ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮೊರಾರ್ಜಿ ವಸತಿ ಶಾಲೆಗೆ ಅಗತ್ಯ ಸೌಕರ್ಯ

Vishwanath S
Updated On : 4 Oct 2013, 10:54 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 3
ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ-2 ಇರುವ ನಗರದ ನಿಲಿಜನ್ ರಸ್ತೆಯ ಶ್ರೀನಾಥ ಕಾಂಪ್ಲೆಕ್ಸ್‌ನ 4 ಮತ್ತು 5ನೇ ಮಹಡಿಯಲ್ಲಿ ಅಗತ್ಯ ಸೌಲಭ್ಯ ಒದಗಿಸುವ ಕಾರ್ಯಗಳು ಪ್ರಾರಂಭಗೊಂಡಿವೆ.
ಮಹಡಿ ಮೇಲಿನ ಮಾಳಿಗೆಯಲ್ಲಿ ನಿರ್ಮಿಸಿರುವ ಕಟಂಜರಿ ಎತ್ತರವನ್ನು ಮತ್ತಷ್ಟು ಏರಿಸಲಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿ ಕಾಯ್ದುಕೊಳ್ಳಲಾಗಿದೆ. ಸದ್ಯ 18 ಸ್ನಾನಗೃಹಗಳಿದ್ದು, ಹೆಚ್ಚುವರಿಯಾಗಿ ಶೌಚಾಲಯಗಳನ್ನೂ ನಿರ್ಮಿಸಲಾಗುತ್ತಿದೆ.
4 ಮತ್ತು 5ನೇ ಮಹಡಿಯಲ್ಲಿನ ಈ ಶಾಲೆಯ ವಿದ್ಯಾರ್ಥಿಗಳಿಗೆ ತರಗತಿ ಕೋಣೆಗಳನ್ನು ವಿಭಾಗಿಸುವ ಕಾರ್ಯ ನಡೆದಿದ್ದು, ವಿದ್ಯಾರ್ಥಿಗಳು ಊಟ ಮಾಡುವ ಹಾಗೂ ಮಲಗುವ ಕೋಣೆಗಳನ್ನೂ ವಿಭಾಗಿಸಲಾಗುತ್ತಿದೆ. ಇದರಿಂದಾಗಿ ತರಗತಿಗಳು ಪ್ರತ್ಯೇಕ ಕೋಣೆಯಲ್ಲಿ ನಡೆಯಲು ಅನುಕೂಲ ಒದಗಿಸಿದಂತಾಗಿದೆ.
ಸ್ನಾನಗೃಹದಲ್ಲಿನ ಕಿಟಕಿಗಳ ಒಡೆದಿದ್ದ ಗಾಜುಗಳನ್ನು ಮರುಜೋಡಿಸಲಾಗಿದೆ. ನೀರು ಶುದ್ಧೀಕರಣದ ಮೂರು ಉಪಕರಣಗಳನ್ನು ಅಳವಡಿಸಲಾಗಿದ್ದು, ವಿದ್ಯಾರ್ಥಿಗಳ ಸಾಮಗ್ರಿಗಳಿರುವ ಟ್ರಂಕ್‌ಗಳನ್ನು ಇಡುವುದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ. ಕಟ್ಟಡದಲ್ಲಿರುವ ಮತ್ತೊಂದು ಲಿಫ್ಟ್‌ನ್ನು ದುರಸ್ತಿಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಒಟ್ಟಿನಲ್ಲಿ ಶ್ರೀನಾಥ ಕಾಂಪ್ಲೆಕ್ಸ್ ಕಟ್ಟಡದಲ್ಲಿದ್ದ ಕೊರತೆಗಳನ್ನು ನಿವಾರಿಸಲಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ. 'ಕನ್ನಡಪ್ರಭ' ಅ. 2ರಂದು ಪ್ರಕಟಿಸಿದ ವಿಶೇಷ ವರದಿಗೆ ಸ್ಪಂದಿಸಿರುವ ಕಟ್ಟಡ ಮಾಲೀಕರು, ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಲು ಬೇಕಿರುವ ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಂಡಿದ್ದಾರೆ. ವಾಹನಗಳಿಂದಾಗುವ ಶಬ್ದ ಮಾಲಿನ್ಯ ನಿಯಂತ್ರಣಕ್ಕಾಗಿ ಎಲ್ಲ ಕಿಟಕಿಗಳಿಗೆ ಗಾಜುಗಳನ್ನು ಜೋಡಿಸಲಾಗಿದೆ. ಸ್ವಚ್ಛತೆಗೂ ಆದ್ಯತೆ ನೀಡಲಾಗಿದೆ. ಸಮರ್ಪಕ ಕುಡಿಯುವ ನೀರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಈಗಾಗಲೇ ಕಟ್ಟಡದಾದ್ಯಂತ ವಿದ್ಯುತ್ ಬಲ್ಬ್‌ಗಳಿದ್ದು, ಹೆಚ್ಚಿನ ವಿದ್ಯುತ್ ಬಲ್ಬ್‌ಗಳನ್ನು ಜೋಡಿಸಲಾಗಿದೆ. ಇದರಿಂದಾಗಿ 4 ಮತ್ತು 5ನೇ ಮಳಿಗೆಯಲ್ಲಿ ಮೊದಲಿಗಿಂತಲೂ ಹೆಚ್ಚಿನ ಬೆಳಕಿನ ವ್ಯವಸ್ಥೆ ಒದಗಿಸಿದಂತಾಗಿದೆ. ಇದರೊಂದಿಗೆ ದುರಸ್ತಿಯಾಗಿರುವ ಒಂದು ಲಿಫ್ಟ್‌ನ್ನು ಇಲ್ಲಿಯ ವಿದ್ಯಾರ್ಥಿಗಳಿಗಾಗಿಯೇ ಮೀಸಲಿಡಲು ಕ್ರಮ ತೆಗೆದುಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement