ಗಾಯನ ನಿಲ್ಲಿಸಿದ ಪಂ. ಪಂಚಾಕ್ಷರಿಸ್ವಾಮಿ
ಧಾರವಾಡ: ಸೇರಿದ್ದ ಅಪಾರ ಜನಸ್ತೋಮದ ಎದುರು ಇವರು ಹಾಡಲಾರಂಭಿಸಿದರೆ ಪಂ. ಮಲ್ಲಿಕಾರ್ಜುನ ಮನ್ಸೂರ್ ಅವರೇ ಹಾಡುತ್ತಿದ್ದಾರೆಯೇ ಎನ್ನುವ ಭಾವ ಮೂಡುತ್ತಿತ್ತು. ತಮ್ಮ ಗುರುಗಳಾದ ಮನ್ಸೂರ್ ಅವರ ಪಡಿಯಚ್ಚಿನಂತೆ ಅವರ ವಿದ್ವತ್ತು ಎಲ್ಲ ಸಂಗೀತ ಕಚೇರಿಗಳಲ್ಲಿಯೂ ಸಹಜವಾಗಿ ಆಲಾಪನಗೊಳ್ಳುತ್ತಿತ್ತು.
ಶುಕ್ರವಾರ ಸಂಜೆ ನಿಧನರಾದ ಹಿಂದೂಸ್ತಾನಿ ಸಂಗೀತಗಾರ ಪಂ. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರು ಸಂಗೀತದಲ್ಲಿ ಸಾಧಿಸಿದ ಹಿರಿಮೆಗೆ ಇದು ನಿದರ್ಶನ.
ಜೈಪುರ ಘರಾಣೆಯ ಪ್ರಮುಖ ಗಾಯಕರಾಗಿ ಸಂಗೀತ ಲೋಕದಲ್ಲಿ ವಿಹರಿಸಿದ್ದ ಪಂಚಾಕ್ಷರಿಸ್ವಾಮಿ, ಜೀವನದುದ್ದಕ್ಕೂ ಸಂಗೀತವನ್ನೇ ಉಂಡುಟ್ಟು, ಉಸಿರಾಡಿದವರು. ಅಕ್ಟೋಬರ್ 12, 1927ರಂದು ಸಂತ ಶರೀಫರ ಜನ್ಮಸ್ಥಳ ಶಿಶುನಾಳದಲ್ಲಿ ಜನಿಸಿದ ಇವರು, ತಂದೆಯ ಊರಾದ ಕುಂದಗೋಳ ತಾಲೂಕಿನ ಮತ್ತಿಗಟ್ಟಿಯಲ್ಲಿ ಬಾಲ್ಯ ಕಳೆದರು. ತಂದೆ ಚನ್ನಬಸವಯ್ಯ ಅವರ ದೊಡ್ಡಾಟ ಸಣ್ಣಾಟದ ಪದ, ಗೀಗೀ ಪದ, ತತ್ವ ಪದಗಳನ್ನು ಕೇಳುತ್ತ ಬೆಳೆದರು. ಸಹಜವಾಗಿ ಸಂಗೀತದತ್ತ ಆಕರ್ಷಿತರಾಗಿದ್ದರು.
ನಾಯಕನಾಗಿಯೂ ಮಿಂಚಿದ ಗಾಯಕ: ಅವರ ಆಸಕ್ತಿಗೆ ಚಿಕ್ಕಪ್ಪ ನೀರೆರೆದು ಪೋಷಿಸಿದರು. ಗಾನಯೋಗಿ ಪಂ. ಪಂಚಾಕ್ಷರ ಗವಾಯಿಗಳ ಬಳಿ ಸಂಗೀತಕ್ಕೆ ಕಳುಹಿಸಿದರು. ಗವಾಯಿಗಳು ಲಿಂಗೈಕ್ಯರಾದ ನಂತರ ಗುರುಗಳ ಕುಮಾರೇಶ್ವರ ಕೃಪಾಪೋಷಿತ ನಾಟ್ಯ ಸಂಘದಲ್ಲಿ ರಂಗಭೂಮಿ ನಟ ಹಾಗೂ ಗಾಯಕರಾಗಿ ಭೂಮಿಕೆ ನಿರ್ವಹಿಸಿದರು.
