗ ಬಿದ್ದಿತ್ತು.
ಗಾಂಧೀಜಿಯವರ ಚಿತಾಭಸ್ಮದಿಂದ ಸ್ಥಾಪಿತವಾದ ಗಾಂಧಿ ಸ್ಮಾರಕಗಳು ದೇಶದ 15 ಕಡೆಗಳಲ್ಲಿವೆ. ಈ ಪೈಕಿ ಕರ್ನಾಟಕದ ಹುಬ್ಬಳ್ಳಿಯ ಅಯೋಧ್ಯಾನಗರ, ಹುಬ್ಬಳ್ಳಿಯ ಮಹಿಳಾ ವಿದ್ಯಾಪೀಠ, ಧಾರವಾಡದ ಆಝಾದ್ ಉಪವನ, ಬೆಳಗಾವಿಯ ಮುಗಟಖಾನ ಹುಬ್ಬಳ್ಳಿ, ರಾಮದುರ್ಗ ತಾಲೂಕಿನ ಸುರೇಬಾನ, ಬಳ್ಳಾರಿಯ ಕೌಲಪೇಟ, ಕೂಡ್ಲಿಗಿ, ಹಾಸನದ ಅರಸಿಕೇರಿ, ಗದಗನ ಬೆಟಗೇರಿ, ಹಾವೇರಿಯ ಸಂಗೂರ, ಕರ್ಜಗಿ ಹಾಗೂ ಮಡಿಕೇರಿ ಸೇರಿದಂತೆ 12 ಸ್ಥಳಗಳಲ್ಲಿಯೇ ಚಿತಾಭಸ್ಮ ಸ್ಮಾರಕವಿರುವುದು ವಿಶೇಷ. ಅದರಲ್ಲಿಯೂ ಗಾಂಧೀಜಿಯವರಿಗೆ ಪ್ರಿಯವಾದ ದಲಿತಕೇರಿಯಲ್ಲಿ ಸ್ಥಾಪಿತವಾದ ಗಾಂಧಿ ಸ್ಮಾರಕ ಎಂಬ ಹೆಗ್ಗಳಿಕೆ ಹುಬ್ಬಳ್ಳಿ ಅಯೋಧ್ಯಾನಗರ ಸ್ಮಾರಕಕ್ಕೆ.
ಅಯೋಧ್ಯಾನಗರದಲ್ಲಿ ಗಾಂಧಿ ಚಿತಾಭಸ್ಮವನ್ನು ತಂದಿರಿಸಿದ್ದು ಸ್ವಾತಂತ್ರ್ಯ ಹೋರಾಟಗಾರರಾದ ಚನ್ನಪ್ಪ ಭದ್ರಾಪುರ. 1963ರಲ್ಲಿ ಈ ಸ್ಮಾರಕವನ್ನು ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಡಿ. ಸಂಜೀವಯ್ಯ ಉದ್ಘಾಟಿಸಿದ್ದರು. ಬಳ್ಳಾರಿಯ ಕೂಡ್ಲಿಗಿಯಲ್ಲಿ ಸ್ಥಾಪಿತವಾದ ಗಾಂಧಿ ಸ್ಮಾರಕಕ್ಕೆ 1967ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಭೇಟಿ ನೀಡಿ ಗೌರವ ಸಲ್ಲಿಸಿದ್ದರು. ಇದೇ ವೇಳೆ ಅಯೋಧ್ಯಾನಗರದ ಸ್ಮಾರಕಕ್ಕೆ ಬಿ.ಡಿ. ಜತ್ತಿ, ದೇವರಾಜ ಅರಸು ಸೇರಿದಂತೆ ಲಿಂಗಾಯತ ಸ್ವಾಮೀಜಿ ಮೂಜಗಂ ಸಹ ದಲಿತಕೇರಿಯಲ್ಲಿರುವ ಈ ಸ್ಮಾರಕಕ್ಕೆ ಬಂದು ಗೌರವ ಸಲ್ಲಿಸಿದ್ದು ಈಗ ಇತಿಹಾಸ.
