ಅರಣ್ಯ ರಕ್ಷಣೆ ಕಾಯ್ದೆ ಪಾಲಿಸಿ
ಧಾರವಾಡ: ಅರಣ್ಯ ಪಾಲಕರು ಸುದ್ದಿಗಾಗಿ ಸೇವೆ ಮಾಡದೇ, ಸೇವೆಗಾಗಿ ಸುದ್ದಿ ಮಾಡಿ. ಪ್ರಾಮಾಣಿಕತೆ, ಶಿಸ್ತಿನಿಂದ ಕೆಲಸ ನಿರ್ವಹಿಸಿದರೆ ತಾನಾಗಿಯೇ ನಿಮಗೆ ಯಶಸ್ಸು ದೊರೆಯುತ್ತದೆ ಎಂದು ಅರಣ್ಯ ಇಲಾಖೆ ಸಚಿವ ರಮಾನಾಥ ರೈ ಹೇಳಿದರು.
ಸಮೀಪದ ಗುಂಗಾರಗಟ್ಟಿಯಲ್ಲಿರುವ ಅರಣ್ಯ ತರಬೇತಿ ಕೇಂದ್ರದಲ್ಲಿ ಗುರುವಾರ ನಡೆದ ಅರಣ್ಯ ರಕ್ಷಕರ 4ನೇ ತಂಡದ ತರಬೇತಿಯ ಘಟಿಕೋತ್ಸವದಲ್ಲಿ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಜಾಗತಿಕ ತಾಪಮಾನ ನಿಯಂತ್ರಣ ಹಾಗೂ ಮುಂದಿನ ಪೀಳಿಗೆಗೆ ನಾವು ಉತ್ತಮ ಪರಿಸರ ಬಿಟ್ಟು ಹೋಗುವಂತ ಸ್ಥಿತಿಯನ್ನು ನಾವು ಕಾಯ್ದುಕೊಳ್ಳಬೇಕು. ಆ ನಿಟ್ಟಿನಲ್ಲಿ ಅರಣ್ಯ ರಕ್ಷಕರ ತರಬೇತಿಯು ನಿರ್ಧಿಷ್ಟ ವಿಷಯ ಹಾಗೂ ವಸ್ತು ಹೊಂದಿದೆ. ಮಾನವನ ಉಳಿವಿಗಾಗಿ ಕಾನೂನುಗಳ ರಚನೆ ಹಾಗೂ ಅವುಗಳ ಪಾಲನೆಗೆ ಪ್ರತ್ಯೇಕ ವ್ಯವಸ್ಥೆ ಇರುವಂತೆ ಅರಣ್ಯ ರಕ್ಷಣೆಗೂ ಕೂಡ ಕಾಯ್ದೆಗಳಿದ್ದು, ಅವುಗಳ ಪಾಲನೆ ಆಗುವುದು ಅಷ್ಟೇ ಅಗತ್ಯ ಎಂದರು.
ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ. ಶಿವನಗೌಡರ ಅಧ್ಯಕ್ಷತೆ ವಹಿಸಿದ್ದರು. ಒಂಭತ್ತು ತಿಂಗಳ ಈ ತರಬೇತಿಯಲ್ಲಿ ರಾಜ್ಯದ 13 ಅರಣ್ಯ ವೃತ್ತಗಳ 110 ಅರಣ್ಯ ರಕ್ಷಕರಿಗೆ 15 ವಿಷಯಗಳ ತರಬೇತಿ ನೀಡಲಾಗಿದೆ. ಸಸ್ಯಶಾಸ್ತ್ರದಲ್ಲಿ ಉತ್ತರ ಕನ್ನಡದ ನೀಲಾ ನಾಯ್ಕ ಹಾಗೂ ಕಾನೂನು ವಿಷಯದಲ್ಲಿ ನೀಲಾ ನಾಯ್ಕ ಅವರು ಪ್ರಥಮರಾಗಿದ್ದು, ಸಚಿವರಿಂದ ಪ್ರಶಸ್ತಿ ಸ್ವೀಕರಿಸಿದರು.
ತರಬೇತಿ ಸಂಸ್ಥೆ ಮುಖ್ಯಸ್ಥ ಎಚ್.ಕೆ. ಜಗದೀಶ, ತರಬೇತಿ ಕೇಂದ್ರವನ್ನು ಉತ್ತಮ ಮೂಲ ಸೌಕರ್ಯಗಳ ಹಿನ್ನೆಲೆಯಲ್ಲಿ ಮೇಲ್ದರ್ಜೆಗೇರಿಸಲಾಗಿದೆ. ಇದನ್ನು ಇನ್ಮುಂದೆ ಇಲ್ಲಿ ವಲಯ ಸಂರಕ್ಷಣಾಧಿಕಾರಿಗಳಿಗೂ ತರಬೇತಿ ನೀಡಲಾಗುವುದು. ಒಂಭತ್ತು ತಿಂಗಳ ತರಬೇತಿಗಾಗಿ ಬಂದಿರುವವರಿಗೆ ರಾಜ್ಯದ ನೆಲ, ಜಲ, ಅರಣ್ಯ, ಮುಂತಾದವುಗಳ ಪರಿಚಯಕ್ಕಾಗಿ ಎರಡು ಶೈಕ್ಷಣಿಕ ಪ್ರವಾಸಗಳನ್ನು ಕೂಡಾ ಆಯೋಜಿಸಲಾಗಿರುತ್ತದೆ ಎಂದರು. ತರಬೇತಿ ಪ್ರಶಿಕ್ಷಣಾರ್ಥಿಗಳು ಹೊರತಂದ ಚಿಗುರು ಎಂಬ ಸ್ಮರಣ ಸಂಚಿಕೆಯನ್ನು ಸಚಿವರು ಬಿಡುಗಡೆ ಮಾಡಿದರು.
ಅರಣ್ಯ ಇಲಾಖೆ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಕ ಬಿ.ಜೆ. ಹೊಸಮಠ, ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳಾದ ಜಿ.ಎನ್. ಶ್ರೀಕಂಠಯ್ಯ, ಜಗತರಾಮ್, ಸೀಮಾ ಗರ್ಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶಕುಮಾರ್ ಇದ್ದರು.
ಅರಣ್ಯ ರಕ್ಷಣೆಗೆ ಆದ್ಯತೆ ಮೇರೆಗೆ ಬೇಲಿ
ಕನ್ನಡಪ್ರಭ ವಾರ್ತೆ, ಧಾರವಾಡ, ಅ. 3
ರಾಜ್ಯದಲ್ಲಿ ಸಾಕಷ್ಟು ಅರಣ್ಯ ಸಂಪತ್ತಿದ್ದು, ಮೊದಲು ಅದರ ರಕ್ಷಣೆಗೆ ಸರ್ಕಾರ ಒತ್ತು ನೀಡಲಿದೆ. ಈ ಹಿನ್ನೆಲೆಯಲ್ಲಿ ಮೀಸಲು ಅರಣ್ಯ, ರಾಷ್ಟ್ರೀಯ ಉದ್ಯಾನವನ ಹಾಗೂ ಅಭಯಾರಣ್ಯಗಳಲ್ಲಿ ಮೊದಲಿಗೆ ಆದ್ಯತೆ ಮೇರೆಗೆ ಬೇಲಿ ಹಾಕುವ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಅರಣ್ಯ, ಪರಿಸರ ಇಲಾಖೆ ಸಚಿವ ರಮಾನಾಥ ರೈ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಸಾಕಷ್ಟು ಅರಣ್ಯ ಪ್ರದೇಶ ನಿತ್ಯ ಒತ್ತುವರಿಯಾಗುತ್ತಿದೆ. ಅದು ಇಲಾಖೆಗೆ ಗೊತ್ತಿದ್ದರೂ ರಕ್ಷಿಸಲು ಕಷ್ಟವಾಗುತ್ತಿದೆ.
ಬೇಲಿ ಹಾಕುವ ಕೆಲಸ ಸುದೀರ್ಘವಾದರೂ ಈ ಕೆಲಸದಿಂದ ಅರಣ್ಯ ರಕ್ಷಣೆಯಾಗಲಿದೆ. ಬರೀ ಬೇಲಿ ಹಾಕುವ ಕೆಲಸ ಮಾತ್ರವಲ್ಲದೇ ಅರಣ್ಯ ಭೂಮಿಗೆ ಗುರುತು ಹಾಕುವ ಕಾರ್ಯವನ್ನು ಮಾಡುವ ಯೋಜನೆ ಸರ್ಕಾರದ್ದು ಎಂದರು.
ಅರಣ್ಯ ಹಕ್ಕು ಕಾಯ್ದೆ ಪ್ರಕಾರ ತಲೆತಲಾಂತರದಿಂದ ಅರಣ್ಯದಲ್ಲಿ ಬದುಕು ಕಟ್ಟಿಕೊಂಡವರ ಸ್ಥಳಾಂತರಕ್ಕೆ ಸರ್ಕಾರ ಸಹಾಯ ನೀಡಲಿದೆ. ಇನ್ನು, ರೆಸಾರ್ಟ್ ನಿರ್ಮಿಸಿ ಲಾಭಕ್ಕಾಗಿ ಅರಣ್ಯ ಒತ್ತುವರಿ ಮಾಡಿಕೊಂಡವರ ಮೇಲೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಅರಣ್ಯ ರಕ್ಷಣೆಯೊಂದಿಗೆ ಇಲಾಖೆಯು ಅರಣ್ಯ ಸಂಪತ್ತನ್ನು ಇನ್ನಷ್ಟು ವೃದ್ಧಿಸಲು ಪ್ರೋತ್ಸಾಹ ಯೋಜನೆಗಳನ್ನು ಜಾರಿ ಮಾಡಿದೆ.
ಈ ಮೂಲಕ ಕಡಿಮೆ ದರದಲ್ಲಿ ಅರಣ್ಯ ಸಸಿಗಳನ್ನು ವಿತರಿಸಲಾಗುತ್ತಿದೆ. ಇದಕ್ಕಿಂತ ಹೆಚ್ಚಾಗಿ ಕಾರ್ಪೋರೆಟ್ ಹಾಗೂ ಖಾಸಗಿ ಸಂಸ್ಥೆಗಳಿಗೆ ಸೂಚನೆ ನೀಡಿದ್ದು, ಅವರ ಮೂಲಕ ಅರಣ್ಯ ಪ್ರದೇಶವನ್ನು ಮತ್ತಷ್ಟು ವಿಸ್ತರಿಸುವ ಚಿಂತನೆ ನಡೆದಿದೆ ಎಂದರು.
ಅಕೇಶಿಯಾ ಹಾಗೂ ನೀಲಗಿರಿ ಸಸಿಗಳಿಗೆ ಹೆಚ್ಚು ನೀರಿನಾಂಶ ಅಗತ್ಯವಿದ್ದು, ಅವುಗಳ ಅಗತ್ಯತೆ ಅಷ್ಟಕಷ್ಟೇ. ಆದ್ದರಿಂದ ಈ ಸಸಿಗಳನ್ನೇ ನೆಡುವುದನ್ನು ಪೂರ್ತಿಯಾಗಿ ಕೈ ಬಿಡುವುದರ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ವೈಜ್ಞಾನಿಕವಾಗಿ ಈ ಸಸಿಗಳ ಬಗ್ಗೆ ವಿರೋಧ ವ್ಯಕ್ತವಾಗಿಲ್ಲ. ಆದರೂ ಪರಿಸರದ ದೃಷ್ಟಿಯಿಂದ ಸರ್ಕಾರ ಈ ಎರಡೂ ಸಸಿಗಳನ್ನು ಬೆಳೆಸಲು ಪ್ರೋತ್ಸಾಹ ನೀಡುತ್ತಿಲ್ಲ. ಬಹಳ ಕಡಿಮೆ ಪ್ರಮಾಣದಲ್ಲಿ ಸಸಿಗಳನ್ನು ನೆಡಿಸಲಾಗುತ್ತಿದೆ ಎಂದರು.
ಅರಣ್ಯ ಅತಿಕ್ರಮಣ ಈಗ ಮೋಜಿಗಾಗಿ
ಧಾರವಾಡ: ಈ ಮುಂಚೆ ಹೊಟ್ಟೆಗಾಗಿದ್ದ ಅರಣ್ಯದ ಮೇಲಿನ ಅತಿಕ್ರಮಣ ಪ್ರಸ್ತುತ ಮೋಜಿಗಾಗಿ ಆಗುತ್ತಿರುವುದನ್ನು ತಪ್ಪಿಸಬೇಕಾಗಿದೆ ಎಂದು ಅರಣ್ಯ ಹಾಗೂ ಪರಿಸರ ಸಚಿವ ಬಿ. ರಮಾನಾಥ ರೈ ಹೇಳಿದರು.
ಕೃಷಿ ವಿವಿಯ ಸಭಾಭವನದಲ್ಲಿ ಗುರುವಾರ ಅರಣ್ಯ, ಪರಿಸರ ಇಲಾಖೆಗಳು, ಜಿಲ್ಲಾಡಳಿತದ ಸಹಯೋಗದಲ್ಲಿ ಏರ್ಪಡಿಸಿದ ಲಕ್ಷ ವೃಕ್ಷ, ಪರಿಸರ ಸ್ವಚ್ಚತೆ, ಪ್ಲಾಸ್ಟಿಕ್ ಬಳಕೆ ವಿರೋಧಿ ಆಂದೋಲನ ಹಾಗೂ ವನ್ಯಜೀವಿ ಸಪ್ತಾಹ ಉದ್ಘಾಟಿಸಿದ ಅವರು, ಜೀವ ಜಲವನ್ನು ಶುದ್ಧೀಕರಿಸುವ ಪ್ರಮುಖ ನೈಸರ್ಗಿಕ ಸಂಪತ್ತಾದ ಅರಣ್ಯ ಹಾಗೂ ಪರಿಸರ ಉಳಿಸುವ ಹಾಗೂ ಬೆಳೆಸುವ ಅನಿವಾರ್ಯತೆಯನ್ನು ಇಂದಿನ ಜೀವನಕ್ರಮ ಸೃಷ್ಟಿಸಿದೆ. ಪ್ರಕೃತಿ ಪರಿಸರದ ಉಳಿಯುವಿಕೆಗೆ ಹಾಗೂ ಅದರ ಬೆಳವಣಿಗೆಗೆ ಇಂದು ಲಭ್ಯವಿರುವ ಎಲ್ಲ ತಾಂತ್ರಿಕ ವಿಧಾನ ಹಾಗೂ ಉಪಕರಣಗಳ ಬಳಕೆಗೆ ಹಾಗೂ ಆ ಕುರಿತ ಕಾಳಜಿಗೆ ಮುಂದಾಗಬೇಕಿದೆ ಎಂದರು. ಇಂದು ಹಲವಾರು ಅಪರೂಪ ವನ್ಯಜೀವಿ, ಸಸ್ಯ ಸಂಕುಲ ನಶಿಸಿ ಹೋಗುತ್ತಿದ್ದು, ಅದನ್ನು ತಡೆಯಬೇಕು. ಆ ನಿಟ್ಟಿನಲ್ಲಿ ಇಲಾಖೆಯ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯನ್ನು ಗ್ರಾಮಾಂತರ ಜನರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು. ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ವಿಜಯಕುಮಾರ ಖಡಕಬಾವಿ ಮಾತನಾಡಿದರು. ಟಾಟಾ ಸಮೂಹ ಗುಜರಾತ್ ಎನ್ಆರ್ಇ, ಬಿಪಿಸಿಎಲ್ ಕಂಪನಿಗಳ ಪ್ರತಿನಿಧಿಗಳು ಸಚಿವ ರಮಾನಾಥ ರೈ ಅವರಿಗೆ ತಮ್ಮ ಸಂಸ್ಥೆಗಳಿಂದ ಸಸಿ ಬೆಳೆಸಲು ಒದಗಿಸಲಾದ ರು. 1 ಲಕ್ಷ ಅನುದಾನ ಚೆಕ್ ನೀಡಿದರು. ಕೃಷಿ ಅರಣ್ಯ ಪ್ರೋತ್ಸಾಹದಡಿ 10 ಫಲಾನುಭವಿಗಳಿಗೆ ಸಚಿವರು ಪ್ರೋತ್ಸಾಹ ಧನ ಚೆಕ್ಗಳನ್ನು ವಿತರಿಸಿದರು. ಗ್ರಾಮ ಅರಣ್ಯ ಸಮಿತಿ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ, ಪರಿಸರ ಬೆಳವಣಿಗೆ ಹಾಗೂ ಸ್ವಚ್ಛತೆಗಾಗಿ ಶ್ರಮಿಸಿದ, ವನ್ಯ ಜೀವಿಗಳನ್ನು ಸಂರಕ್ಷಿಸಿದ ಹಾಗೂ ಪರಿಸರ ಜಾಗೃತಿಗೆ ಶ್ರಮಿಸಿದೆ. ಶಂಕರ ಕುಂಬಿ, ಸದಾಶಿವ, ಮುರಳಿಧರ ಬಿಲ್ಲೆ, ಯಲ್ಲಪ್ಪ ಜೋಡಳ್ಳಿ, ಅಸ್ಲಂ ಅಬ್ಬಿಹಾಳ, ಚನ್ನಯ್ಯ ಮುಪ್ಪಿನಮಠ, ಎಂ.ಡಿ. ಲಮಾಣಿ ಅವರುಗಳನ್ನು ಸಚಿವರು ಸನ್ಮಾಸಿದರು. ಶಾಸಕ ವಿನಯ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.
ಅರಣ್ಯ ಸಂರಕ್ಷಣಾಧಿಕಾರಿ ಮನೋಜಕುಮಾರ, ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ ಶಿರೂರ, ವಿ.ಎಂ. ಹಲಗತ್ತಿ, ಶಾಸಕ ಸಿ.ಎಸ್. ಶಿವಳ್ಳಿ, ಶ್ರೀಕಂಠಯ್ಯ, ಬಿ.ಜೆ. ಹೊಸಮಠ, ಜಗತರಾಮ ಇದ್ದರು.