ಸುದ್ದಿ ಸಂಕ್ಷೇಪ
ವಿವಾದಿತ ಮಸೂದೆ ಸಿದ್ಧಗೊಳಿಸಿದವರು ಮೂರ್ಖರು: ಜೋಶಿ
ಹುಬ್ಬಳ್ಳಿ: ಅಪರಾಧಿ ಹಿನ್ನೆಲೆಯುಳ್ಳ ಜನಪ್ರತಿನಿಧಿಗಳನ್ನು ರಕ್ಷಿಸಲು ಯುಪಿಎ ಹೊರಡಿಸಿದ ಸುಗ್ರೀವಾಜ್ಞೆ ಮೂರ್ಖತನದ್ದು ಎನ್ನುವುದಾದರೆ, ಅಂಥ ಮಸೂದೆ ಸಿದ್ಧಪಡಿಸಿದವರೂ ಅದೇ ಸಾಲಿಗೆ ಸೇರುತ್ತಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ಪ್ರಹ್ಲಾದ ಜೋಶಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ನ್ಯಾಯಾಲಯದ ತೀರ್ಪನ್ನು ಅವಗಣನೆ ಮಾಡುವಂಥ ಸುಗ್ರೀವಾಜ್ಞೆಯನ್ನು ಬಿಜೆಪಿ ಮೊದಲಿನಿಂದಲೂ ವಿರೋಧಿಸುತ್ತಿದೆ. ಇದಲ್ಲದೇ ಕಾಂಗ್ರೆಸನ ರಾಜಕೀಯ ವ್ಯವಹಾರಗಳ ಸಭೆಯಲ್ಲೂ ಸುದೀರ್ಘ ಚರ್ಚೆಯಾಗಿದೆ. ಆ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಮೌನವಾಗಿದ್ದರು. ಇದೀಗ ರಾಷ್ಟ್ರಪತಿ ಸೇರಿದಂತೆ ಎಲ್ಲರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಮೂರ್ಖತನದ್ದು ಎಂದು ಹೇಳುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ದೇಗುಲಗಳ ಹಣದ
ಅನಿವಾರ್ಯತೆ ಇಲ್ಲ
ಕುಶಾಲನಗರ: ದೇವಾಲಯಗಳ ಆಸ್ತಿ ಅಥವಾ ಚಿನ್ನ ನಂಬಿ ದೇಶದ ಆರ್ಥಿಕ ಸ್ಥಿತಿ ಸುಧಾರಿಸುವ ಅನಿವಾರ್ಯತೆ ನಮ್ಮ ದೇಶಕ್ಕಿನ್ನೂ ಬಂದಿಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಕುಶಾಲನಗರದಲ್ಲಿ ನಡೆದ ನವಜೀವನ ಸದಸ್ಯರ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ದೇವಾಲಯದ ಆಸ್ತಿ ಆಯಾ ದೇವರ ಆಸ್ತಿ ಎಂದೇ ಪರಿಗಣಿಸಬೇಕಾಗಿದೆ ಎಂದರಲ್ಲದೆ ಸರ್ಕಾರದಲ್ಲಿ ಇದು ಕೇವಲ ವ್ಯಕ್ತಿಗತ ಚಿಂತನೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಮಠಮಾನ್ಯಗಳಿಗೆ ಅನಾವಶ್ಯಕವಾಗಿ ಸರ್ಕಾರ ಅನುದಾನ ನೀಡುವ ಪರಿಪಾಠ ಸಲ್ಲದು. ಶಿಕ್ಷಣ, ಆರೋಗ್ಯ, ಇತರೆ ಸಾಮಾಜಿಕ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡಿರುವ ಮಠಮಾನ್ಯಗಳಿಗೆ ಮಾತ್ರ ಸರ್ಕಾರದ ನೆರವು ಇರಬೇಕು ಎಂದರು.
ಬದುಕಿತು ಕೂಸು ಎನ್ನುವಷ್ಟರಲ್ಲಿ ಸಾವು
ಗುಳೇದಗುಡ್ಡ: ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ ಅವಳಿ ಕೂಸುಗಳು ಮರಣಹೊಂದಿವೆ ಎಂದು ಸ್ಮಶಾನಕ್ಕೆ ಒಯ್ದು ಹೂಳುವ ಸಂದರ್ಭದಲ್ಲಿ ಗಂಡು ಮಗುವಿಗೆ ಇನ್ನೂ ಜೀವವಿದ್ದದ್ದು ಗೊತ್ತಾಯಿತು. ತಕ್ಷಣವೇ ಅದೇ ಆಸ್ಪತ್ರೆಗೆ ಒಯ್ದು ಚಿಕಿತ್ಸೆ ನೀಡಿ ಬದುಕಿಸಿಕೊಳ್ಳಲು ನಡೆಸಿದ ಯತ್ನ ಫಲಿಸದೇ ಕೂಸು ಮೃತಪಟ್ಟ ಘಟನೆ ನಡೆದಿದೆ. ಗುಳೇದಗುಡ್ಡ ಪಟ್ಟಣದ ಕಂಠಿಪೇಟೆಯ ಮಹಿಳೆಯೊಬ್ಬರಿಗೆ ಮಂಗಳವಾರ ಸಾಯಂಕಾಲ ಒಂದು ಹೆಣ್ಣು ಹಾಗೂ ಗಂಡು ಅವಳಿ ಮಕ್ಕಳು ಜನಿಸಿದ್ದವು. ಎರಡೂ ಮಕ್ಕಳು ಹುಟ್ಟಿದಾಗಲೇ ಮೃತವಾಗಿವೆ ಎಂದು ಹೂಳಲು ಸ್ಮಶಾನಕ್ಕೆ ಕೊಂಡೊಯ್ಯಲಾಗಿತ್ತು. ಆದರೆ, ಬಂಧುಗಳು ಮಕ್ಕಳ ಮುಖ ನೋಡಲು ಮುಚ್ಚಿದ ಬಟ್ಟೆ ತೆಗೆದಾಗ ಗಂಡು ಮಗು ಉಸಿರಾಡುತ್ತಿರುವುದು ಗಮನಕ್ಕೆ ಬಂದಿತ್ತು. ತಕ್ಷಣವೇ ಆಶ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಉಪಚಾರ ಕೊಡಿಸಿದ್ದಾರೆ. ಫಲಕಾರಿಯಾಗದೇ ಮಗು ಬುಧವಾರ ಬೆಳಗಿನ ಜಾವ ಮೃತಪಟ್ಟಿವೆ.
ಶಾಲಾ ಬಾಲಕಿ ಸಮುದ್ರ ಪಾಲು
ಉಡುಪಿ: ಇಲ್ಲಿನ ಮೂರನೇ ಹಂತದ ಮೀನುಗಾರಿಕಾ ಬಂದರಿನಲ್ಲಿ ಶಾಲೆ ಬಾಲಕಿಯೊಬ್ಬಳು ಕಾಲುಜಾರಿ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ. ಸುನೀತಾ (8) ಮೃತ ಬಾಲಕಿ. ಈಕೆ ಇಲ್ಲಿನ ಫಿಶರೀಸ್ ಪ್ರಾಥಮಿಕ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ. ಬಂದರಿನಲ್ಲಿ ಮೀನು ಹೊರುವ ವಲಸೆ ಕಾರ್ಮಿಕ, ಮೂಲತಃ ದಾವಣಗೆರೆಯ ಹರಪ್ಪನಹಳ್ಳಿಯ ನಿವಾಸಿ ಹಿರಿಯ ನಾಯ್ಕ ಎಂಬವರ ಮಗಳು. ಸಂಜೆ ಶಾಲೆ ಬಿಟ್ಟ ನಂತರ 6 ಗಂಟೆ ಸುಮಾರಿಗೆ ಕೈ ಕಾಲು ತೊಳೆಯಲೆಂದು ಸುನೀತಾ ಬಂದರಿಗೆ ಹೋಗಿದ್ದಾಗ ಅಲ್ಲಿ ಡ್ರಜ್ಜಿಂಗ್ ನಡೆಸಿದ ಸ್ಥಳದಲ್ಲಿ ಸಮುದ್ರ ಆಳವಾಗಿದ್ದು, ಕಾಲು ಜಾರಿ ಬಿದ್ದು ಮೇಲಕ್ಕೆ ಬರಲಾಗದೆ ಮೃತಪಟ್ಟಿದ್ದಾಳೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.