ಆದರೆ, ವಿಪರ್ಯಾಸವೋ ಎನ್ನುವಂತೆ ಗಾಂಧೀಜಿ ತತ್ವ, ಆದರ್ಶಗಳ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುವ ನಾಯಕರಿಗೆ ಕೊನೆ ಪಕ್ಷ ಗಾಂಧಿ ಜಯಂತಿಯಂದಾದರೂ ಸ್ಮಾರಕಕ್ಕೆ ಭೇಟಿ ಕೊಟ್ಟು ಗೌರವ ಸಲ್ಲಿಸಲು ಸಮಯವಿದ್ದಿರಲಿಲ್ಲ. ಗಾಂಧಿ ಜಯಂತಿಯಂದೇ ಹೊಸ ರೈಲುಗಳ ಸಂಚಾರಕ್ಕೆ ಚಾಲನೆ ನೀಡಲು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹುಬ್ಬಳ್ಳಿಗೆ ಆಗಮಿಸಿದ್ದರು. ಇವರೊಂದಿಗೆ ಸಚಿವ, ಸಂಸದ, ಶಾಸಕರ ದಂಡೇ ನೆರೆದಿತ್ತಾದರೂ, ಗಾಂಧಿ ಚಿತಾಭಸ್ಮ ಸ್ಮಾರಕದ ಬಳಿ ಬಂದು ಗೌರವ ಸಲ್ಲಿಸಲು ಯಾರೂ ಮನಸ್ಸು ಮಾಡಲಿಲ್ಲ. ಕನಿಷ್ಠ ಪಕ್ಷ ಜಿಲ್ಲಾಡಳಿತವಾಗಲಿ, ಸ್ಥಳೀಯ ಪಾಲಿಕೆ ಅಧಿಕಾರಿಗಳೂ ಇತ್ತ ಹಾಯಲಿಲ್ಲ. ಇದು ಜನಪ್ರತಿನಿಧಿಗಳ 'ಗಾಂಧಿ ಪ್ರೇಮಕ್ಕೆ' ಹಿಡಿದ ಕೈಗನ್ನಡಿಯಾಗಿತ್ತು.
ದೇಶದ ಆಸ್ತಿಯಾಗಿರುವ ಗಾಂಧಿ ಇಂಥ ಸ್ಮಾರಕಕ್ಕೆ ಗಾಂಧಿ ಜಯಂತಿ ದಿನವಾದರೂ ಗೌರವ ಸಲ್ಲಿಸುವ ಹೃದಯ ವೈಶಾಲ್ಯತೆ ಇಲ್ಲದಿರುವ ಸರ್ಕಾರ, ಜನಪ್ರತಿನಿಧಿಗಳಿರುವಾಗ, ಈ ಸ್ಮಾರಕಗಳು ಇತಿಹಾಸದ ಪುಟ ಸೇರುವುದರಲ್ಲಿ ಸಂದೇಹವೇ ಇಲ್ಲ ಎಂದು ಖೇದದಿಂದ ಹೇಳಬಹುದಷ್ಟೇ.
ಅಯೋಧ್ಯಾನಗರದ ಗಾಂಧಿ ಚಿತಾಭಸ್ಮ ಸ್ಮಾರಕ ಸೇರಿದಂತೆ ದೇಶದ ಎಲ್ಲ ಗಾಂಧಿ ಸ್ಮಾರಕಗಳನ್ನು ಗಾಂಧೀಜಿಯವರ ಚಿರನೂತನ ಚಿಂತನೆಗಳನ್ನು ಪ್ರಚುರ ಪಡಿಸುವ ಕೇಂದ್ರಗಳಾಗಿ ಮಾಡಬೇಕು ಎಂದು ಒಂದು ದಶಕದಿಂದ ಹೋರಾಟ ನಡೆಸುತ್ತಾ ಬಂದಿದ್ದೇನೆ. ಇದಕ್ಕೆ ಸ್ಪಂದಿಸಿದ ಕೇಂದ್ರ ಸಂಸ್ಕೃತಿ ಸಚಿವಾಲಯ ಗಾಂಧಿ ಪಾರಂಪರಿಕ ಸ್ಥಳಗಳ ಪ್ರಚಾರ ಯೋಜನೆಯಡಿ ಗಾಂಧಿ ಚಿತಾಭಸ್ಮ ಸ್ಮಾರಕ ಸೇರಿದಂತೆ ದೇಶಾದ್ಯಂತ ಗಾಂಧೀಜಿಯವರು ಭೇಟಿ ನೀಡಿದ 2 ಸಾವಿರಕ್ಕೂ ಹೆಚ್ಚು ಸ್ಥಳಗಳನ್ನು ರಕ್ಷಿಸುವುದಾಗಿ ಹೇಳಿದೆಯಾದರೂ ಅದು ಕಾರ್ಯರೂಪಕ್ಕೆ ಬಾರದಿರುವುದು ಖೇದಕರ.
- ಬಾಬುರಾಜೇಂದ್ರ ಭದ್ರಾಪುರ
ಅಧ್ಯಕ್ಷ, ರಾಷ್ಟ್ರೀಯ ರಚನಾತ್ಮಕ ಕ್ರಿಯಾರಂಗ, ಹುಬ್ಬಳ್ಳಿ


- ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement