ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸುಟ್ಟುಕೊಂಡಿದ್ದ ತಾಯಿ-ಮಗ ಸಾವು: ದೂರು

Vishwanath S
Updated On : 3 Oct 2013, 11:09 am

ಧಾರವಾಡ: ಸೋಮವಾರ ಆಕಸ್ಮಿಕವಾಗಿ ತೀವ್ರವಾಗಿ ಸುಟ್ಟುಕೊಂಡು ಗಾಯಗೊಂಡಿದ್ದ ತಾಲೂಕಿನ ಹೆಬ್ಬಳ್ಳಿ ಗ್ರಾಮದ 35 ವಯಸ್ಸಿನ ಲಕ್ಷ್ಮೀ ಸೂರ್ಯವಂಶಿ ಮತ್ತು ಮಗ ಒಂದು ವರ್ಷದ ಶಿವಾಜಿ ಸೋಮವಾರ ತಡರಾತ್ರಿ ಅಸುನೀಗಿದ್ದಾರೆ. ನೀರು ಕಾಯಿಸಲು ಒಲೆಗೆ ಬೆಂಕಿ ಹಚ್ಚುವ ಸಂದರ್ಭ ಅಲ್ಲಿಯೇ ಇದ್ದ ಸೀಮೆಎಣ್ಣೆ ಡಬ್ಬ ಉರುಳಿ ಲಕ್ಷ್ಮೀಗೆ ಮೊದಲು ಬೆಂಕಿ ಹತ್ತಿಕೊಂಡಿತ್ತು. ತಾಯಿ ಚೀರಾಡುತ್ತಿರುವುದನ್ನು ಕೇಳಿ ನಾಲ್ಕು ವರ್ಷದ ಈರಣ್ಣ ಹಾಗೂ ಒಂದು ವರ್ಷದ ಶಿವಾಜಿ ತಾಯಿ ಕಡೆ ಬಂದಾಗ ಮೂವರಿಗೆ ಬೆಂಕಿ ಹತ್ತಿತ್ತು. ಕೂಡಲೇ ಅಕ್ಕಪಕ್ಕದ ಮನೆಯವರು ಇವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ಘಟನೆಯಲ್ಲಿ ಸ್ಥಳದಲ್ಲಿಯೇ 4 ವರ್ಷದ ಈರಣ್ಣ ಮೃತನಾಗಿದ್ದು, ಶೇ. 90ರಷ್ಟು ಸುಟ್ಟುಕೊಂಡಿದ್ದ ಲಕ್ಷ್ಮೀ ಹಾಗೂ ಶಿವಾಜಿ ಮಂಗಳವಾರ ನಿಧನರಾಗಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಡಿಎಸ್ಪಿ ಬನಹಟ್ಟಿ ಪತ್ರಿಕೆಗೆ ತಿಳಿಸಿದ್ದಾರೆ.
ಮಟಕಾ ಜೂಜಾಟ: ಓರ್ವನ ಬಂಧನ
ಧಾರವಾಡ: ಮಟಕಾ ಜೂಜಾಟ ನಡೆಸುತ್ತಿದ್ದ ಓರ್ವನನ್ನು ತಾಲೂಕಿನ ನಿಗದಿ ಗ್ರಾಮದಲ್ಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಗ್ರಾಮದ ಪರಮೇಶ ಮೂಗಪ್ಪ ಜೋಡಳ್ಳಿ ಎಂಬಾತ ಬಂಧಿತ ಆರೋಪಿ. ಬಂಧಿತನಿಂದ ರು. 2,775 ನಗದು ಮತ್ತು ಮಟಕಾ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಗ್ರಾಮದಲ್ಲಿ ಸೋಮವಾರ ಅಳ್ನಾವರ ಠಾಣಾ ಪಿಎಸೈ ಸಮೀರ ಮುಲ್ಲಾ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು.
ಪತ್ರಕರ್ತ ಎನ್.ವಿ. ಜೋಶಿ ನಿಧನ: ಶ್ರದ್ಧಾಂಜಲಿ
ಕುಂದಗೋಳ: ಹಿರಿಯ ಪತ್ರಕರ್ತ ಎನ್.ವಿ. ಜೋಶಿ ಅವರ ನಿಧನಕ್ಕೆ ಕುಂದಗೋಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಶ್ರದ್ಧಾಂಜಲಿ ಸಲ್ಲಿಸಿತು. ಸಂಘದ ಅಧ್ಯಕ್ಷ ಗುರುಸ್ವಾಮಿ ಬಾಳಿಹಳ್ಳಿಮಠ ಮಾತನಾಡಿ, ಜೋಶಿ ಅವರ ಬದಕು, ಬರಹ ನಮ್ಮ ಯುವ ಪತ್ರಕರ್ತರಿಗೆ ಆದರ್ಶಪ್ರಾಯ. ಅವರ ಆತ್ಮಕ್ಕೆ ಪರಮಾತ್ಮ ಚಿರಶಾಂತಿ ನೀಡಲೆಂದು ಪ್ರಾರ್ಥಿಸಿದರು. ಸಂಘದ ಗೌರಾವಾಧ್ಯಕ್ಷ ಕೆ.ಬಿ. ಹೊಳ್ಳಣ್ಣವರ ಮಾತನಾಡಿದರು. ಸಭೆಯಲ್ಲಿ ಕಾರ್ಯದರ್ಶಿ ಅಶೋಕ ಘೋರ್ಪಡೆ, ಬಸವರಾಜ ಹೊಳ್ಳಣ್ಣವರ, ಮಂಜುನಾಥ ಶಿವಕ್ಕನವರ, ವಾಸುದೇವ ಮುರಗಿ, ಗಂಗಾಧರ ಡಾಂಗೆ, ವೈ.ಡಿ. ಹೊಸೂರ, ಬಸವರಾಜ ಗುಡ್ಡದಕೇರಿ, ಗಂಗಾಧರ ಗುಡೆಮ್ಮನವರ, ಸುಮಾ ಡಾಂಗೆ, ಅಂಬಿಕಾ ಬಾಳಿಹಳ್ಳಿಮಠ, ಸುರೇಖಾ ಹಿರೇಗೌಡ್ರ ಭಾಗವಹಿಸಿದ್ದರು.
ಪ್ರಕಾಶ ಕುಲಕರ್ಣಿ ನಿಧನ
ಹುಬ್ಬಳ್ಳಿ:  ಸ್ಥಳೀಯ ಕೇಶ್ವಾಪುರ ವಿನಯ ಕಾಲೋನಿ ನಿವಾಸಿ ಪ್ರಕಾಶ ಬೋಧರಾವ್ ಕುಲಕರ್ಣಿ (58)  ನಿಧನರಾದರು. ಮೂಲತಃ ಬಾಗಲಕೋಟೆ ಜಿಲ್ಲೆ, ಬೀಳಗಿ ತಾಲೂಕಿನ ಹೆರಕಲ್ ಗ್ರಾಮದ ನಿವಾಸಿಗಳಾಗಿದ್ದ ಅವರಿಗೆ ಪತ್ನ್ನಿ ಪರಿಮಳಾ ಕುಲಕರ್ಣಿ, ಸಹೋದರಿ ಸ್ಮಿತಾ ಕುಲಕರ್ಣಿ ಮತ್ತು ಅಪಾರ ಬಂಧು ಬಳಗವಿದೆ.
ಧಾರವಾಡ: ಇಂದು ಗಾಂಧೀಜಿ ತೊಗಲುಗೊಂಬೆಯಾಟ
ಧಾರವಾಡ: ವಿದ್ಯಾವರ್ಧಕ ಸಂಘದ ಹಾಗೂ ಬಳ್ಳಾರಿ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳ ಟ್ರಸ್ಟ್ ಜಂಟಿಯಾಗಿ ಸೆ. 2ರ ಸಂಜೆ 6ಕ್ಕೆ ಬಳ್ಳಾರಿ ನಾಡೋಜ ಬೆಳಗಲ್ಲು ವೀರಣ್ಣ ನಿರ್ದೇಶನದ ಗಾಂಧೀಜಿ ತೊಗಲುಗೊಂಬೆಯಾಟ ಪ್ರದರ್ಶನವನ್ನು ಸಂಘದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಏರ್ಪಡಿಸಿದೆ. ಅಧ್ಯಕ್ಷತೆಯನ್ನು ವಿಶ್ರಾಂತ ಕುಲಪತಿ ಡಾ.ಎಂ.ಎಂ. ಕಲಬುರ್ಗಿ ವಹಿಸುವರು. ಸಾಹಿತಿಗಳು, ಕಲಾವಿದರು, ಚಿಂತಕರು, ಸಂಘದ ಸದಸ್ಯರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಜೋಶಿ, ಇಂದುಮತಿ ಪುಟ್ಟಪ್ಪಗೆ ಸಂತಾಪ
ಧಾರವಾಡ: ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತರಾಗಿದ್ದ ಎನ್.ವಿ. ಜೋಶಿ ಹಾಗೂ ಬುಧವಾರ ನಿಧನ ಹೊಂದಿದ ಇಂದುಮತಿ ಪಾಟೀಲ ಪುಟ್ಟಪ್ಪ ಅವರಿಗೆ ಮೀಡಿಯಾ ಕ್ಲಬ್ ಬುಧವಾರ ಶ್ರದ್ಧಾಂಜಲಿ ಸಭೆ ಮೂಲಕ ಸಂತಾಪ ವ್ಯಕ್ತಪಡಿಸಿತು. ಹಿರಿಯ ಪತ್ರಕರ್ತ ಗುರುರಾಜ ಜಮಖಂಡಿ ಮಾತನಾಡಿದರು. ಗುರುಮೂರ್ತಿ ಯರಗಂಬಳಿಮಠ ಮಾತನಾಡಿ, ಪತ್ರಿಕೆಯ ಪ್ರಸಾರಂಗದ ಮೂಲಕ ಸೇರಿದ ಅವರಿಗೆ ಇದ್ದ ಬರವಣಿಗೆಯ ಆಸಕ್ತಿಯಿಂದ ಸಂಪಾದಕರಾಗಿಯೂ ನಿವೃತ್ತರಾದರು. ಸಾಪ್ತಾಹಿಕದಲ್ಲಿ ಬರುತ್ತಿದ್ದ ರಾಜಕೀಯ ವಿಶ್ಲೇಷಣೆ ಚರ್ಚೆಗೆ ಅರ್ಹವಾಗುತ್ತಿತ್ತು. ಅವರ ಅಗಲಿಗೆ ಬೇಸರ ತಂದಿದೆ ಎಂದರು. ಪತ್ರಕರ್ತರಾದ ಬಸವರಾಜ ಹೊಂಗಲ, ನಾಗರಾಜ ಕಿರಣಗಿ, ರಾಜೇಂದ್ರ ಪಾಟೀಲ ಮಾತನಾಡಿದರು. ಸಭೆಯಲ್ಲಿ ಮೀಡಿಯಾ ಕ್ಲಬ್ ಅಧ್ಯಕ್ಷ ಪುಂಡಲಿಕ ಹಡಪದ, ಬಸವರಾಜ ಹಿರೇಮಠ, ರವಿ ಕುಲಕರ್ಣಿ, ರವಿ ಕಗ್ಗಣ್ಣವರ, ಮನೋಜ ಗುದ್ದಿ, ಛಾಯಾಗ್ರಾಹಕ ಬಸವರಾಜ ಅಳಗವಾಡಿ, ಮಿಲಿಂದ ಪಿಸೆ, ರಾಮಚಂದ್ರ ಕುಲಕರ್ಣಿ ಇದ್ದರು.
ಸಂತೋಷ ಲಾಡ್ ಸಂತಾಪ
ಧಾರವಾಡ: ಹಿರಿಯ ಪತ್ರಕರ್ತ ನಾಡೋಜ ಪಾಟೀಲ ಪುಟ್ಟಪ್ಪ ಅವರ ಧರ್ಮಪತ್ನಿ ಇಂದುಮತಿ ಅವರ ನಿಧನಕ್ಕೆ ರಾಜ್ಯದ ಮೂಲಭೂತ ಸೌಲಭ್ಯ ಅಭಿವೃದ್ಧಿ ಮತ್ತು ವಾರ್ತಾ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸಂತಾಪ ವ್ಯಕ್ತಪಡಿಸಿದ್ದಾರೆ. ಇಂದುಮತಿ ಅವರು ಗೋಕಾಕ್ ಚಳವಳಿ ಕಾಲದಲ್ಲಿ ಪಾಟೀಲ ಪುಟ್ಟಪ್ಪ ಅವರ ಜೊತೆ ಹೋರಾಟದಲ್ಲಿ ಭಾಗಿಯಾಗಿದ್ದರು. ವಿದ್ಯಾವರ್ಧಕ ಸಂಘದ ಚಟುವಟಿಕೆಗಳಲ್ಲಿ ಸಕ್ರೀಯ ಪಾತ್ರ ವಹಿಸಿದವರಾಗಿದ್ದರು. ಪಾಟೀಲ ಪುಟ್ಟಪ್ಪನವರ ಪ್ರಪಂಚ ಪತ್ರಿಕೆಯ ಪ್ರಕಾಶಕರಾಗಿ, ಆಗುಹೋಗುಗಳಲ್ಲಿ ತೊಡಗಿಸಿಕೊಂಡಿದ್ದ ಅವರ ನಿಧನದಿಂದ ಒಬ್ಬ ಹೋರಾಟಗಾರ್ತಿಯನ್ನು ಕಳೆದುಕೊಂಡಂತಾಗಿದೆ ಎಂದು ಲಾಡ್ ತಿಳಿಸಿದ್ದಾರೆ.
ಅಸ್ವಾಭಾವಿಕ ಸಾವು
ಹುಬ್ಬಳ್ಳಿ: ಹೊಟ್ಟೆ ನೋವು ತಾಳದೇ ವಿಷ ಸೇವಿಸಿದ ಮಹಿಳೆಯೊಬ್ಬಳು ಇಲ್ಲಿನ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ ಎಂದು ಎಪಿಎಂಸಿ-ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಗಾಮಗನಟ್ಟಿ ಗ್ರಾಮದ ಸಾವಿತ್ರಿ ಸುರೇಶ ಹಡಪದ ಎಂಬ ಮಹಿಳೆ ವಿಷ ಸೇವಿಸಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟ ಹಿನ್ನೆಲೆಯಲ್ಲಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅನಸಮ್ಮಾ ನಿಧನ
ಧಾರವಾಡ: ನಗರದ ಮಂಗಳವಾರ ಪೇಟ ಗಾಳಿ ಓಣಿ ನಿವಾಸಿ ಅನಸಮ್ಮಾ ಕೃಷ್ಣಪ್ಪ ಯಲಿಗಾರ (74) ಬುಧವಾರ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳು ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement