ಶೀಘ್ರ ಹಣ ಬಿಡುಗಡೆ ಮಾಡಲಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 2
ಕರ್ನಾಟಕದಲ್ಲಿ ರೇಲ್ವೆ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ತನ್ನ ಪಾಲಿನ ರು. 550 ಕೋಟಿ ಬಿಡುಗಡೆಗೆ ಶೀಘ್ರ ಕ್ರಮಕೈಗೊಳ್ಳಲಿ ಎಂದು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಹುಬ್ಬಳ್ಳಿ ರೇಲ್ವೆ ನಿಲ್ದಾಣದ ಬಳಿ ಮಂಗಳವಾರ ಆಯೋಜಿಸಿದ್ದ ಹುಬ್ಬಳ್ಳಿ-ಸಿಕಂದರಾಬಾದ್-ಹುಬ್ಬಳ್ಳಿ ಎಕ್ಸ್ಪ್ರೆಸ್(ವಾರದಲ್ಲಿ ಮೂರು ಬಾರಿ) ಹಾಗೂ ಹುಬ್ಬಳ್ಳಿ-ಲೋಕಮಾನ್ಯ ತಿಲಕ್ ಟರ್ಮಿನಸ್-ಹುಬ್ಬಳ್ಳಿ ಎಕ್ಸ್ಪ್ರೆಸ್ (ಸಾಪ್ತಾಹಿಕ) ರೈಲುಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಸಚಿವ ಖರ್ಗೆ ಮಾತನಾಡಿದರು.
ಕರ್ನಾಟಕದಲ್ಲಿ ರೇಲ್ವೆ ಯೋಜನೆಗಳಿಗಾಗಿ ರು. 350 ಕೋಟಿಯನ್ನು ರೇಲ್ವೆ ಸಚಿವಾಲಯ ಕಳೆದ ಬಜೆಟ್ನಲ್ಲಿ ಮೀಸಲಿಡಲಾಗಿತ್ತು. ತಾವು ಸಚಿವರಾದ ನಂತರ ಈ ಹಣವನ್ನು ರು. 750 ಕೋಟಿಗೆ ಏರಿಸಲಾಯಿತು. ಇದರಲ್ಲಿ ರಾಜ್ಯ ಸರ್ಕಾರ ತನ್ನ ಪಾಲಿನ ರು. 134 ಕೋಟಿಗಳನ್ನು ರೇಲ್ವೆ ಯೋಜನೆಗೆ ನೀಡಿದೆ. ಬಾಕಿ ಇರುವ ರು. 550 ಕೋಟಿ ನೀಡಬೇಕಿದೆ. 58 ಕಿ.ಮೀ. ಉದ್ದದ ರಾಯಚೂರು-ಕಟವಾಲ, 85 ಕಿ.ಮೀ. ಉದ್ದದ ಕಡೂರ-ಚಿಕ್ಕಮಗಳೂರು ಹಾಗೂ ಕೋಲಾರ-ಚಿಕ್ಕಮಗಳೂರು ಹೊಸ ರೈಲು ಮಾರ್ಗಗಳನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು.
ಹೊಸ ರೈಲುಗಳು, ರೈಲುಗಳ ವಿಸ್ತರಣೆ, ರೇಲ್ವೆ ಮಾರ್ಗ ನಿರ್ಮಾಣ ಸೇರಿದಂತೆ ರಾಜ್ಯದಲ್ಲಿ 31 ಯೋಜನೆಗಳನ್ನು ಜಾರಿಗೆ ತರುವ ನೀಲನಕಾಶೆ ರೂಪಿಸಲಾಗಿದೆ. ಇದಕ್ಕಾಗಿ 14,659 ಎಕರೆ ಜಮೀನಿನ ಅವಶ್ಯಕತೆ ಇದ್ದು, ಇದರಲ್ಲಿ 3,899 ಎಕರೆ ಜಮೀನನ್ನು ರಾಜ್ಯ ಸರ್ಕಾರ ಇದುವರೆಗೆ ನೀಡಿದೆ.
ತಾವು ರೇಲ್ವೆ ಸಚಿವರಾಗಿ ಅಧಿಕಾರ ವಹಿಸಿಕೊಂಡ 110 ದಿನಗಳಲ್ಲಿ 14 ಹೊಸ ರೈಲುಗಳಿಗೆ ಚಾಲನೆ ನೀಡಿದ್ದು, ಬಜೆಟ್ನಲ್ಲಿ ಮಂಡಿಸದೇ ಇದ್ದರೂ ಹೊಸ ರೈಲುಗಳಿಗೆ ಚಾಲನೆ ನೀಡಲಾಗಿದೆ. ಈ ಭಾಗದ ಬಹುದಿನಗಳ ಬೇಡಿಕೆಯಾಗಿದ್ದ ಹುಬ್ಬಳ್ಳಿ-ಸಿಕಂದರಾಬಾದ್-ಹುಬ್ಬಳ್ಳಿ ಎಕ್ಸ್ಪ್ರೆಸ್ ಹಾಗೂ ಹುಬ್ಬಳ್ಳಿ-ಲೋಕಮಾನ್ಯ ತಿಲಕ್ ಟರ್ಮಿನಸ್-ಹುಬ್ಬಳ್ಳಿ ಎಕ್ಸ್ಪ್ರೆಸ್ ರೈಲುಗಳ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪಿಸಿರಲಿಲ್ಲ. ಆದರೂ ತಾವು ಇಲ್ಲಿಯ ಜನರ ಬೇಡಿಕೆ ಪರಿಗಣಿಸಿ, ಹೊಸ ರೈಲುಗಳ ಸಂಚಾರಕ್ಕೆ ಚಾಲನೆ ನೀಡಿದ್ದಾಗಿ ತಿಳಿಸಿದರು. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣದ ಸಮಸ್ಯೆ ಸಾಕಷ್ಟು ಬಗೆ ಹರಿದಿದೆ. ಧಾರವಾಡ-ಬೈಲಹೊಂಗಲ-ಬೆಳಗಾವಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ತಮ್ಮ ಅಧಿಕಾರದ ಅವಧಿಯಲ್ಲಿ ಈಡೇರಿಸುವ ಭರವಸೆ ನೀಡಿದರು. ಚೀನಾ, ಅಮೆರಿಕ ನಂತರ ಭಾರತೀಯ ರೈಲು ಇಡೀ ಜಗತ್ತಿನಲ್ಲಿ 3ನೇ ಸ್ಥಾನದಲ್ಲಿದೆ. ದೇಶದಲ್ಲಿ 69 ಸಾವಿರ ಉದ್ದದ ರೈಲು ಮಾರ್ಗವಿದ್ದು, ನಿತ್ಯ ಸಂಚರಿಸುವ 19 ಸಾವಿರ ರೈಲುಗಳಲ್ಲಿ 2.30 ಕೋಟಿಗೂ ಹೆಚ್ಚು ಜನರು ಪ್ರಯಾಣಿಸುತ್ತಾರೆ. ಪ್ರತಿ ವರ್ಷಕ್ಕೆ 800 ಕೋಟಿ ಪ್ರಯಾಣಿಕರು ರೈಲು ಬಳಸುತ್ತಾರೆ. ಪ್ರಯಾಣಿಕರ ರೈಲಿಗಿಂತ ಸರಕು ಸಾಗಣೆ ರೈಲಿನಿಂದ ಹೆಚ್ಚು ಆದಾಯ ರೇಲ್ವೆ ಇಲಾಖೆಗೆ ಬರುತ್ತದೆ. ಪ್ರಯಾಣಿಕರ ರೈಲುಗಳಿಂದ ಪ್ರತಿ ವರ್ಷ ರು. 25 ಸಾವಿರ ಕೋಟಿ ನಷ್ಟವಾಗುತ್ತಿದೆ. ಆದರೂ ಪ್ರಯಾಣಿಕರ ಮೇಲೆ ಹೆಚ್ಚಿನ ಹೊರೆ ಹೇರದೆ ಸರಕು ಸಾಗಣೆಯಿಂದ ಆದಾಯ ಸಂಗ್ರಹಿಸಲಾಗುತ್ತದೆ ಎಂದು ಸಚಿವ ಖರ್ಗೆ ವಿವರಿಸಿದರು. ಇದಕ್ಕೂ ಮೊದಲು ಮಾತನಾಡಿದ ಸಂಸದ ಪ್ರಹ್ಲಾದ ಜೋಶಿ, ಹುಬ್ಬಳ್ಳಿ-ಸಿಕಂದರಾಬಾದ್-ಹುಬ್ಬಳ್ಳಿ ಎಕ್ಸ್ಪ್ರೆಸ್ ಹಾಗೂ ಹುಬ್ಬಳ್ಳಿ-ಲೋಕಮಾನ್ಯ ತಿಲಕ್ ಟರ್ಮಿನಸ್-ಹುಬ್ಬಳ್ಳಿ ಎಕ್ಸ್ಪ್ರೆಸ್ ರೈಲುಗಳು ವಾರದ ಏಳೂ ದಿನ ಸಂಚರಿಸುವಂತಾಗಲಿ ಎಂದರು.
ಬಜೆಟ್ನಲ್ಲಿ ಘೋಷಣೆಯಾಗಿದ್ದರೂ ಇದುವರೆಗೆ ಸಂಚಾರ ಪ್ರಾರಂಭಿಸದ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ ರೈಲು ಧಾರವಾಡ, ಹುಬ್ಬಳ್ಳಿ, ದಾವಣಗೆರೆ ಮೂಲಕ ಶೀಘ್ರ ಸಂಚಾರ ಪ್ರಾರಂಭಿಸಲಿ. ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಜೋಡಿ ಮಾರ್ಗ ನಿರ್ಮಾಣಕ್ಕೆ ತಕ್ಷಣ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.
ನೈಋತ್ಯ ರೇಲ್ವೆ ವಲಯಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಶಾಸಕ ಪ್ರಸಾದ ಅಬ್ಬಯ್ಯ ಆಗ್ರಹಿಸಿದರು. ರಾಣಿ ಚೆನ್ನಮ್ಮ ರೈಲಿಗಿಂತ ಮುಂಚೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಮತ್ತೊಂದು ರೈಲು ಚಲಿಸುವಂತಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮನವಿ ಮಾಡಿದರು. ಸಚಿವರಾದ ಪ್ರಕಾಶ ಹುಕ್ಕೇರಿ ಹಾಗೂ ಆರ್.ವಿ. ದೇಶಪಾಂಡೆ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರು ರೇಲ್ವೆ ಸಚಿವರಾದ ನಂತರ ರಾಜ್ಯಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಖರ್ಗೆ ಅವರು ಇನ್ನೂ ಎರಡ್ಮೂರು ವರ್ಷ ಮುಂಚೆ ಈ ಜವಾಬ್ದಾರಿ ವಹಿಸಿಕೊಂಡಿದ್ದರೆ ಹೆಚ್ಚಿನ ಯೋಜನೆಗಳು ಕರ್ನಾಟಕಕ್ಕೆ ಲಭಿಸುತ್ತಿದ್ದವು ಎಂದರು. ಶಾಸಕರಾದ ಅರವಿಂದ ಬೆಲ್ಲದ, ಸಿ.ಎಸ್. ಶಿವಳ್ಳಿ, ಎನ್.ಎಚ್. ಕೋನರಡ್ಡಿ, ವೀರಣ್ಣ ಮತ್ತಿಕಟ್ಟಿ, ಶ್ರೀನಿವಾಸ ಮಾನೆ, ನಾಗರಾಜ ಛಬ್ಬಿ, ಮಹಾನಗರ ಪಾಲಿಕೆ ಸದಸ್ಯೆ ಸುಧಾ ಮಣಿಕುಂಟ್ಲಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಫಕ್ಕಿರಪ್ಪ ಜಕ್ಕಣ್ಣವರ, ತಾಪಂ ಅಧ್ಯಕ್ಷೆ ದ್ರಾಕ್ಷಾಯಿಣಿ ಕಲಾಲ, ಮಾಜಿ ಸಂಸದರಾದ ಮಂಜುನಾಥ ಕುನ್ನೂರ, ಪ್ರೊ. ಐ.ಜಿ. ಸನದಿ, ಹಿರಿಯ ಪತ್ರಕರ್ತ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಮತ್ತಿತರರು ಉಪಸ್ಥಿತರಿದ್ದರು.
ಹೊಸ ರೈಲುಗಳು, ರೈಲುಗಳ ವಿಸ್ತರಣೆ, ರೇಲ್ವೆ ಮಾರ್ಗ ನಿರ್ಮಾಣ ಸೇರಿದಂತೆ ರಾಜ್ಯದಲ್ಲಿ 31 ಯೋಜನೆಗಳನ್ನು ಜಾರಿಗೆ ತರುವ ನೀಲನಕಾಶೆ ರೂಪಿಸಲಾಗಿದೆ. ಇದಕ್ಕಾಗಿ 14,659 ಎಕರೆ ಜಮೀನಿನ ಅವಶ್ಯಕತೆ ಇದ್ದು, ಇದರಲ್ಲಿ 3,899 ಎಕರೆ ಜಮೀನನ್ನು ರಾಜ್ಯ ಸರ್ಕಾರ ಇದುವರೆಗೆ ನೀಡಿದೆ.
-ಮಲ್ಲಿಕಾರ್ಜುನ ಖರ್ಗೆ ಕೇಂದ್ರ ರೇಲ್ವೆ ಸಚಿವ