ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಗಾಯನ ನಿಲ್ಲಿಸಿದ ಪಂ. ಪಂಚಾಕ್ಷರಿಸ್ವಾಮಿ

Vishwanath S
Updated On : 5 Oct 2013, 11:39 am

ಕನ್ನಡಪ್ರಭ ವಾರ್ತೆ, ಧಾರವಾಡ, ಅ. 4
ಸೇರಿದ್ದ ಅಪಾರ ಜನಸ್ತೋಮದ ಎದುರು ಇವರು ಹಾಡಲಾರಂಭಿಸಿದರೆ ಪಂ. ಮಲ್ಲಿಕಾರ್ಜುನ ಮನ್ಸೂರ ಅವರೇ ಹಾಡುತ್ತಿದ್ದಾರೆಯೇ ಎನ್ನುವ ಭಾವ ಮೂಡುತ್ತಿತ್ತು. ತಮ್ಮ ಗುರುಗಳಾದ ಮನ್ಸೂರ ಅವರ ಪಡಿಯಚ್ಚಿನಂತೆ ಅವರ ವಿದ್ವತ್ತು ಎಲ್ಲ ಸಂಗೀತ ಕಚೇರಿಗಳಲ್ಲಿ ಸಹಜವಾಗಿ ಆಲಾಪನಗೊಳ್ಳುತ್ತಿತ್ತು.
ಶುಕ್ರವಾರ ಸಂಜೆ ನಿಧನರಾದ ಹಿಂದೂಸ್ತಾನಿ ಸಂಗೀತಗಾರ ಪಂ. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರು ಸಂಗೀತದಲ್ಲಿ ಸಾಧಿಸಿದ ಹಿರಿಮೆಗೆ ಇದು ನಿದರ್ಶನ.
ಜೈಪುರ ಘರಾಣೆಯ ಪ್ರಮುಖ ಗಾಯಕರಾಗಿ ಸಂಗೀತ ಲೋಕದಲ್ಲಿ ವಿಹರಿಸಿದ್ದ ಪಂಚಾಕ್ಷರಿಸ್ವಾಮಿ, ಜೀವನದುದ್ದಕ್ಕೂ ಸಂಗೀತವನ್ನೇ ಉಂಡುಟ್ಟು, ಉಸಿರಾಡಿದವರು. ಅಕ್ಟೋಬರ್ 12, 1927ರಂದು ಸಂತ ಶರೀಫರ ಜನ್ಮಸ್ಥಳ ಶಿಶುನಾಳದಲ್ಲಿ ಜನಿಸಿದ ಇವರು, ತಂದೆಯ ಊರಾದ ಕುಂದಗೋಳ ತಾಲೂಕಿನ ಮತ್ತಿಗಟ್ಟಿಯಲ್ಲಿ ಬಾಲ್ಯ ಕಳೆದರು. ತಂದೆ ಚನ್ನಬಸವಯ್ಯ ಅವರ ದೊಡ್ಡಾಟ ಸಣ್ಣಾಟದ ಪದ, ಗೀಗೀ ಪದ, ತತ್ವ ಪದಗಳನ್ನು ಕೇಳುತ್ತ ಬೆಳೆದರು. ಸಹಜವಾಗಿ ಸಂಗೀತದತ್ತ ಆಕರ್ಷಿತರಾಗಿದ್ದರು.
ಅವರ ಆಸಕ್ತಿಗೆ ಚಿಕ್ಕಪ್ಪ ನೀರೆರೆದು ಪೋಷಿಸಿದರು. ಗಾನಯೋಗಿ ಪಂ. ಪಂಚಾಕ್ಷರ ಗವಾಯಿಗಳ ಬಳಿ ಸಂಗೀತಕ್ಕೆ ಕಳುಹಿಸಿದರು. ಗವಾಯಿಗಳು ಲಿಂಗೈಕ್ಯರಾದ ನಂತರ ಗುರುಗಳ ಕುಮಾರೇಶ್ವರ ಕೃಪಾಪೋಷಿತ ನಾಟ್ಯ ಸಂಘದಲ್ಲಿ ರಂಗಭೂಮಿ ನಟ ಹಾಗೂ ಗಾಯಕರಾಗಿ ಭೂಮಿಕೆ ನಿರ್ವಹಿಸಿದರು.
ಸುಶ್ರಾವ್ಯ ಕಂಠದಿಂದ ಶ್ರೋತೃಗಳ ಮನಸೂರೆಗೊಳ್ಳುತ್ತ ಇವರು ಪ್ರಬುದ್ಧ ಗಾಯಕರಾದರು. 376 ಪ್ರಯೋಗ ಕಂಡ ಹೇಮರೆಡ್ಡಿ ಮಲ್ಲಮ್ಮ ನಾಟಕದಲ್ಲಿ ಮಲ್ಲಿಕಾರ್ಜುನ ಪಾತ್ರ ನಿರ್ವಹಿಸಿದ ನನ್ನ ನಟನೆ ಹಾಗೂ ಗಾಯನವನ್ನೂ ಆಸ್ವಾದಿಸಲು ಗದಗ ಜಿಲ್ಲೆಯ ಬೆಟಗೇರಿಯ ಗಾಣಿಗೇರ ಬಸಪ್ಪ ಎಂಬುವರು ತಪ್ಪದೇ ಬರುತ್ತಿದ್ದರು ಎಂದು ಸ್ವತಃ ಪಂಚಾಕ್ಷರಿಸ್ವಾಮಿ ಅವರೇ ಹೇಳುತ್ತಿರುವುದರಲ್ಲಿ ಯಾವುದೇ ಉತ್ಪೇಕ್ಷೆ ಇರಲಿಲ್ಲ.
ಪಂಚಾಕ್ಷರಿ ಸ್ವಾಮಿಯ ನಟನೆ ಹಾಗೂ ಹಾಡು ಕೇಳಿದ ಸುಪ್ರಿಸಿದ್ಧ ಗಾಯಕ ಪಂ. ಮಲ್ಲಿಕಾರ್ಜುನ ಮನ್ನೂರ ಅವರು ತಮ್ಮ ಶಿಷ್ಯರನ್ನಾಗಿ ಮಾಡಿಕೊಂಡರು. ಅಲ್ಲಿಂದ ಮತ್ತಿಗಟ್ಟಿ ಅವರಿಗೆ ಧಾರವಾಡದ ನಂಟು ಗಾಢವಾಗಿ ಬೆಳೆಯಿತು. ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ಉಪನ್ಯಾಸಕರಾಗಿ ಸುಮಾರು 12 ವರ್ಷ ಸೇವೆ ಸಲ್ಲಿಸಿದ್ದರು. 1953ರಿಂದ ಆಕಾಶವಾಣಿ ಎ ಶ್ರೇಣಿಯ ಕಲಾವಿದರಾಗಿದ್ದ ಇವರು, ದೇಶ-ವಿದೇಶಗಳಲ್ಲಿ ತಮ್ಮ ಗಾಯನ ಪ್ರಸ್ತುತ ಪಡಿಸಿದ್ದಾರೆ. ರಾಜ್ಯೋತ್ಸವ, ಸಂಗೀತ ಅಕಾಡೆಮಿ ಅಂತಹ ಹತ್ತಾರು ಪ್ರಶಸ್ತಿಗಳು ಇವರಿಗೆ ಒಲಿದಿವೆ.
ಇಳಿ ವಯಸ್ಸಿನಲ್ಲೂ ಸಂಗೀತ ಶಾರದೆಯ ಆರಾಧನೆಯನ್ನು ಕೈ ಬಿಡದ ಪಂಚಾಕ್ಷರಿಸ್ವಾಮಿ ಅವರ ಸಾಧನೆ ಅಮೋಘವಾದದ್ದು. ಕಳೆದ ಗುರುವಾರವಷ್ಟೇ ಶಿಷ್ಯ ಬಳಗ ಅವರನ್ನು ಅಭಿನಂದಿಸಿ ಧನ್ಯತೆ ಪಡೆದುಕೊಂಡಿತ್ತು. ಮರುದಿನವೇ ತಮ್ಮ ನೆಚ್ಚಿನ ಗುರುಗಳ ಅಗಲಿಕೆ ಎಲ್ಲರಿಗಿಂತ ಹೆಚ್ಚಾಗಿ ಶಿಷ್ಯರಿಗೆ ಅನಾಥ ಪ್ರಜ್ಞೆ ತಂದಿದೆ.
ಗುರುಗಳಾದ ಪಂಚಾಕ್ಷರಿಸ್ವಾಮಿ ನಿಧನದಿಂದ ಹಳೆತಲೆಮಾರಿನ ಮತ್ತೊಬ್ಬ ಸಂಗೀತಗಾರನ ಕೊರತೆ ಉಂಟಾಗಿದೆ. ಅವರೊಬ್ಬ ವಿದ್ಯಾವಂತರು, ಅವರೊಂದಿಗೆ ಗುರುಬಂಧವಿತ್ತು. ಕಿರಾಣಾ ಘರಾಣಾ, ಗ್ವಾಲಿಯರ್ ಹಾಗೂ ಜೈಪುರ ಘರಾಣಾದಲ್ಲೂ ಪರಿಣಿತರಾಗಿದ್ದರು. ಇನ್ನಷ್ಟು ವರ್ಷ ಬದುಕಿದ್ದರೆ ಯುವ ಪೀಳಿಗೆಗೆ ಇನ್ನಷ್ಟು ಮಾರ್ಗದರ್ಶನ ಸಿಗುತ್ತಿತ್ತು ಎನಿಸುತ್ತಿದೆ ಎಂದು ಪಂ. ವೆಂಕಟೇಶ ಕುಮಾರ ಈ ಸಂದರ್ಭದಲ್ಲಿ ನೋವು ಹಂಚಿಕೊಂಡರು.
ಇಂದು ಬೆಳಗ್ಗೆ 10.30ರ ವರೆಗೂ ಅಂತಿಮ ದರ್ಶನಕ್ಕೆ ಅವಕಾಶ
ಧಾರವಾಡ: ಖ್ಯಾತ ಹಿಂದೂಸ್ತಾನಿ ಗಾಯಕ ಪಂ. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ನಿಧನಕ್ಕೆ ಧಾರವಾಡದ ಸಂಗೀತ, ಸಾಹಿತ್ಯ ಹಾಗೂ ರಾಜಕೀಯ ವಲಯ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಅಪಾರ ಜನರನ್ನು ಸಂಗೀತದಿಂದ ಮಂತ್ರಮುಗ್ಧಗೊಳಿಸಿದ್ದ ಪಂಚಾಕ್ಷರಿಸ್ವಾಮಿ ಪಾರ್ಥಿವ ಶರೀರವನ್ನು ಶನಿವಾರ ಬೆಳಗ್ಗೆ 10.30ರ ವರೆಗೆ ಅವರ ಚನ್ನಬಸವೇಶ್ವರದ ಸ್ವಗೃಹದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ತದನಂತರ ಹುಟ್ಟೂರು ಕುಂದಗೋಳ ತಾಲೂಕಿನ ಮತ್ತಿಗಟ್ಟಿಯಲ್ಲಿ ವಿಧಿ-ವಿಧಾನದ ಪ್ರಕಾರ ಅಂತ್ಯಸಂಸ್ಕಾರ ಮಾಡಲಾಗುವುದು.
ಸಂತಾಪ: ಸಂಗೀತಗಾರರಾದ ಪಂ. ವೆಂಕಟೇಶ ಕುಮಾರ, ಡಿ. ಕುಮಾರದಾಸ, ಕೈವಲ್ಯ ಕುಮಾರ, ಮೃತ್ಯುಂಜಯ ಶೆಟ್ಟರ್, ಅಲ್ಲಮಪ್ರಭು ಕಡಕೋಳ, ರಾಚಯ್ಯ ಹಿರೇಮಠ, ಪರಶುರಾಮ ಕಟ್ಟಿಸಂಗಾವಿ, ತಬಲಾವಾದಕ ರಘುನಾಥ ನಾಕೋಡ, ಸಂಸದ ಪ್ರಹ್ಲಾದ ಜೋಶಿ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಶಾಸಕರಾದ ಅರವಿಂದ ಬೆಲ್ಲದ, ವಿನಯ ಕುಲಕರ್ಣಿ, ಮೃತ್ಯುಂಜಯ ಅಗಡಿ, ಪಾಲಿಕೆ ಸದಸ್ಯ ಶಿವು ಹಿರೇಮಠ, ವಿಜಯಾನಂದ ಶೆಟ್ಟಿ, ಶಂಕರ ಕುಂಬಿ, ಅನಿಲ ದೇಸಾಯಿ, ಎಂ.ಎಫ್. ಹಿರೇಮಠ, ವಿ.ಎಸ್. ಅರಳೆಲಿಮಠ, ಬಿ.ಕೆ. ಹಿರೇಮಠ, ಪ್ರಕಾಶ ಗೋಡಬೋಲೆ, ವೀರಣ್ಣ ಹೂಗಾರ, ವೀರೇಶ ಅಂಚಟಗೇರಿ, ಬಸವರಾಜ ಬೆಣ್ಣಿ, ಕಲಂದರ ಮುಲ್ಲಾ ಮುಂತಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮಹಾನ್ ಕಲಾವಿದ ಪಂಚಾಕ್ಷರಿಸ್ವಾಮಿ ಸಭ್ಯ, ಸಜ್ಜನಿಕೆ ವ್ಯಕ್ತಿ. ಪ್ರಸ್ತುತ ನಾನು ಅಧ್ಯಕ್ಷನಿರುವ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ ರಮಣಶ್ರೀ ಶರಣ ಪ್ರಶಸ್ತಿ ನೀಡಲಾಗಿದೆ. ಅವರು ನಿಧನರಾಗಿದ್ದು ದುಃಖದ ಸಂಗತಿ. ಅವರ ನೆನಪು ಸದಾ ಇರುವಂತೆ ಹುಟ್ಟೂರು ಮತ್ತಿಗಟ್ಟಿಯಲ್ಲಿ ಸ್ಮಾರಕ ಹಾಗೂ ಪ್ರತಿ ವರ್ಷ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ ಹಾಕಬೇಕಿದೆ.
- ಗೋ. ರು. ಚನ್ನಬಸಪ್ಪ


-ಬಸವರಾಜ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement