ಪಾಪು ಮನೆ ಅಂಗಳದಲ್ಲಿಯೇ ಪತ್ನಿ ಇಂದುಮತಿ ಅಂತ್ಯಕ್ರಿಯೆ
ಹುಬ್ಬಳ್ಳಿ: ನಾಡೋಜ ಪಾಟೀಲ ಪುಟ್ಟಪ್ಪ ಅವರ ಪತ್ನಿ ಇಂದುಮತಿ ಪುಟ್ಟಪ್ಪ ಪಾಟೀಲ ಅವರ ಅಂತ್ಯಕ್ರಿಯೆ ಗುರುವಾರ ವಿಶ್ವೇಶ್ವರಯ್ಯ ನಗರದಲ್ಲಿರುವ ಅವರ ನಿವಾಸ ಪಾಪು ಪ್ರಪಂಚದ ಅಂಗಳದಲ್ಲಿಯೇ ನಡೆಯಿತು. ಆದರೆ, ಇದಕ್ಕೆ ನೆರೆಹೊರೆಯವರು ವಿರೋಧ ವ್ಯಕ್ತಪಡಿಸಿದ ಪ್ರಸಂಗವೂ ನಡೆಯಿತು.
ಬುಧವಾರ ಬೆಳಗ್ಗೆ ಕಿಮ್ಸ್ನಲ್ಲಿ ನಿಧನರಾದ ಇಂದುಮತಿ ಅವರ ಪಾರ್ಥಿವ ಶರೀರದ ಮೆರವಣಿಗೆ ವಿಜಯನಗರ ಮತ್ತು ವಿಶ್ವೇಶ್ವರಯ್ಯ ನಗರದಲ್ಲಿ ಜರುಗಿತು. ಅಂತ್ಯಕ್ರಿಯೆಯಲ್ಲಿ ಗದುಗಿನ ತೋಂಟದ ಶ್ರೀಗಳು, ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ಡಿ.ಆರ್. ಪಾಟೀಲ, ಮಾಜಿ ಸಂಸದ ಮಂಜುನಾಥ ಕುನ್ನೂರ ಸೇರಿದಂತೆ ನೂರಾರು ಗಣ್ಯರು ಪಾಲ್ಗೊಂಡಿದ್ದರು. ಪಾಟೀಲ ಪುಟ್ಟಪ್ಪನವರ ಬದುಕು-ಬರವಣಿಗೆಗೆ ಸ್ಫೂರ್ತಿಯಾಗಿದ್ದು ಪತ್ನಿ ಇಂದುಮತಿ. ಈ ಸಂಗತಿಯನ್ನು ಪಾಟೀಲ ಪುಟ್ಟಪ್ಪ ಸಭೆ ಸಮಾರಂಭಗಳಲ್ಲಿ ಹತ್ತಾರು ಬ1ಾರಿ ಹೇಳಿದ್ದುಂಟು. ಇಂದುಮತಿಯವರ ಅಗಲಿಕೆ ಪುಟ್ಟಪ್ಪನವರನ್ನು ಬಹುವಾಗಿ ಕಾಡಿದೆ. ಈ ಕಾರಣಕ್ಕೇ ಎನ್ನುವಂತೆ ಇಂದುಮತಿಯವರ ಅಂತ್ಯಸಂಸ್ಕಾರ ಸ್ಮಶಾನದ ಬದಲಾಗಿ ಮನೆಯಂಗಳದಲ್ಲಿಯೇ ನಡೆಯಲಿ ಎಂದು ಪಾಪು ಬಯಸಿದ್ದರು. ಈ ಕಾರಣಕ್ಕಾಗಿ ಮನೆಯಂಗಳದಲ್ಲಿ ಇಂದುಮತಿಯವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ನೆರೆಹೊರೆಯವರಿಂದ ವಿರೋಧ
ಇಂದುಮತಿ ಪಾಟೀಲ ಅವರ ಅಂತ್ಯ ಸಂಸ್ಕಾರವನ್ನು ವಿಶ್ವೇಶ್ವರಯ್ಯ ನಗರದಲ್ಲಿರುವ ತಮ್ಮ ಮನೆ ಆವರಣದಲ್ಲಿ ನೆರವೇರಿಸಿರುವುದಕ್ಕೆ ನೆರೆಹೊರೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತ್ಯಕ್ರಿಯೆ ಸ್ಮಶಾನದಲ್ಲಿ ನೆರವೇರಿಸಬೇಕು. ಮನೆಯಂಗಳದಲ್ಲಿ ಅಂತ್ಯಕ್ರಿಯೆ ಮಾಡಿದ್ದರಿಂದ ತಮಗೆ ತೊಂದರೆಯಾಗಿದೆ. ಅದರಲ್ಲೂ ಮಕ್ಕಳು ಭಯಭೀತರಾಗುವ ಸಾಧ್ಯತೆಯಿದೆ. ಈ ಕಾರಣಕ್ಕೆ ಮನೆಯಂಗಳದಲ್ಲಿ ಅಂತ್ಯಕ್ರಿಯೆ ಮಾಡಿದ್ದು ಸರಿಯಲ್ಲ ಎಂದು ಸ್ಥಳೀಯ ಕೆಲವರು ಅಶೋಕ ನಗರ ಪೊಲೀಸ್ ಠಾಣೆಗೆ, ಮಹಾನಗರ ಪಾಲಿಕೆಗೆ ಕರೆ ಮಾಡಿ ದೂರಿದ್ದಾರೆ. ಏತನ್ಮಧ್ಯೆ ಮನೆಯಂಗಳದಲ್ಲಿ ಇಂದುಮತಿಯವರ ಅಂತ್ಯಕ್ರಿಯೆ ನೆರವೇರಿಸುವ ಹಿನ್ನೆಲೆಯಲ್ಲಿ ಪಾಪು ಕುಟುಂಬ ವರ್ಗ ಗುರುವಾರ ಪಾಲಿಕೆಗೆ ಅನುಮತಿ ಕೇಳಿದೆ. ಮನೆಯಂಗಳದಲ್ಲಿ ಅಂತ್ಯಕ್ರಿಯೆ ನಡೆಸಲು ಪಾಲಿಕೆ ಅನುಮತಿ ನೀಡಿಲ್ಲ, ಈ ಬಗ್ಗೆ ಕಾನೂನಾತ್ಮಕ ಸಾಧ್ಯಾಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ. ಆದರೆ, ಪಾಲಿಕೆಯ ಅನುಮತಿ ಕಾಯದೇ ಅಂತ್ಯಕ್ರಿಯೆ ಮಾಡಲಾಗಿದೆ.
68 ವರ್ಷದ ದಾಂಪತ್ಯ ಜೀವನದ ಪ್ರತೀಕವಾಗಿ ಮತ್ತು ಅವರ ಶಕ್ತಿ ನನ್ನೊಂದಿಗೆ ಇರಲಿ ಎಂದು ಮನೆಯಂಗಳದಲ್ಲಿ ಪತ್ನಿಯ ಅಂತ್ಯ ಸಂಸ್ಕಾರ ನೆರವೇರಿಸಿದ್ದೇನೆ.
-ನಾಡೋಜ ಡಾ. ಪಾಟೀಲ ಪುಟ್ಟಪ್ಪ