ಶಾಲೆಯಲ್ಲ ಇದು ಸೆರೆಮನೆ..!
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 1
ಸೆರೆಮನೆಯಂತಿರುವ ಈ ಶಾಲೆಯಲ್ಲಿನ ಮಕ್ಕಳ ಜೀವನ ಖೈದಿಗಳಿಗಿಂತ ಭಿನ್ನವಾಗಿಯೇನೂ ಇಲ್ಲ. ಶೈಕ್ಷಣಿಕ ವರ್ಷ ಪ್ರಾರಂಭದ ದಿನವೇ ಶಾಲೆಯೊಳಗೆ ಕಾಲಿಡುವ ಮಕ್ಕಳು, ಹೊರಜಗತ್ತು ಕಾಣುವುದು ಶಾಲೆಗೆ ರಜೆ ನೀಡಿದಾಗಲೇ !!
ಹುಬ್ಬಳ್ಳಿ ನಿಲಿಜನ್ ರಸ್ತೆಯ ಶ್ರೀನಾಥ ಕಾಂಪ್ಲೆಕ್ಸ್ನ 4 ಮತ್ತು 5ನೇ ಮಹಡಿಯಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ-2ರ ವಿದ್ಯಾರ್ಥಿಗಳ ಸ್ಥಿತಿ ದೇವರಿಗೇ ಪ್ರೀತಿ.
6 ರಿಂದ 10ನೇ ತರಗತಿವರೆಗಿನ 90 ವಿದ್ಯಾರ್ಥಿನಿಯರು ಹಾಗೂ 128 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 218 ವಿದ್ಯಾರ್ಥಿಗಳಿರುವ ಈ ಮೊರಾರ್ಜಿ ಶಾಲೆಯ ಸ್ಥಿತಿ ಸೆರೆಮನೆಗಿಂತಲೂ ಭಿನ್ನವಾಗಿಲ್ಲ. ಬೆಳಗ್ಗೆ 10 ರಿಂದ ಸಂಜೆ 5.30ರ ವರೆಗೆ ತರಗತಿಗೆ ಹಾಜರಾಗುವ ಇಲ್ಲಿಯ ವಿದ್ಯಾರ್ಥಿಗಳು, ನಂತರ ಶಾಲೆಯಲ್ಲಿಯೇ ಊಟ ಹಾಗೂ ವಸತಿ.
ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅಂಗ ಸಂಸ್ಥೆಯಾಗಿರುವ ಈ ಶಾಲೆ ಇರುವ ಶ್ರೀನಾಥ್ ಕಾಂಪ್ಲೆಕ್ಸ್ ಜನನಿಬಿಡ ಹಾಗೂ ವಾಹನ ದಟ್ಟಣೆ ಪ್ರದೇಶದಲ್ಲಿರುವುದರಿಂದ ವಾಹನಗಳ ಶಬ್ದ ಇಲ್ಲಿ ಸಾಮಾನ್ಯ. ಮೊರಾರ್ಜಿ ಶಾಲೆ 4 ಮತ್ತು 5ನೇ ಮಹಡಿಯಲ್ಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ಕೆಳಗಿಳಿಯಲು ಅವಕಾಶ ಇಲ್ಲ. ಹಗಲು ತರಗತಿ ಕೋಣೆಯಾಗಿ ರಾತ್ರಿ ಊಟ ಮತ್ತು ವಸತಿ ಕೋಣೆಯಾಗುವ ಈ ಶಾಲೆಯಲ್ಲಿಯೇ ವಿದ್ಯಾರ್ಥಿಗಳು ಸಮಯ ಕಳೆಯಬೇಕು.
ಶಾಲೆಗೆ ರಜೆ ನೀಡಿದಾಗ ವಿದ್ಯಾರ್ಥಿಗಳು ಪಾಲಕರೊಂದಿಗೆ ತಮ್ಮ ತಮ್ಮ ಊರುಗಳಿಗೆ ಹೋಗುವಾಗಲೇ 4 ಮತ್ತು 5ನೇ ಮಹಡಿಯಿಂದ ಕೆಳಗಿಳಿಯಬೇಕು. ಆಗಲೇ ಇವರಿಗೆ ಹೊರ ಜಗತ್ತಿನ ದರ್ಶನ. ಅದುವರೆಗೆ 4 ಮತ್ತು 5ನೇ ಮಹಡಿಯಲ್ಲಿರುವ ಕಿಟಕಿಗಳಿಂದಲೇ ಹೊರ ಜಗತ್ತು ನೋಡಬೇಕು.
ಆಟವಾಡಬೇಕೆಂದರೆ ಕಟ್ಟಡದ 6ನೇ ಮಹಡಿ ಮೇಲಿನ ಮಾಳಿಗೆಯೇ ಗತಿ. ಅದೂ ಹಗಲು ಹೊತ್ತಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಸಮ್ಮುಖದಲ್ಲಿ ಮಾತ್ರ. ಮುಂಜಾಗೃತೆಗಾಗಿ ಮಾಳಿಗೆ ಸುತ್ತಲೂ ಕಟಂಜರಿ ನಿರ್ಮಿಸಲಾಗಿದೆ. ಶಾಲೆಯಲ್ಲಿ ಕೋಣೆಗಳನ್ನು ವಿಂಗಡಣೆ ಮಾಡುವ ಕೆಲಸ ಇನ್ನೂ ಆಗಿಲ್ಲ. ಹಾಗಾಗಿ ಒಂದೊಂದು ಮೂಲೆಯಲ್ಲಿ ಒಂದೊಂದು ತರಗತಿ ನಡೆಯುತ್ತವೆ. 4ನೇ ಮಹಡಿಯಲ್ಲಿ ವಿದ್ಯಾರ್ಥಿಗಳು ಊಟ ಮತ್ತು ವಸತಿ ಮಾಡುತ್ತಿದ್ದರೆ, 5 ಮಹಡಿ ವಿದ್ಯಾರ್ಥಿನಿಯರಿಗೆ ಮೀಸಲು. ಹೆಚ್ಚಿನ ವಿದ್ಯಾರ್ಥಿಗಳಿಗೆ ಡೆಸ್ಕ್ಗಳಿಲ್ಲದ ಕಾರಣ ನೆಲದ ಮೇಲೆ ಕುಳಿತೇ ಬರೆಯುವ ಅನಿವಾರ್ಯತೆ. 4ನೇ ಮಹಡಿಯಲ್ಲಿನ ಸ್ನಾನಗೃಹದ ಕಿಟಕಿಯ ಗಾಜುಗಳು ಒಡೆದಿದ್ದು, ವಿದ್ಯಾರ್ಥಿಗಳು ಅಪಾಯದ ಸ್ಥಿತಿ ಎದುರಿಸುತ್ತಿದ್ದಾರೆ. ಅಡುಗೆ ಕೋಣೆ ಪ್ರತ್ಯೇಕವಾಗಿದ್ದು, ಎರಡೂ ಮಹಡಿಯಲ್ಲಿ ಒಂದೊಂದು ಶೌಚಾಲಯ ಇದೆ. ಹೀಗಾಗಿ ಬೆಳಗ್ಗೆ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿತ್ಯ ಕಾಣುತ್ತದೆ.
2005ರಲ್ಲಿ ಸ್ಥಾಪನೆಗೊಂಡಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ-2 ಪ್ರಾರಂಭದಲ್ಲಿ ಕಾರವಾರ ರಸ್ತೆಯಲ್ಲಿರುವ ಸಿದ್ಧಾರೂಢ ಮಠದ ಬಳಿ ಇತ್ತು. ನಂತರ ರೇಣುಕಾ ನಗರಕ್ಕೆ ಸ್ಥಳಾಂತರಗೊಂಡು, 3 ವರ್ಷಗಳವರೆಗೆ ಅಲ್ಲಿಯೇ ಶಾಲೆ ಮುಂದುವರೆಯಿತು. ಕಳೆದ ನಾಲ್ಕು ತಿಂಗಳುಗಳಿಂದ ನಿಲಿಜನ್ ರಸ್ತೆಯಲ್ಲಿನ ಶ್ರೀನಾಥ ಕಾಂಪ್ಲೆಕ್ಸ್ನಲ್ಲಿ ಶಾಲೆ ನಡೆಯುತ್ತಿದೆ. ಅಂದರೆ ಕಳೆದ ನಾಲ್ಕು ತಿಂಗಳುಗಳಿಂದ ಈ ಶಾಲೆಯ ವಿದ್ಯಾರ್ಥಿಗಳು ಸೆರೆಮನೆಯ ವಾತಾವರಣದಲ್ಲಿ ಕಾಲ ಕಳೆಯುತ್ತಿದ್ದಾರೆ.
ಸರ್ಕಾರ ಈ ಶಾಲೆಗೆ ಹುಬ್ಬಳ್ಳಿ ಹೊರವಲಯದ ಅಂಚಟಗೇರಿ ಬಳಿ 10 ಎಕರೆ ಜಾಗ ನೀಡಿದ್ದು, ಕಟ್ಟಡ ನಿರ್ಮಾಣ ಕಾರ್ಯ ನಡೆಯಬೇಕಿದೆ. ಅದುವರೆಗೆ ಈ ಶಾಲೆಯ ವಿದ್ಯಾರ್ಥಿಗಳು ಸೆರೆಮನೆ ವಾತಾವರಣದಲ್ಲಿಯೇ ಶಿಕ್ಷಣ ಪಡೆಯುವುದು ಅನಿವಾರ್ಯ.
ರೇಣುಕಾ ನಗರದ ಬಾಡಿಗೆ ಕಟ್ಟಡದಲ್ಲಿ ಶಾಲೆ ನಡೆಸಲಾಗುತ್ತಿತ್ತು. ಆ ಕಟ್ಟಡದ ಒಪ್ಪಂದದ ಅವಧಿ ಮುಗಿದ ನಂತರ ಹುಬ್ಬಳ್ಳಿಯಲ್ಲೆಲ್ಲ ಉತ್ತಮ ಕಟ್ಟಡಕ್ಕೆ ಎರಡ್ಮೂರು ತಿಂಗಳು ಹುಡುಕಾಟ ನಡೆಸಿದೆವು. ಶಾಲೆಗೆ ಯೋಗ್ಯ ಕಟ್ಟಡ ಲಭ್ಯವಾಗದ ಕಾರಣ ಅನಿವಾರ್ಯವಾಗಿ ಈ ಕಟ್ಟಡಕ್ಕೆ ಶಾಲೆ ಸ್ಥಳಾಂತರಿಸಲಾಯಿತು. ಅಂಚಟಗೇರಿ ಬಳಿ ಸರ್ಕಾರ ನೀಡಿರುವ 10 ಎಕರೆ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡ ತಕ್ಷಣ ಶಾಲೆ ಸ್ಥಳಾಂತರಿಸಲಾಗುವುದು.
- ಸಿ.ಎಂ. ಸಜ್ಜನ, ಪ್ರಾಚಾರ್ಯರು,
ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ-2, ಹುಬ್ಬಳ್ಳಿ
4 ಮತ್ತು 5ನೇ ಮಹಡಿಯಂಥ ಎತ್ತರದ ಪ್ರದೇಶದಲ್ಲಿ ಶಾಲೆ ನಡೆಸುವುದು ಸರಿ ಅಲ್ಲ. ಈ ಕುರಿತು ಪರಿಶೀಲಿಸಲಾಗುವುದು. ನೆಲ ಮಹಡಿ ಇರುವ ಕಟ್ಟಡ ಹುಡುಕಿ ಶಾಲೆ ಸ್ಥಳಾಂತರಕ್ಕೆ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗೆ ಸೂಚನೆ ನೀಡಲಾಗುವುದು.
- ಸಮೀರ ಶುಕ್ಲಾ, ಜಿಲ್ಲಾಧಿಕಾರಿ, ಧಾರವಾಡ
-ಆನಂದ ಅಂಗಡಿ