ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ರಾಹುಲ್-ಸಿಂಗ್ ಮಧ್ಯೆ ಮನಸ್ತಾಪವಿಲ್ಲ

Vishwanath S
Updated On : 3 Oct 2013, 11:08 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 2
ಕ್ರಿಮಿನಲ್ ಪ್ರಕರಣಗಳಲ್ಲಿ ಜೈಲು ಶಿಕ್ಷೆಗೆ ಒಳಗಾದ ಶಾಸಕ - ಸಂಸದರನ್ನು ಶಾಸನಸಭಾ ಸದಸ್ಯತ್ವದ ಅನರ್ಹತೆಯಿಂದ ರಕ್ಷಿಸುವ ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿದ್ದೇವೆ. ಈ ವಿಷಯದಲ್ಲಿ ಪಕ್ಷ ತೆಗೆದುಕೊಳ್ಳುವ ನಿರ್ಣಯ ಪ್ರಶ್ನಿಸುವುದಿಲ್ಲ ಎಂದು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಗ್ರೀವಾಜ್ಞೆ ಕುರಿತು ರಾಹುಲ್ ಗಾಂಧಿ ವ್ಯಕ್ತಪಡಿಸಿರುವ ಅಭಿಪ್ರಾಯ ವೈಯಕ್ತಿಕ. ಈ ವಿಷಯವಾಗಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ರಾಹುಲ್ ಗಾಂಧಿ ನಡುವೆ ಮನಸ್ತಾಪ ಉಂಟಾಗಿದೆ ಎಂದು ವ್ಯಾಖ್ಯಾನಿಸುವುದು ಸರಿಯಲ್ಲ. ರಾಹುಲ್ ತಮ್ಮ ಇಂಗಿತ ವ್ಯಕ್ತಪಡಿಸಿದ್ದನ್ನು, ಪ್ರಧಾನಿ ವಿರುದ್ಧದ ಹೇಳಿಕೆ ಎಂಬ ದೃಷ್ಟಿಕೋನದಿಂದ ನೋಡುವುದೇ ತಪ್ಪು. ಸುಗ್ರೀವಾಜ್ಞೆ ಕುರಿತಾಗಿ ಪಕ್ಷದ ತೀರ್ಮಾನವೇ ಅಂತಿಮ. ಈ ತೀರ್ಮಾನಕ್ಕೆ ಎಲ್ಲರೂ ತಲೆ ಬಾಗುತ್ತೇವೆ ಎಂದರು.
ಸ್ವದೇಶಿ ವಸ್ತುವಿಗೆ ಉತ್ತೇಜನ: ಸರ್ಕಾರ ಗುಡಿ ಕೈಗಾರಿಕೆ ಹಾಗೂ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಲಿದೆ. ಇದೇ ವೇಳೆ ಸ್ವದೇಶಿ ಉತ್ಪನ್ನಗಳ ಬಳಕೆ ಹೆಚ್ಚಾಗಬೇಕಿದೆ. ಇದರಿಂದಾಗಿ ದೇಶಿಯ ಕೈಗಾರಿಕೆಗಳು ಬಲಗೊಳ್ಳುವುದರ ಜತೆಗೆ ದೇಶದ ಆರ್ಥಿಕ ಸ್ಥಿತಿ ಅಭಿವೃದ್ಧಿ ಹೊಂದಲು ಅನುಕೂಲವಾಗಲಿದೆ. ಮಹಾತ್ಮ ಗಾಂಧೀಜಿಯವರ ಮೌಲ್ಯ, ಆದರ್ಶಗಳ ಪಾಲನೆಯಾಗಬೇಕಿದೆ ಎಂದು ಹೇಳಿದರು. ವೀರಣ್ಣ ಮತ್ತಿಕಟ್ಟಿ, ಎ.ಎಂ. ಹಿಂಡಸಗೇರಿ, ಮಹೇಂದ್ರ ಸಿಂಘಿ, ಜಕ್ಕಪ್ಪನವರ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement