ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆಗೆ ಮಹತ್ವ ನೀಡಬೇಕಿಲ್ಲ: ಬಸವರಾಜ ಹೊರಟ್ಟಿ
ಹುಬ್ಬಳ್ಳಿ: ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂಬುದು ತಮ್ಮ ಬಯಕೆ ಎಂದು ಜೆಡಿಎಸ್ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ನೀಡಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಇದಕ್ಕೆ ಹೆಚ್ಚಿನ ಒತ್ತು ನೀಡಬೇಕಿಲ್ಲ. ಜೆಡಿಎಸ್‌ನಿಂದ ದೂರವಾಗುವ ನಿಟ್ಟಿನಲ್ಲಿ ಅವರು ಹೇಳಿಕೆ ನೀಡಿದ್ದಾರೆಂದು ಹೇಳುವುದು ಸರಿಯಲ್ಲ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.
ನಗರದಲ್ಲಿ ಬುಧವಾರ ಕಿಮ್ಸ್ ಆವರಣದಲ್ಲಿ ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ ನೀಡಿರುವ ಹೇಳಿಕೆ ಜೆಡಿಎಸ್ ಪಕ್ಷದ್ದು ಎಂದು ವ್ಯಾಖ್ಯಾನಿಸುವುದು ತಪ್ಪು. ಒಂದು ಪಕ್ಷದ ವ್ಯವಸ್ಥೆಯಲ್ಲಿದ್ದು ಅವರು ಮೋದಿ ಪರ ಹೇಳಿಕೆ ನೀಡಬಾರದಿತ್ತು ಎಂದರು.
ರಾಜ್ಯಾಧ್ಯಕ್ಷ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯತ್ನಾಳ ಬಿಜೆಪಿ ಮುಖಂಡ ಮೋದಿ ಪರ ಮಾತನಾಡಿದ್ದಾರೆಂಬುದು ಸುಳ್ಳು. ಎ. ಕೃಷ್ಣಪ್ಪ ಅವರನ್ನು ರಾಜ್ಯಾಧ್ಯಕ್ಷ ಮಾಡುವ ವಿಷಯ ಬಂದಾಗ ತಾವು ಸೇರಿದಂತೆ ಯತ್ನಾಳ ಸಹ ಒಪ್ಪಿಗೆ ಸೂಚಿಸಿದ್ದಾರೆ. ಅವರನ್ನು ಇಡೀ ಪಕ್ಷವೇ ಸ್ವೀಕರಿಸಿರುವಾಗ ಯತ್ನಾಳ ಸ್ವೀಕರಿಸದಿರುವ ಪ್ರಶ್ನೆಯೇ ಉದ್ಭವಿಸದು ಎಂದರು.
ತಾವು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಳೆ ಮಿತ್ರರು ನಿಜ. ಅವರು ನನಗೆ ಕಾಂಗ್ರೆಸ್‌ಗೆ ಬರುವಂತೆ ಆಹ್ವಾನ ನೀಡಿದ್ದಾರೆ ಅಥವಾ ನಾನು ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತ ಪಡಿಸಿದ್ದೇನೆನ್ನುವುದು ಶುದ್ಧ ಸುಳ್ಳು. ಒಂದು ವೇಳೆ ಬೇರೆ ಪಕ್ಷಕ್ಕೆ ಹೋಗುವುದೇ ಆಗಿದ್ದರೆ ಯಡಿಯೂರಪ್ಪನವರು ಹಿಂದೆಯೇ ಬಿಜೆಪಿಗೆ ಆಹ್ವಾನವಿತ್ತಿದ್ದರು. ನಾನು ರಾಜಕೀಯದಲ್ಲಿರುವವರೆಗೆ ಜೆಡಿಎಸ್‌ನಲ್ಲಿಯೇ ಮುಂದುವರಿಯುತ್ತೇನೆ, ಈ ಬಗ್ಗೆ ಯಾವುದೇ ಸಂಶಯ ಬೇಡ ಎಂದು ಸ್ಪಷ್ಟಪಡಿಸಿದರು.