ಸುಶ್ರಾವ್ಯ ಕಂಠದಿಂದ ಶ್ರೋತೃಗಳ ಮನಸೂರೆಗೊಳ್ಳುತ್ತ ಇವರು ಪ್ರಬುದ್ಧ ಗಾಯಕರಾದರು. '376 ಪ್ರಯೋಗಗಳನ್ನು ಕಂಡ 'ಹೇಮರೆಡ್ಡಿ ಮಲ್ಲಮ್ಮ' ನಾಟಕದಲ್ಲಿ ಮಲ್ಲಿಕಾರ್ಜುನನ ಪಾತ್ರ ನಿರ್ವಹಿಸಿದ ನನ್ನ ನಟನೆ ಹಾಗೂ ಗಾಯನವನ್ನೂ ಆಸ್ವಾದಿಸಲು ಗದಗ ಜಿಲ್ಲೆಯ ಬೆಟಗೇರಿಯ ಗಾಣಿಗೇರ ಬಸಪ್ಪ ಎಂಬುವರು ತಪ್ಪದೇ ಬರುತ್ತಿದ್ದರು' ಎಂದು ಸ್ವತಃ ಪಂಚಾಕ್ಷರಿಸ್ವಾಮಿ ಅವರೇ ಹೇಳುತ್ತಿದ್ದರು. ಇದರಲ್ಲಿ ಯಾವುದೇ ಉತ್ಪೇಕ್ಷೆಯೂ ಇರಲಿಲ್ಲ.
ಪಂಚಾಕ್ಷರಿ ಸ್ವಾಮಿಯ ನಟನೆ ಹಾಗೂ ಹಾಡು ಕೇಳಿದ ಸುಪ್ರಿಸಿದ್ಧ ಗಾಯಕ ಪಂ. ಮಲ್ಲಿಕಾರ್ಜುನ ಮನ್ಸೂರ್ ಇವರನ್ನು ತಮ್ಮ ಶಿಷ್ಯರನ್ನಾಗಿ ಮಾಡಿಕೊಂಡರು. ಅಲ್ಲಿಂದ ಮತ್ತಿಗಟ್ಟಿ ಅವರಿಗೆ ಧಾರವಾಡದ ನಂಟು ಗಾಢವಾಗಿ ಬೆಳೆಯಿತು. ಕರ್ನಾಟಕ ವಿವಿಯ ಸಂಗೀತ ವಿಭಾಗದಲ್ಲಿ ಉಪನ್ಯಾಸಕರಾಗಿ ಸುಮಾರು 12 ವರ್ಷ ಸೇವೆ ಸಲ್ಲಿಸಿದ್ದರು. 1953ರಿಂದ ಆಕಾಶವಾಣಿ 'ಎ' ಶ್ರೇಣಿಯ ಕಲಾವಿದರಾಗಿದ್ದ ಇವರು, ದೇಶ-ವಿದೇಶಗಳಲ್ಲಿ ತಮ್ಮ ಗಾಯನ ಪ್ರಸ್ತುತ ಪಡಿಸಿದ್ದಾರೆ. ರಾಜ್ಯೋತ್ಸವ, ಸಂಗೀತ ಅಕಾಡೆಮಿಯಂಥ ಹತ್ತಾರು ಪ್ರಶಸ್ತಿಗಳು ಇವರಿಗೆ ಒಲಿದಿವೆ.
ಇಳಿ ವಯಸ್ಸಿನಲ್ಲಿಯೂ ಸಂಗೀತ ಶಾರದೆಯ ಆರಾಧನೆಯನ್ನು ಕೈ ಬಿಡದ ಪಂಚಾಕ್ಷರಿಸ್ವಾಮಿ ಅವರ ಸಾಧನೆ ಅಮೋಘವಾದದ್ದು.
ಗುರುಗಳಾದ ಪಂಚಾಕ್ಷರಿಸ್ವಾಮಿ ನಿಧನದಿಂದ ಹಳೆತಲೆಮಾರಿನ ಮತ್ತೊಬ್ಬ ಸಂಗೀತಗಾರನ ಕೊರತೆ ಉಂಟಾಗಿದೆ. ಅವರೊಬ್ಬ ವಿದ್ಯಾವಂತರು, ಅವರೊಂದಿಗೆ ಗುರುಬಂಧವಿತ್ತು. ಕಿರಾಣಾ ಘರಾಣಾ, ಗ್ವಾಲಿಯರ್ ಹಾಗೂ ಜೈಪುರ ಘರಾಣಾದಲ್ಲೂ ಪರಿಣಿತರಾಗಿದ್ದರು. ಇನ್ನಷ್ಟು ವರ್ಷ ಬದುಕಿದ್ದರೆ ಯುವ ಪೀಳಿಗೆಗೆ ಇನ್ನಷ್ಟು ಮಾರ್ಗದರ್ಶನ ಸಿಗುತ್ತಿತ್ತು ಎನಿಸುತ್ತಿದೆ ಎಂದು ಪಂ. ವೆಂಕಟೇಶ ಕುಮಾರ ಈ ಸಂದರ್ಭದಲ್ಲಿ ನೋವು ಹಂಚಿಕೊಂಡರು.
ಬಸವರಾಜ ಹಿರೇಮಠ