ಬಯಲಾಯ್ತು ಶಿರಸಿ ಸರಸ ಅಸಲಿ ಬಣ್ಣ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 4
ಇಬ್ಬರ ಜಗಳ ಮೂರನೆಯವನಿಗೆ ಲಾಭ ಎನ್ನುವ ಮಾತಿದೆ. ಆದರೆ, ಈ ಪ್ರಕರಣದಲ್ಲಿ ಆಗಿದ್ದೇ ಬೇರೆ. ಇಬ್ಬರ ಜಗಳದಲ್ಲಿ ಮೂರನೇ ವ್ಯಕ್ತಿಯಾಗಿದ್ದ ಬಡ ಹೆಣ್ಣಿನ ಜೀವನ ಬರ್ಬಾದ್ ಆಗಿದೆ. ಕಿತ್ತು ತಿನ್ನುವ ಬಡತನದಿಂದ ಅನೈತಿಕತೆ ಕೂಪದಲ್ಲಿ ಬಿದ್ದ ಆ ಹೆಣ್ಣಿನ ಬದುಕನ್ನು ಆರು ಜನ ಕೀಚಕರು ಹಾಳು ಮಾಡಿದ್ದು, ಪೊಲೀಸರ ಕಾರ್ಯತತ್ಪರತೆಯಿಂದ ತಪ್ಪೆಸಗಿದ ಖದೀಮರು ಇದೀಗ ಕಂಬಿ ಎಣಿಸುತ್ತಿದ್ದಾರೆ.
ಹುಬ್ಬಳ್ಳಿಯ ಹೊಸೂರು ವೃತ್ತದ ಬಳಿ ಇರುವ ಮಂಗಳೂರು ಲಾಡ್ಡ್ನಲ್ಲಿ ವ್ಯಕ್ತಿಯೋರ್ವ ಮಹಿಳೆಯೊಂದಿಗೆ ಅನೈತಿಕತೆ ನಡೆಸಿದ ದೃಶ್ಯ ಹುಬ್ಬಳ್ಳಿಯ ಪಡ್ಡೆ ಹುಡುಗರ ಮೊಬೈಲ್ನಲ್ಲಿ ಕೆಲ ತಿಂಗಳ ಹಿಂದೆ ಹರಿದಾಡುತ್ತಿತ್ತು. ಈ ಅಶ್ಲೀಲ ಚಿತ್ರಕ್ಕೆ 'ಹುಬ್ಬಳ್ಳಿಯಲ್ಲಿ ಶಿರಸಿ ಸರಸ' ಎನ್ನುವ ಶಿರೋನಾಮೆ ನೀಡಲಾಗಿತ್ತು. ಸ್ಥಳೀಯ ಪುರುಷ ಹಾಗೂ ಮಹಿಳೆ ಈ ಕೃತ್ಯದಲ್ಲಿ ತೊಡಗಿದ್ದಾರೆಂಬ ಸುದ್ದಿಯಿಂದಾಗಿ ಸಹಜವಾಗಿ ಈ ಅಶ್ಲೀಲ ಚಿತ್ರ ಎಲ್ಲರಲ್ಲೂ ಕುತೂಹಲ ಕೆರಳಿಸಿತ್ತು. ಹುಬ್ಬಳ್ಳಿಯಲ್ಲಿಯೇ ವಿಡಿಯೋ ನಡೆದಿದ್ದರಿಂದ ಪೊಲೀಸರು ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಕೈಗೊಂಡಿದ್ದರು. ತನಿಖೆಯಿಂದ ಆರೋಪಿತರು ಪೊಲೀಸರ ಬಲೆಗೆ ಬಿದ್ದಿರುವುದು ಸಮಾಧಾನ ತರಿಸಿದ್ದರೂ ಬಡ ಮಹಿಳೆ ಊರು ಬಿಡುವಂತಾಗಿದೆ.
ದೋಸ್ತ್ ದೋಸ್ತ್ ನಾ ರಹಾ: ಅಂದ ಹಾಗೆ, ಇದು ಬರೋಬ್ಬರಿ 5 ವರ್ಷಗಳ ಹಿಂದಿನ ಪ್ರಕರಣ. ಈ ಪಾಪ ಕೃತ್ಯದ ಕಥೆ ಶುರುವಾಗುವುದು ಹುಬ್ಬಳ್ಳಿಯ ಪ್ರಭಾಕರ ಪೂಜಾರಿ ಹಾಗೂ ಷಣ್ಮುಖ ಲಮಾಣಿ ಎಂಬಿಬ್ಬರು ವ್ಯಕ್ತಿಗಳಿಂದ. ಇವರಿಬ್ಬರ ನಡುವೆ ಗಳಸ್ಯ ಕಂಠಸ್ಯ ಗೆಳೆತನ. ಇಬ್ಬರೂ ಸೇರಿಕೊಂಡು ಉಪಜೀವನಕ್ಕೆ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದ ಬಳಿ ಆಟೋ ಗ್ಯಾರೇಜ್ನ್ನು ಆರಂಭಿಸುತ್ತಾರೆ. ಗ್ಯಾರೇಜ್ ಆರಂಭಿಸಲು ಷಣ್ಮುಖ ಲಮಾಣಿ ರು. 90 ಸಾವಿರ ಬಂಡವಾಳ ಹೂಡುತ್ತಾನೆ. ಸುಮಾರು ಒಂದು ವರ್ಷ ಕಾಲ ಗ್ಯಾರೇಜ್ ಉತ್ತಮವಾಗಿಯೇ ನಡೆಯುತ್ತದೆ. ಈ ಮಧ್ಯೆ ಷಣ್ಮುಖನಿಗೆ ಅಪಘಾತವಾಗಿ ಆತ ಗ್ಯಾರೇಜ್ ಕೆಲಸಕ್ಕೆ ಬರುವುದು ನಿಲ್ಲಿಸುತ್ತಾನೆ. ಗ್ಯಾರೇಜ್ ಅಭಿವೃದ್ಧಿ ಪಡಿಸಲು ಷಣ್ಮುಖ ಪುನಃ ರು. 70 ಸಾವಿರ ಪ್ರಭಾಕರನಿಗೆ ನೀಡುತ್ತಾನೆ. ಇದಾದ ಆರು ತಿಂಗಳ ಬಳಿಕ ತಾನು ನೀಡಿದ ಒಂದೂವರೆ ಲಕ್ಷ ರುಪಾಯಿ ಮರಳಿಸುವಂತೆ ಪ್ರಭಾಕರನಿಗೆ ಷಣ್ಮುಖ ಗಂಟು ಬೀಳುತ್ತಾನೆ. ಆದರೆ, ಸದ್ಯ ತನ್ನಲ್ಲಿ ಹಣವಿಲ್ಲವೆಂದು ಪ್ರಭಾಕರ ಹಣ ಮರಳಿಸಲು ತಿರಸ್ಕರಿಸಿದ್ದರಿಂದ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗುತ್ತದೆ. ಪ್ರಭಾಕರ ಮಾಡುವ ತಪ್ಪಿಗಾಗಿ ಷಣ್ಮುಖ ಹೊಂಚು ಹಾಕುತ್ತಿರುತ್ತಾನೆ.
ಲಾಡ್ಜ್ನೊಳಕ್ಕೆ ಹೋದಾಗ: ಅದೊಂದು ದಿನ ಪ್ರಭಾಕರ ಶಿರಸಿ ಮೂಲದ ಮಹಿಳೆಯನ್ನು ಕರೆದುಕೊಂಡು ಮಂಗಳೂರು ಲಾಡ್ಜ್ನೊಳಕ್ಕೆ ಹೋಗುತ್ತಾನೆ. ಇದನ್ನು ಗಮನಿಸಿದ ಷಣ್ಮುಖ ಆತನನ್ನು ಹಿಂಬಾಲಿಸುತ್ತಾನೆ. ಲಾಡ್ಜ್ನೊಳಕ್ಕೆ ಹೋದಾಗ ಅಲ್ಲಿ ಪ್ರಭಾಕರ ಮಹಿಳೆಯೊಂದಿಗೆ ಅನೈತಿಕತೆಯಲ್ಲಿ ತೊಡಗಿರುವುದನ್ನು ಕಂಡು ಕಿಟಕಿಯ ಸಂಧಿಯಲ್ಲಿ ಮೊಬೈಲಿಟ್ಟು ಅಶ್ಲೀಲ ದೃಶ್ಯ ಸೆರೆ ಹಿಡಿಯುತ್ತಾನೆ.
ಮೊಬೈಲ್ನಿಂದ ಹರಿದಾಟ: ಅಣ್ಣನ ಮೊಬೈಲ್ನಲ್ಲಿ ಅಶ್ಲೀಲ ಚಿತ್ರವಿರುವುದನ್ನು ಗಮನಿಸಿದ ಷಣ್ಮುಖನ ಸಹೋದರ ದೇವು ಲಮಾಣಿ ಈ ಕುರಿತು ವಿಚಾರಿಸಿದಾಗ ತನಗೆ ಪ್ರಭಾಕರ ಮೋಸ ಮಾಡಿದ್ದ ಈ ಕಾರಣಕ್ಕೆ ಆತನ ಅನೈತಿಕತೆಯ ಚಿತ್ರ ಸೆರೆ ಹಿಡಿದಿದ್ದಾಗಿ ಷಣ್ಮುಖ ತಿಳಿಸುತ್ತಾನೆ. ಇದನ್ನು ಇಟ್ಟುಕೊಂಡು ಪ್ರಭಾಕರನಿಂದ ಹಣ ಕೇಳಿದರಾಯಿತು ಎನ್ನುತ್ತಾನೆ.
ದೇವು ಲಮಾಣಿ ಈ ಚಿತ್ರವನ್ನು ಬ್ಲೂಟೂತ್ ಮುಖಾಂತರ ತನ್ನ ಮೊಬೈಲಿಗೆ ಕಳುಹಿಸಿಕೊಳ್ಳುತ್ತಾನೆ. ದೇವು ಇಷ್ಟಕ್ಕೆ ಸುಮ್ಮನಾಗಿದ್ದರೆ ಈ ರಾದ್ಧಾಂತ ಮುಂದುವರಿಯುತ್ತಿರಲಿಲ್ಲ. ಅಶ್ಲೀಲ ಚಿತ್ರವನ್ನು ತನ್ನ ಮಿತ್ರರಾದ ವಿನಾಯಕ ಗಾಡಿವಡ್ಡರ, ರಮೇಶ ವಡ್ಡಪಲ್ಲಿ, ಶಮಶುದ್ದೀನ ಎಂಬುವವರ ಮೊಬೈಲ್ಗೆ ಕಳಿಸುತ್ತಾನೆ. ಇದಾದ ಬಳಿಕ ಒಬ್ಬರಿಂದ ಇನ್ನೊಬ್ಬರ ಮೊಬೈಲ್ಗೆ ಈ ಅಶ್ಲೀಲ ಚಿತ್ರ ಹರಿದಾಡಿ ಇಡಿ ಹುಬ್ಬಳ್ಳಿಯಲ್ಲಿ ಸುದ್ದಿಯಾಗಿತ್ತು.
ಆರೋಪಿಗಳು ಸೆರೆಗೆ: ಎಸಿಪಿ ಎ.ಆರ್. ಬಡಿಗೇರ, ವಿದ್ಯಾನಗರ ಇನ್ಸ್ಪೆಕ್ಟರ್ ಗಿರೀಶ ರೋಡಕರ್ ಸ್ವಯಂ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಸೆ. 24ರಂದು ಪ್ರಭಾಕರ ಹಾಗೂ ಷಣ್ಮುಖನನ್ನು ವಶಕ್ಕೆ ತೆಗೆದುಕೊಂಡು ತನಿಖೆಗೆ ಒಳಪಡಿಸಿದಾಗ ನಡೆದ ಎಲ್ಲ ಸಂಗತಿ ಇಬ್ಬರೂ ಬಾಯಿ ಬಿಟ್ಟಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಾದ ಪ್ರಭಾಕರ, ಷಣ್ಮುಖ ಹಾಗೂ ದೇವು ಲಮಾಣಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನಿತರ ಆರೋಪಿತರಾದ ರಮೇಶ, ವಿನಾಯಕ, ಶಮಶುದ್ದೀನಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಊರು ಬಿಟ್ಟ ಮಹಿಳೆ: ತಪ್ಪು ಮಾಡಿದ ಆರೋಪಿತರಿಗೆ ತಕ್ಕಶಾಸ್ತಿಯಾಗಿದ್ದರೂ ಶಿರಸಿಯ ಮಹಿಳೆ ಮಾತ್ರ ಊರು ಬಿಡುವಂತಾಗಿದೆ. ಕುಡುಕ ಗಂಡ, ಇಬ್ಬರು ಮಕ್ಕಳ ಜತೆಗೆ ಕಿತ್ತು ತಿನ್ನುವ ಬಡತನದಿಂದ ಆಕೆ ಅನೈತಿಕತೆಗೆ ಇಳಿದಿದ್ದಳು. ಅನೈತಿಕತೆಯ ಚಿತ್ರ ಮೊಬೈಲ್ನಲ್ಲಿ ಹರಿದಾಡಿದ್ದರಿಂದ ಆಕೆ ಊರಲ್ಲಿ ತಲೆ ಎತ್ತಿ ಓಡಾಡುವುದು ಕಷ್ಟವಾಯಿತು. ಹೀಗಾಗಿ ತಾನಿದ್ದ ಊರನ್ನು ಮಹಿಳೆ ತೊರೆದು ಬಿಟ್ಟಿದ್ದಾಳೆ.
ಗೆಳೆಯರು ಶತ್ರುಗಳಾಗಿ ಕಾದಾಡಿಕೊಂಡು ಮಹಿಳೆಯ ಬದುಕು ಹಾಳು ಮಾಡಿದ್ದಾರೆ. ತಿಳಿದೋ ತಿಳಿಯದೋ ಪಾಪಿಗಳ ಪೈಶಾಚಿಕ ಕೃತ್ಯಕ್ಕೆ ಬಲಿಯಾಗಿರುವ ಮಹಿಳೆಯ ಬಗ್ಗೆ ಕನಿಕರ ವ್ಯಕ್ತಪಡಿಸಬಹುದಷ್ಟೇ. ಆದಾಗ್ಯೂ ಹಣದಾಸೆಗೆ ಅನೈತಿಕತೆಯಂತಹ ಪಾಪ ಕೃತ್ಯಕ್ಕೆ ಇಳಿಯುವ ಹೆಣ್ಣು ಮಕ್ಕಳಿಗೆ ಇದೊಂದು ಪಾಠವೇ ಸರಿ.
-ಪ್ರಕಾಶ ಎಸ್. ಶೇಟ್